More

    ಅಂಗಾಂಗ ಕಸಿ ನಿರೀಕ್ಷೆ ಹುಸಿ: ಪ್ರಚಾರ, ದಾನಿಗಳ ಕೊರತೆ, ರೋಗಿಗಳ ತಲುಪದ ಯೋಜನೆ

    ಬೆಂಗಳೂರು: ದುಬಾರಿ ವೆಚ್ಚದ ‘ಅಂಗಾಂಗ ಕಸಿ’ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಕಡಿಮೆ ದರದಲ್ಲಿ ಬಡವರಿಗೂ ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ರಾಜ್ಯ ಅಂಗಾಂಗ ಕಸಿ’ಯೋಜನೆಯು ಮಾಹಿತಿ ಕೊರತೆ, ದಾನಿಗಳ ಕೊರತೆ ಹಾಗೂ ಅಂಗಾಂಗಗಳ ಹೊಂದಾಣಿಕೆ ಸಮಸ್ಯೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ.

    ಈವರೆಗೂ (2019ರ ಜ.2ರಿಂದ ಡಿ.30) ಯೋಜನೆಯಡಿ 12 ಕಿಡ್ನಿ ಕಸಿ ಹಾಗೂ ಮೂರು ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆದಿದೆಯಷ್ಟೆ. ಆದರೆ, ಒಂದೇ ಒಂದು ಲಿವರ್ (ಯಕೃತ್) ಕಸಿಯೂ ನಡೆದಿಲ್ಲ. ಇದರಿಂದ ಯೋಜನೆಗೆ ಸರ್ಕಾರ ಮೀಸಲಿಟ್ಟಿದ್ದ 30 ಕೋಟಿ ರೂ. ಅನುದಾನದಲ್ಲಿ (2019ರ ಜ.2ರಿಂದ ಡಿ. 30ರವರೆಗೆ) 69 ಲಕ್ಷ ರೂ. ಮಾತ್ರ ಬಳಕೆಯಾಗಿದ್ದು, ಕೇವಲ 15 ಮಂದಿ ಉಪಯೋಗ ಪಡೆದಿದ್ದಾರೆ.

    ಕಿಡ್ನಿ ಕಸಿ ಮಾಡುವ ಸಾಮರ್ಥ್ಯ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆಯನ್ನು ಯೋಜನೆಯಡಿ ಕಿಡ್ನಿ ಕಸಿಗೆ ಆಯ್ಕೆ ಮಾಡಲಾಗಿದೆ. ಹೃದಯ ಕಸಿಗೆ ಆಯ್ಕೆಯಾಗಿರುವ ಜಯದೇವ ಆಸ್ಪತ್ರೆಯಲ್ಲಿ ಕಸಿ ನಡೆಸಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಮೂವರಿಗೆ ಯೋಜನೆಯಡಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆದಿದೆ. ಲಿವರ್ ಕಸಿಗಾಗಿ ಆಯ್ಕೆಯಾಗಿದ್ದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆಯಲ್ಲಿ ಯಾವುದೇ ಕಸಿ ನಡೆಸಿಲ್ಲ.

    ಬೋನ್ ಮ್ಯಾರೋ ಕಸಿ

    ಈ ಮೊದಲು ಹೃದಯ, ಯಕೃತ್ ಮತ್ತು ಕಿಡ್ನಿ ಕಸಿಗಷ್ಟೇ ಸೀಮಿತವಾಗಿದ್ದ ‘ಅಂಗಾಂಗ ಕಸಿ ಯೋಜನೆ’ಯಲ್ಲಿ ಇದೀಗ ಬೋನ್ ಮ್ಯಾರೋ, ಶ್ವಾಸಕೋಶ, ಪ್ಯಾಂಕ್ರಿಯಾಸ್, ಬಹುಅಂಗಾಂಗ ಕಸಿ ಮತ್ತು ಅಸ್ತಿಮಜ್ಜೆ ಕಸಿ ಚಿಕಿತ್ಸೆಯನ್ನೂ ಸೇರಿಸುವಂತೆ ದರ ನಿಗದಿಪಡಿಸಿ ಸರ್ಕಾರಕ್ಕೆ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಅನುಮೋದನೆ ದೊರೆತ ಕೂಡಲೇ ಸೇವೆ ಆರಂಭವಾಗಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

    ಅಂಗಾಂಗ ಕಸಿ ಯೋಜನೆಯಡಿ 12, ಮುಖ್ಯಮಂತ್ರಿಗಳ ಕಿಡ್ನಿ ಸುರಕ್ಷಾ ಯೋಜನೆಯಡಿ 16 ಸೇರಿ ಒಟ್ಟು 28 ಮಂದಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗಿದೆ.

    | ಡಾ. ಆರ್.ಕೇಶವಮೂರ್ತಿ ನಿರ್ದೇಶಕ, ನೆಫ್ರೋ ಯುರಾಲಜಿ ಸಂಸ್ಥೆ

    ಸರ್ಕಾರ ಭರಿಸುವ ವೆಚ್ಚ

    ಬೋನ್ ಮ್ಯಾರೋ ಕಸಿಗೆ ದಾನಿಯಿಂದ ಪಡೆದರೆ(ಆಲೋಜೆನಿಕ್)20 ಲಕ್ಷ ರೂ., ರೋಗಿಯಿಂದ ಪಡೆದರೆ (ಆಟೊಲೋಗಸ್) 7 ಲಕ್ಷ ರೂ., ಪ್ಯಾಂಕ್ರಿಯಾಸ್​ಗೆ 15 ಲಕ್ಷ, ಶ್ವಾಸಕೋಶಕ್ಕೆ 15 ಲಕ್ಷ, ಲಿವರ್​ಗೆ 13 ಲಕ್ಷ, ಹೃದಯ ಕಸಿಗೆ 12 ಲಕ್ಷ, ಕಿಡ್ನಿಗೆ 3 ಲಕ್ಷ ರೂ.ಗಳನ್ನು ಸರ್ಕಾರ ಭರಿಸಲಿದೆ. ಬಹುಅಂಗಾಂಗ ಕಸಿಯಲ್ಲಿ ಒಂದಕ್ಕೆ ಪೂರ್ಣ ವೆಚ್ಚ, ಇನ್ನೊಂದಕ್ಕೆ ಶೇ.50 ದರ ಭರಿಸಲಾಗುತ್ತದೆ. ಉದಾಹರಣೆಗೆ ಹೃದಯಕ್ಕೆ 12 ಲಕ್ಷ ರೂ.(ಪೂರ್ತಿ ವೆಚ್ಚ) ಮತ್ತು ಶ್ವಾಸಕೋಶಕ್ಕೆ 7.5 ಲಕ್ಷ (ಶೇ.50 ದರ). ಕಿಡ್ನಿಗೆ 3ಲಕ್ಷ ಮತ್ತು ಪ್ಯಾಂಕ್ರಿಯಾಸ್​ಗೆ ಶೇ.50. ಪ್ಯಾಂಕ್ರಿಯಾಸ್​ಗೆ 15 ಲಕ್ಷ ಮತ್ತು ಲಿವರ್ ಕಸಿಗೆ ಶೇ.50 ವೆಚ್ಚ ಭರಿಸಲಾಗá-ವುದು.

    ರಾಜ್ಯ ಅಂಗಾಂಗ ಕಸಿ ಯೋಜನೆಯಲ್ಲಿ ಬಡವರಿಗೆ ಸಂಪೂರ್ಣ ಸೌಲಭ್ಯ ದೊರೆಯುವಂತಾಗಬೇಕು. ಯೋಜನೆ ಕುರಿತು ಹೆಚ್ಚು ಪ್ರಚಾರದ ಅಗತ್ಯವಿದೆ.

    | ಡಾ. ಸಿ.ಎನ್.ಮಂಜುನಾಥ್ ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

    ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಲಿವರ್ ಕಸಿ ನಡೆಸಲಾಗಿಲ್ಲ. ಸಂಸ್ಥೆಯು ಸದ್ಯದಲ್ಲೇ ಸ್ವಾಯತ್ತತೆ ಹೊಂದಲಿದ್ದು, ಅಗತ್ಯ ತಜ್ಞರು, ಸಿಬ್ಬಂದಿ, ಮೂಲಸೌಕರ್ಯದೊಂದಿಗೆ ಸಜ್ಜುಗೊಳ್ಳಲಿದೆ.

    | ಡಾ. ಎನ್.ಎಸ್.ನಾಗೇಶ್, ಮುಖ್ಯಸ್ಥ, ಪಿಎಂಎಸ್​ಎಸ್​ವೈ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ

    ಖಾಸಗಿ ಆಸ್ಪತ್ರೆಯಲ್ಲಿ ಯೋಜನೆಯಡಿ ಚಿಕಿತ್ಸೆ ನೀಡಲು ಹೆಚ್ಚಿನ ದರದ ಬೇಡಿಕೆ ಇಟ್ಟಿದ್ದು, ಸರ್ಕಾರದ ಮಟ್ಟದಲ್ಲಿ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯುತ್ತಿದೆ.

    | ಬಿ. ಮಂಜುನಾಥ್ ನಿರ್ದೇಶಕ, ವೈದ್ಯಕೀಯ ನಿರ್ವಹಣೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್

    | ಪಂಕಜ ಕೆ.ಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts