ಬೆಂಗಳೂರು: ಕಿರು ಸಾಲ ವಸೂಲಿಗೆ ಅಂಕುಶ ಹಾಕಲು ಸರ್ಕಾರ ತಂದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಎತ್ತಿದ್ದ ಆಕ್ಷೇಪಣೆಗಳಿಗೆ ಸರ್ಕಾರ ಸಮಜಾಯಿಷಿ ನೀಡಿ ಅಂಕಿತಕ್ಕಾಗಿ ರಾಜಭವನಕ್ಕೆ ಕಳುಹಿಸಿದೆ. ಈ ಮೂಲಕ ಮತ್ತೊಂದು ಸುತ್ತಿನ ಜಗ್ಗಾಟ ಆರಂಭವಾದಂತಾಗಿದೆ.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿರದ ಕಾರಣಕ್ಕೆ ಸರ್ಕಾರ ಸುಗ್ರೀವಾಜ್ಞೆಗೆ ಮೊರೆಹೋಗಿದ್ದು, ರಾಜ್ಯಪಾಲರು ಸಹಿ ಹಾಕಿದಲ್ಲಿ ತಕ್ಷಣವೇ ಕಾನೂನು ಜಾರಿ ಮಾಡಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಶಾಸನ ಸಭೆಯ ಒಪ್ಪಿಗೆ ಪಡೆದುಕೊಳ್ಳಲಿದೆ. ‘ಬಲವಂತದ ಸಾಲ ವಸೂಲಾತಿ ನಿಯಂತ್ರಣ ಸುಗ್ರೀವಾಜ್ಞೆ, 2025’ಕ್ಕೆ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅಂಕಿತ ಹಾಕದೇ ಹಿಂದಿರುಗಿಸಿ, ಪ್ರಮುಖ ಆರು ಅಂಶಗಳಿಗೆ ಸ್ಪಷ್ಟೀಕರಣಗಳನ್ನು ಸರ್ಕಾರದಿಂದ ಬಯಸಿದ್ದರು. ಬಡವರು ಹಾಗೂ ಸಾಲ ಕೊಟ್ಟವರ ಮೇಲೂ ಅಡ್ಡ ಪರಿಣಾಮ ಬೀರಲಿದೆ.
ನ್ಯಾಯಬದ್ಧ ಹಕ್ಕು ಮೊಟಕು ಕಾನೂನುಬಾಹಿರವೆಂದು ಅವರು ಆಕ್ಷೇಪಿಸಿದ್ದರು. ಕಾನೂನು ಇಲಾಖೆಯು ತಕ್ಷಣವೇ ಸಮಜಾಯಿಷಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ಕಳುಹಿಸಿತ್ತು. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸಚಿವರೊಂದಿಗೆ ಸಭೆ ನಡೆಸಿ ಸ್ಪಷ್ಟೀಕರಣ ಅಂತಿಮಗೊಳಿಸಿ ರಾಜಭವನಕ್ಕೆ ಕಳುಹಿಸಿದರು. ಸಂವಿಧಾನ, ನೈಸರ್ಗಿಕ ನ್ಯಾಯದ ಚೌಕಟ್ಟಿನಲ್ಲಿದೆ ಎಂದು ಮನವರಿಕೆ ಮಾಡಿಕೊಡುವ ಒಕ್ಕಣೆಯೊಂದಿಗೆ ಸುಗ್ರೀವಾಜ್ಞೆಗೆ ಮನ್ನಣೆ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.