ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಜನರ ಆತ್ಮಹತ್ಯೆಗೆ ಕಾರಣವಾದ ‘ಸಾಲ ವಸೂಲಿ ಕಿರುಕುಳ’ಕ್ಕೆ ಕೊನೆಗೂ ಒಂದು ರ್ತಾಕ ಅಂತ್ಯ ಸಿಕ್ಕಂತಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಿ ಮಾಡುವ ನೆಪದಲ್ಲಿ, ಸಾಲ ಪಡೆದವರಿಗೆ ನೀಡುತ್ತಿದ್ದ ಕಿರುಕುಳವನ್ನು ತಡೆಯಲು ರಾಜ್ಯ ಸರ್ಕಾರ
ರೂಪಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಬುಧವಾರ ಅಂಕಿತ ಹಾಕಿದ್ದಾರೆ. ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ಎಂಬ ಶೀರ್ಷಿಕೆಯ ಈ ಸುಗ್ರೀವಾಜ್ಞೆಯು ಸಾಲ ವಸೂಲಿಗೆ ಮೈಕ್ರೋ ಫೈನಾನ್ಸ್ಗಳು ಅನುಸರಿಸುತ್ತಿದ್ದ ನಿಯಮಬಾಹಿರ ಕ್ರಮಗಳಿಗೆ ಮತ್ತು ಕಿರುಕುಳಕ್ಕೆ ಈ ಸುಗ್ರೀವಾಜ್ಞೆ ಅಂತ್ಯ ಹಾಡುತ್ತದೆ, ಬಡ ಸಾಲಗಾರರ ಆತ್ಮಹತ್ಯಾ ಸರಣಿ ಇಲ್ಲಿಗೆ ನಿಲ್ಲುತ್ತದೆ ಎಂಬ ವಿಶ್ವಾಸ ಈಗ ಮೂಡಿದೆ. ಇದೇ ವೇಳೆ, ಸಾಲ ಪಡೆದವರಿಗೆ ತೊಂದರೆ ಕೊಡದೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರವೇ ಬಡ್ಡಿ ತೆಗೆದು ಕೊಳ್ಳುವವರಿಗೆ ಇದರಿಂದ ಯಾವ ತೊಂದರೆಯೂ ಆಗುವುದಿಲ್ಲ ಎಂಬ ನಂಬಿಕೆ ಯನ್ನೂ ರಾಜ್ಯ ಸರ್ಕಾರ ಹೊಂದಿದೆ. ವಸೂಲಿ ನೆಪದಲ್ಲಿ ದೈಹಿಕ ಹಿಂಸೆ ಮಾಡುವುದು, ಸುತ್ತಮುತ್ತಲಿನ ನಿವಾಸಿಗಳ ಎದುರು ಅವಮಾನ ಮಾಡುವುದು, ಮನೆಗಳ ಮೇಲೆ ಸಾಲದ ವಿವರವನ್ನು ಬರೆಯುವುದು, ಪದೇಪದೆ ಭೇಟಿ ನೀಡುವ ಮೂಲಕ ಮನೆಯನ್ನೇ ಬಿಟ್ಟುಹೋಗುವಂತೆ ಮಾಡುವುದು- ಇಂತಹ ಎಲ್ಲ ಅಪಸವ್ಯಗಳು ಅಂತ್ಯವಾದರೆ ಈ ಸುಗ್ರೀವಾಜ್ಞೆ ಹೊರಡಿಸಿದ್ದು ಸಾರ್ಥಕವಾಗುತ್ತದೆ.
ಸುಗ್ರೀವಾಜ್ಞೆ ಅನ್ವಯ ಇನ್ನು ಮುಂದೆ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳದೆ ಸಾಲ ನೀಡಿಕೆ ಏಜೆನ್ಸಿಗಳು ಸಾಲ ನೀಡುವಂತಿಲ್ಲ, ವಸೂಲಿಯನ್ನೂ ಮಾಡುವಂತಿಲ್ಲ. ಮಾಡಿದರೆ ನೋಂದಣಿಯೇ ರದ್ದಾಗುತ್ತದೆ. ವಸೂಲಿ ಮಾಡುವ ಕ್ರಮಗಳ ಕುರಿತೂ ಸುಗ್ರೀವಾಜ್ಞೆಯಲ್ಲಿ ಸ್ಪಷ್ಟ ಅಂಶಗಳನ್ನು ನಮೂದಿಸಲಾಗಿದೆ. ಸಾಲಗಾರರ ಆಸ್ತಿಯನ್ನು ಕಸಿದುಕೊಳ್ಳುವಂತಿಲ್ಲ. ಮನೆಗೆ ಅಥವಾ ವ್ಯವಹಾರದ ಸ್ಥಳಕ್ಕೆ ಹೋಗುವಂತಿಲ್ಲ. ವಸೂಲಿಗೆ ಹೊರಗಿನ ಸಂಸ್ಥೆಗಳನ್ನು ನಿಯೋಜಿಸುವಂತಿಲ್ಲ. ರೌಡಿಗಳನ್ನು ಕಳಿಸಿ ಹೆದರಿಸುವಂತಿಲ್ಲ. ಹೀಗೆ ಹಲವು ಅಂಶಗಳು ಸುಗ್ರೀವಾಜ್ಞೆಯಲ್ಲಿವೆ. ಇವೆಲ್ಲವೂ ಸಮ್ಮತವೇ.
ಆದರೆ, ಈ ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಜತೆಗೆ ರಾಜ್ಯಪಾಲರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದು, ಅವುಗಳ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ರ್ಚಚಿಸಬೇಕೆಂಬ ಸಲಹೆಯನ್ನೂ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸುಗ್ರೀವಾಜ್ಞೆಯನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಯಮಬದ್ಧವಾಗಿ ಲೈಸೆನ್ಸ್ ಪಡೆದು ಲೇವಾದೇವಿ ವ್ಯವಹಾರ ನಡೆಸುವ ಸಂಸ್ಥೆಗಳಿಗೇ ಈ ಸುಗ್ರೀವಾಜ್ಞೆಯ ತಪ್ಪು ವ್ಯಾಖ್ಯಾನದಿಂದ ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ. ಈ ಸಂಸ್ಥೆಗಳಿಗೆ ಬ್ಯಾಂಕ್ಗಳಿಂದ ಸಿಗುವ ಹಣಕಾಸಿನ ನೆರವು ಕೂಡ ಕಡಿಮೆಯಾಬಹುದು. ಸಾಲ ಕೊಟ್ಟವರು ನ್ಯಾಯಾಲಯದ ಮೊರೆ ಹೋಗಬಾರದೆಂದು ಸುಗ್ರೀವಾಜ್ಞೆಯಲ್ಲಿ ಹೇಳಿರುವುದು ಕೂಡ ಪ್ರಶ್ನಾರ್ಹವಾಗಿದೆ. ಇದು ಹಣ ಕೊಟ್ಟ ವ್ಯಕ್ತಿಯ ಸಂವಿಧಾನ ಬದ್ಧ ಹಕ್ಕನ್ನೇ ಕಸಿದುಕೊಂಡಂತೆ ಆಗುವುದಿಲ್ಲವೇ? ಈ ಬಗ್ಗೆ ಸರ್ಕಾರ ಮರುಚಿಂತನೆ ನಡೆಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಬಡವರಿಗೆ ಸಿಗುತ್ತಿದ್ದ ಸಾಲವೂ ಸಿಗದಂತಾಗುತ್ತದೆ. ಅವರ ದೈನಂದಿನ ಆರ್ಥಿಕ ಚಟುವಟಿಕೆಯೇ ಕುಂಠಿತವಾಗಿ ಬದುಕಿನ ಮಾರ್ಗವೂ ಮುಚ್ಚಿದಂತಾಗುತ್ತದೆ. ಸಾಲ ನೀಡುವವರ ಮೇಲಿನ ಕಠಿಣ ಪ್ರಹಾರದಿಂದ ಸಾಲಗಾರರಿಗೆ ಸಮಸ್ಯೆ ಆಗಬಾರದು. ಸಹಾಯ ಮಾಡಲು ಹೋಗಿ ಸಮಸ್ಯೆ ತಂದೊಡ್ಡುವಂತಾಗಬಾರದು. ಈ ಬಗ್ಗೆಯೂ ಸರ್ಕಾರ ಗಮನ ಹರಿಸುವುದು ಒಳ್ಳೆಯದು.