ಅಂಗಾಂಗ ದಾನ ಪ್ರಕ್ರಿಯೆ ಸುಲಭ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಜಿಲ್ಲೆಗಳ ನಂತರ ಜೀವ ಸಾರ್ಥಕತೆ ಸಮಿತಿ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಮೂಲಕ ಕಾರ್ಯಾರಂಭಕ್ಕೆ ಸಿದ್ಧವಾಗಿದ್ದು, ತಂಡಕ್ಕೆ ಈಗಾಗಲೇ ತರಬೇತಿ ನೀಡಲಾಗಿದೆ.

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಗದಾನ ಪ್ರಕ್ರಿಯೆಯನ್ನು ಇದು ಇನ್ನಷ್ಟು ಸುಲಭಗೊಳಿಸಲಿದೆ. ಬೆಂಗಳೂರಿನಿಂದ ವೈದ್ಯರು ಬರಬೇಕಾಗಿಲ್ಲ, ಇಲ್ಲೇ ಮೆದುಳು ನಿಷ್ಕ್ರಿಯ ಘೋಷಣೆ ಮಾಡಿ ತ್ವರಿತವಾಗಿ ಅಂಗಾಗವನ್ನು ದಾನ ಮಾಡಬಹುದು. ವೆನ್ಲಾಕ್ ಆಸ್ಪತ್ರೆಯಲ್ಲಿ ಇಬ್ಬರು ಜಿಲ್ಲಾ ಸಂಯೋಜಕರನ್ನು ನೇಮಿಸಲಾಗಿದೆ. ಮೆದುಳು ನಿಷ್ಕ್ರಿಯ ಪ್ರಮಾಣಪತ್ರ ನೀಡಲು ಬೇಕಾದ ಪರವಾನಗಿಯನ್ನು ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ.

ಅಂಗಾಗ ದಾನವನ್ನು ಕಾನೂನು ಚೌಕಟ್ಟಿನಲ್ಲಿ ತರಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೆನಲ್ ಕೋ-ಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟಾನ್ಸ್‌ಪ್ಲಾಂಟೇಶನ್ (ಜೆಡ್‌ಸಿಸಿಕೆ)ಯನ್ನು ರಾಜ್ಯ ಸರ್ಕಾರ 2017ರಲ್ಲಿ ಜೀವ ಸಾರ್ಥಕತೆ ಎಂದು ಮರು ನಾಮಕರಣ ಮಾಡಿತ್ತು. ಅದರಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ಅದರ ಉಪಸಮಿತಿ ರಚನೆಗೊಂಡಿದೆ. ವೆನ್ಲಾಕ್‌ನಲ್ಲಿ ವರ್ಷದಲ್ಲಿ ಸುಮಾರು 200 ಮಂದಿ ಮಿದುಳು ನಿಷ್ಕ್ರಿಯಗೊಂಡು ಸಾವಿಗೀಡಾಗುತ್ತಿದ್ದಾರೆ. ಇಂತಹವರಿಗಾಗಿಯೇ ಆರಂಭವಾಗಿರುವ ಜೀವ ಸಾರ್ಥಕತೆ ಸಮಿತಿಯ ಕಾರ್ಯಾರಂಭ ಹಲವು ರೋಗಿಗಳ ಪಾಲಿಗೆ ಆಶಾಕಿರಣವಾಗವಾಲಿದೆ.

ಸಮಿತಿಯಿಂದ ಕೌನ್ಸೆಲಿಂಗ್:  ಓರ್ವ ಮೆದುಳು ನಿಷ್ಕ್ರಿಯ ವ್ಯಕ್ತಿ ಅಂಗಾಂಗ ದಾನ ಮಾಡುವುದರಿಂದ ಐದರಿಂದ ಎಂಟು ಮಂದಿಯ ಜೀವ ಉಳಿಸಲು ಸಾಧ್ಯವಿದೆ. ಅಂಗಾಗ ದಾನಕ್ಕೂ ಮೊದಲು ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯ ಎಂದು ಘೋಷಣೆಯಾಗಬೇಕು. ಬಳಿಕ ಜೀವ ಸಾರ್ಥಕತೆ ಸಮಿತಿಗೆ ಮಾಹಿತಿ ನೀಡಬೇಕು. ಮೃತ ವ್ಯಕ್ತಿ ಅಂಗಾಗ ದಾನಕ್ಕೆ ನೋಂದಣಿಯಾಗಿರದಿದ್ದಲ್ಲಿ ಸ್ಥಳದಲ್ಲಿಯೇ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ನಡೆಸಿ ಅಂಗಾಗ ದಾನದ ಕುರಿತು ತಿಳಿಸುವ ಪ್ರಯತ್ನ ಜೀವ ಸಾರ್ಥಕತೆ ತಂಡ ಮಾಡುತ್ತದೆ.

ಕಾನೂನಾತ್ಮಕ ಪ್ರಕ್ರಿಯೆ:  ಮೆದುಳು ನಿಷ್ಕ್ರಿಯ ಘೋಷಣೆ ಸರ್ಕಾರದಿಂದ ಪರವಾನಗಿ ಪಡೆದ ಉಭಯ ಜಿಲ್ಲೆಗಳ 9 ಆಸ್ಪತ್ರೆಗಳಲ್ಲಿ ಮಾಡಲಾಗುತ್ತದೆ. ಎ.ಜೆ ಆಸ್ಪತ್ರೆ, ಯೇನೆಪೋಯ ಕೊಡಿಯಾಲ್‌ಬೈಲ್ ಮತ್ತು ದೇರಳಕಟ್ಟೆ, ಕೆ.ಎಸ್.ಹೆಗ್ಡೆ, ಮಣಿಪಾಲ ಕೆಎಂಸಿ, ಮಂಗಳೂರು ಕೆಎಂಸಿ, ಇಂಡಿಯಾನಾ, ಫಾ.ಮುಲ್ಲರ್, ಯುನಿಟಿ ಆಸ್ಪತೆಗಳಿಗೆ ಪರವಾನಗಿಯಿದೆ. ಆಸ್ಪತ್ರೆಗಳಲ್ಲಿ ಮೆದುಳು ನಿಷ್ಕ್ರಿಯತೆ ಘೋಷಣೆಯಾದ ಬಳಿಕ ಜೀವ ಸಾರ್ಥಕತೆ ತಂಡ ಅಂಗಾಗದಾನ ಕುರಿತಾದ ಕಾನೂನಾತ್ಮಕ ಪ್ರಕ್ರಿಯೆ ನಡೆಸುತ್ತದೆ.

ಮೆದುಳು ನಿಷ್ಕ್ರಿಯವಾದ ರೋಗಿಗಳ ಕಡೆಯವರನ್ನು ಕೌನ್ಸೆಲಿಂಗ್ ಮಾಡಿ ಅಂಗಾಗದಾನ ಮಾಡಿಸುವುದಕ್ಕೆ ಪ್ರೇರೇಪಿಸುವುದು ಜೀವ ಸಾರ್ಥಕತೆ ಸಮಿತಿಯ ಕೆಲಸ. ಅವರಿಗೆ ಬೇಕಾದ ತರಬೇತಿ ಈಗಾಗಲೇ ನೀಡಲಾಗಿದೆ.
– ಡಾ.ರಾಜೇಶ್ವರಿ ದೇವಿ, ವೆನ್ಲಾಕ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ

Leave a Reply

Your email address will not be published. Required fields are marked *