ಆರೋಗ್ಯಕರ ಜೀವನಕ್ಕೆ ಸಾವಯವ ಪೂರಕ

ಹಿರೇಕೆರೂರ: ರಾಸಾಯನಿಕ ಗೊಬ್ಬರ ಬಳಕೆಯಿಂದ ಅಹಾರ ಧಾನ್ಯಗಳಲ್ಲಿ ವಿಷ ಪದಾರ್ಥ ಸೇರ್ಪಡೆಯಾಗುತ್ತಿದ್ದು, ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬಳಕೆ ಅನಿವಾರ್ಯವಾಗಿದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ. 4 ಮತ್ತು 5ರಂದು ನಡೆಯಲಿರುವ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಮೇಳದ ನಿಮಿತ್ತ ಗುರುವಾರ ‘ಸಿರಿಧಾನ್ಯಗಳ ನಡಿಗೆ, ಸುಸ್ಥಿರ ಕೃಷಿಯ ಕಡೆಗೆ’ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ದಿನ ಸಾವಯವ ಕೃಷಿ ಪದ್ಧತಿ, ಪೌಷ್ಟಿಕಾಂಶಯುಕ್ತ ಧಾನ್ಯಗಳ ಬಳಕೆ ವಿರಳವಾಗುತ್ತಿದೆ. ಮತ್ತೆ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಲು ಅರಿವು ಮೂಡಿಸಲು ಈ ಮೇಳ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ಮೇಳಕ್ಕೆ ಸಹಸ್ರಾರು ರೈತರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದರು.

ಗುರುಭವನದಲ್ಲಿ ಸಿರಿಧಾನ್ಯಗಳಿಂದ ರಂಗೋಲಿ ಸ್ಪರ್ಧೆ ಜರುಗಿತು. ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿದರು.

ತಹಸೀಲ್ದಾರ್ ಎ.ವಿ. ಶಿಗ್ಗಾಂವಿ, ತಾ.ಪಂ. ಇಒ ಮನೋಹರ ದ್ಯಾಬೇರಿ, ಪ.ಪಂ. ಮುಖ್ಯಾಧಿಕಾರಿ ರಾಜಾರಾಮ್ ಪವಾರ, ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ, ಕೃಷಿ ಅಧಿಕಾರಿಗಳಾದ ನಿಂಗಪ್ಪ ಕಾಕೋಳ, ಪ್ರಶಾಂತ ಕುಸಗೂರ ನಾಗರತ್ನ ಕಾರಿಕಂಟಿ, ಸಹಾಯಕ ಕೃಷಿ ಅಧಿಕಾರಿಗಳಾದ ಎಂ.ವಿ. ಪೂಜಾರ, ಎಂ.ಜಿ. ಹಲಗಿ, ರೈತ ಅನುವುಗಾರರು, ಸಿಬ್ಬಂದಿ ಇದ್ದರು. ತಾಂತ್ರಿಕ ವ್ಯವಸ್ಥಾಪಕ ಮಾರುತಿ ಅಂಗರಗಟ್ಟಿ, ತಾಂತ್ರಿಕ ಅಧಿಕಾರಿ ಶಿಲ್ಪಾ ಗೌಡರ ನಿರ್ವಹಿಸಿದರು.