ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಸಾಧ್ಯವಿದೆಯೇ?

| ಕೆ. ರಾಘವ ಶರ್ಮ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ವಿಚಾರಣೆಗೆ 2019ರ ಜನವರಿಯಲ್ಲಿ ದಿನಾಂಕ ನಿಗದಿ ಮಾಡುತ್ತೇವೆಂದು ವಿಚಾರಣೆ ಮುಂದಕ್ಕೆ ಹಾಕಿರುವ ಸುಪ್ರೀಂಕೋರ್ಟ್ ತೀರ್ಮಾನ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆಶಯವನ್ನು ಹುಸಿ ಮಾಡಿದೆ. ಅಕ್ಟೋಬರ್ 29ರಿಂದ ವಿಚಾರಣೆ ಆರಂಭಿಸಬೇಕು ಎಂದು ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ನೀಡಿತ್ತಾದರೂ, ‘ನಮ್ಮ ಆದ್ಯತೆಗಳು ಬೇರೆಯೇ ಇವೆ’ ಎಂದ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, ದೀಪಾವಳಿ ನಂತರ ವಿಚಾರಣೆ ಆರಂಭಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಬೇಡಿಕೆಯನ್ನು ತಳ್ಳಿಹಾಕಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಲೆನೋವು ಹೆಚ್ಚಿಸಿರುವುದು ಸುಳ್ಳಲ್ಲ. ಏತನ್ಮಧ್ಯೆ, ಸುಗ್ರೀವಾಜ್ಞೆಗೆ ಆಗ್ರಹಿಸುತ್ತಿರುವ ವಿಶ್ವ ಹಿಂದು ಪರಿಷತ್, ಸಾಧು-ಸಂತರು, ಸನ್ಯಾಸಿಗಳನ್ನು ಸಮಾಧಾನಪಡಿಸುವ ಅನಿವಾರ್ಯತೆಗೂ ಕೇಂದ್ರ ನಾಯಕರು ಸಿಲುಕಿದ್ದಾರೆ.

ಸುಗ್ರೀವಾಜ್ಞೆ ಕಷ್ಟಕರ

ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅ.18ರಂದು ನೀಡಿದ ಹೇಳಿಕೆ ಬೆಂಬಲಿಸಿ ಮಂದಿರ ಚಳವಳಿಯಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದ ಸಾಧು-ಸಂತರು ಸುಗ್ರೀವಾಜ್ಞೆಗೆ ಆಗ್ರಹಿಸಿದ್ದಾರೆ. ಆದರೆ, ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ, ಪ್ರತ್ಯೇಕ ಸುಗ್ರೀವಾಜ್ಞೆ ತರುವ ಅಧಿಕಾರ ಇದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯೂ ಇದೆ. ವಾಸ್ತವದಲ್ಲಿ, ‘ಕೇಸು ಇತ್ಯರ್ಥಗೊಳ್ಳುವ ಮುನ್ನ ಯಾವುದೇ ಕಾನೂನು ತರುವ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ. ಒಂದುವೇಳೆ, ಕಾನೂನು ಅಥವಾ ಸುಗ್ರೀವಾಜ್ಞೆಗೆ ಪ್ರಯತ್ನಪಟ್ಟರೂ ಸರ್ಕಾರ ಮತ್ತೊಂದು ಸುತ್ತಿನ ಕಾನೂನಾತ್ಮಕ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವ ಅಪಾಯವಿದೆ’ ಎನ್ನುತ್ತಾರೆ ಕಾನೂನು ತಜ್ಞರು.

ಪ್ರಕರಣ ಏನಿತ್ತು?

ಬಾಬರಿ ಕಟ್ಟಡವನ್ನು ಅಯೋಧ್ಯೆಯಲ್ಲಿರುವ ಭಗವಾನ್ ಶ್ರೀರಾಮನ ಜನ್ಮಸ್ಥಾನದಲ್ಲಿ ನಿರ್ವಿುಸಲಾಗಿದೆ ಎಂದು 1992ರಲ್ಲಿ ವಿವಾದಿತ ಕಟ್ಟಡವನ್ನು ಕೆಡವಿ ಹಾಕಲಾಯಿತು. ಇದು ಇಡೀ ದೇಶದಲ್ಲೇ ಕೋಲಾಹಲ ಸೃಷ್ಟಿಸಿತು. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರಿಂದ ಬಿಜೆಪಿಯ ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರ ಪತನಗೊಂಡಿತು. ಕೆಲ ತಿಂಗಳು ಬಳಿಕ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ವಿವಾದಿತ ಪ್ರದೇಶದ ಸುತ್ತಮುತ್ತಲಿನ 66.7 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತು. ಇದರಲ್ಲಿ ರಾಮ ಜನ್ಮಭೂಮಿಯ 2.7 ಎಕರೆ ಭೂಮಿಯೂ ಇತ್ತು. ಕೇಂದ್ರದ ಸುಗ್ರೀವಾಜ್ಞೆ ಕಾನೂನಾದ ಬಳಿಕ ಇದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಯಿತು. 1994ರಲ್ಲಿ ಇಸ್ಮಾಯಿಲ್ ಫರೂಕಿ ಪ್ರಕರಣದ ತೀರ್ಪಿನಲ್ಲಿ ಕೇಂದ್ರ ಸರ್ಕಾರದ ಕಾನೂನನ್ನು ಎತ್ತಿಹಿಡಿಯಲಾಯಿತು. ಈ ತೀರ್ಪಿನಲ್ಲಿ, ಮಸೀದಿಯು ಮುಸ್ಲಿಮರ ಅವಿಭಾಜ್ಯ ಅಂಗ ಅಲ್ಲ ಎಂದೂ ಹೇಳಲಾಗಿತ್ತು. ಈ ತೀರ್ಪನ್ನು ಮರುಪರಿಶೀಲಿಸಿದ ಮಾಜಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, 1994 ತೀರ್ಪನ್ನೇ ಪುರಸ್ಕರಿಸಿತು. ಆದರೆ, ಈ ತೀರ್ಪಿನ ಅಭಿಪ್ರಾಯಗಳು ಮೂಲ ಪ್ರಕರಣದ ಮೇಲೆ ಯಾವುದೇ ಪ್ರಭಾವ ಬೀರದು ಎಂದೂ ಸ್ಪಷ್ಟಪಡಿಸಲಾಯಿತು.

ಅಲಹಾಬಾದ್ ಹೈಕೋರ್ಟ್ ತೀರ್ಪೆನಿತ್ತು?

2010ರಲ್ಲಿ ನ್ಯಾ. ಎಸ್.ಯು. ಖಾನ್, ನ್ಯಾ. ಸುಧೀರ್ ಅಗರ್​ವಾಲ್, ನ್ಯಾ. ಡಿ.ವಿ. ಶರ್ಮ ಒಳಗೊಂಡ ಅಲಹಾಬಾದ್ ಹೈಕೋರ್ಟ್​ನ ತ್ರಿಸದಸ್ಯ ಪೀಠವು ‘ರಾಮಲಲ್ಲಾನ ಮೂರ್ತಿ ಇರುವ ಪ್ರದೇಶವು ರಾಮಲಲ್ಲಾ ವಿರಾಜ್ಮಾನ್ ಸಂಸ್ಥೆಗೆ, ಸೀತಾ ರಸೋಯ್ ಮತ್ತು ರಾಮ್ ಚಬುತಾರಾ ಇರುವ ಪ್ರದೇಶವು ನಿಮೋಹಿ ಅಖಾರಕ್ಕೆ ಹಾಗೂ ಉಳಿದ ಭಾಗವು ಸುನ್ನಿ ವಕ್ಪ್ ಮಂಡಳಿಗೆ ಸೇರಬೇಕು’ ಎಂದು ಅಯೋಧ್ಯೆಯ ವಿವಾದಿತ 2.7 ಎಕರೆ ಭೂಮಿಯನ್ನು ಹಂಚಿಕೆ ಮಾಡಿ ತೀರ್ಪು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ, ಪ್ರಕರಣದ ಮೂವರು ಭಾಗಿದಾರರೂ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ಸಲ್ಲಿಕೆಯಾಗಿ 8 ವರ್ಷ ನಂತರ ವಿಚಾರಣೆಯ ಸಂಕೇತ ಸಿಕ್ಕಿದೆ!

ತೀರ್ಪಿಗೆ ಕಾಯುವುದು ಅನಿವಾರ್ಯ

ಅಯೋಧ್ಯೆ ಜಮೀನು ವಿವಾದ ಪ್ರಕರಣ ಅಲಹಾಬಾದ್ ಹೈಕೋರ್ಟ್​ನಲ್ಲಿದ್ದಾಗ ರಾಮಲಲ್ಲಾ ವಿರಾಜ್​ವಾನ್ ಪರ ವಾದಿಸಿದ್ದ ಹಿರಿಯ ವಕೀಲ ಕೆ.ಎನ್. ಭಟ್, ‘ಸುಗ್ರೀವಾಜ್ಞೆ ದೂರದ ಮಾತು. ಈ ಬೇಡಿಕೆಯಲ್ಲಿ ತರ್ಕವೇ ಇಲ್ಲ. ನಾನು ಭಗವಾನ್ ಶ್ರೀರಾಮ ಮಂದಿರದ ಪರವಾಗಿ ವಾದಿಸಿದವನು ಮತ್ತು ಪ್ರಕರಣದ ಆಳ-ಅಗಲ ತಿಳಿದುಕೊಂಡೇ ಇದನ್ನು ಹೇಳುತ್ತಿದ್ದೇನೆ. ಸುಪ್ರೀಂಕೋರ್ಟ್ ತೀರ್ಪಿಗೆ ನಾವು ಕಾಯಲೇಬೇಕು’ ಎಂದು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪೇಜಾವರ ಶ್ರೀ ಒತ್ತಾಯ

ಮಂದಿರ ನಿರ್ವಿುಸುವ ಸಲುವಾಗಿ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಾಯಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ದನಿಗೂಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ‘ಮಂದಿರ ನಿರ್ವಣಕ್ಕೆ ಅಡ್ಡಿಯಾದಲ್ಲಿ ನಾನು ಉಪವಾಸ ಕೂರುವುದು ಖಚಿತ. ಸುಪ್ರೀಂಕೋರ್ಟ್ ನಲ್ಲಿ ಕೇಸು ಇತ್ಯರ್ಥ ವಿಳಂಬವಾಗುತ್ತಲೇ ಇದೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರವಷ್ಟೇ ಈಡೇರಿಸಬಲ್ಲದು. ಕೇಂದ್ರ ರೂಪಿಸುವ ಕಾನೂನಿಗೆ ಲೋಕಸಭೆ ಮತ್ತು ರಾಜ್ಯಸಭೆ ಅನುಮೋದನೆ ಪಡೆದುಕೊಳ್ಳಬೇಕು ಮತ್ತು 2019ರೊಳಗೆ ಮಂದಿರ ನಿರ್ವಣವಾಗಲೇಬೇಕು. ರಾಜಕೀಯ ನಾಯಕರ ಮನವರಿಕೆ ಮಾಡಲು ನಾವೂ ಪ್ರಯತ್ನಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ಸಿದ್ಧನಿದ್ದೇನೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಅಲ್ಲಿ ಮಂದಿರ ನಿರ್ವಣದ ಬಗ್ಗೆ ಸಭೆ ನಡೆಸಲಿದ್ದೇವೆ’ ಎಂದಿದ್ದಾರೆ.

ಜನವರಿ 31ಕ್ಕೆ ಧರ್ಮ ಸಂಸದ್

2019ರ ಜನವರಿ 31ರಂದು ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ 500ಕ್ಕೂ ಹೆಚ್ಚು ಪ್ರಮುಖ ಧರ್ವಚಾರ್ಯರ ಸಮ್ಮುಖದಲ್ಲಿ ರಾಮ ಮಂದಿರ ನಿರ್ವಣದ ಕುರಿತು ‘ರ್ಮ ಸಂಸದ್’ ಏರ್ಪಡಿಸಲು ವಿಶ್ವ ಹಿಂದು ಪರಿಷತ್ ನಿರ್ಧರಿಸಿದೆ. ದೇಶದ ವಿವಿಧ ಭಾಗಗಳ ಸಂತರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಒಂದುವೇಳೆ ಕೇಂದ್ರ ಸರ್ಕಾರ ಮಂದಿರದ ಪರವಾಗಿ ಯಾವುದೇ ಶಾಸನ ರೂಪಿಸದಿದ್ದಲ್ಲಿ, ವಿಹಿಂಪ ಮತ್ತು ಸಂತರ ಮುಂದಿನ ಹೋರಾಟದ ಹಾದಿ ಹೇಗಿರಬೇಕು ಎಂಬ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗುವುದು ಎಂದು ವಿಹಿಂಪದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಡಿಸೆಂಬರ್​ನಲ್ಲಿ ವಿಹಿಂಪ ಸದಸ್ಯರು ದೇಶದೆಲ್ಲೆಡೆ ‘ಆಧ್ಯಾತ್ಮಿಕ ಪ್ರಚಾರ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಬಿಜೆಪಿ ಸಂಸ ದರನ್ನು ಭೇಟಿ ಮಾಡಿ ಮಂದಿರ ನಿರ್ವಣಕ್ಕಾಗಿ ಒತ್ತಾಯಿಸಲಿದ್ದಾರೆ.

ರಾಮ ಮಂದಿರ ವಿಚಾರದಲ್ಲಿ ಬಹುಸಂಖ್ಯಾತರ ಭಾವನೆಯನ್ನು ಗೌರವಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿದೆ ಮತ್ತು ಹಲವು ವರ್ಷಗಳಿಂದ ಪ್ರಕರಣ ಅಲ್ಲೇ ಉಳಿದುಕೊಂಡಿರುವುದು ಅನೇಕರಿಗೆ ಬೇಸರ ತಂದಿದೆ. ಸಾಧು, ಸಂತರು, ಸನ್ಯಾಸಿಗಳು ಮಂದಿರ ನಿರ್ವಣಕ್ಕೆ ಸುಗ್ರೀವಾಜ್ಞೆ ತರಬೇಕು ಎನ್ನುತ್ತಿರುವುದನ್ನು ನಾನು ವಿರೋಧಿಸಲಾರೆ.

| ಉಮಾ ಭಾರತಿ, ಕೇಂದ್ರ ಸಚಿವೆ

 

ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದವರು 

  • ಹೈಕೋರ್ಟ್ ತೀರ್ಪು ಪ್ರಶ್ನಿಸಿ ಒಟ್ಟು 14 ಅರ್ಜಿಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಕೆಯಾಗಿವೆ. 
  • ಹಿಂದು ಮಹಾಸಭಾ, ನಿಮೋಹಿ ಅಖಾಡ, ಸುನ್ನಿ ವಕ್ಪ್ ಮಂಡಳಿ ಸೇರಿ ಅನೇಕ ಹಿಂದುಪರ ಹಾಗೂ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿವೆ.