ಶಿವಮೊಗ್ಗ: ವಿಮೆ ಹೊಂದಿದ್ದ ಕಾರು ಅಪಘಾತವಾದ ಸಂದರ್ಭದಲ್ಲಿ ವಿಮಾ ಪರಿಹಾರ ನೀಡಲು ನಿರಾಕರಿಸಿದ ಖಾಸಗಿ ವಿಮಾ ಕಂಪನಿಗೆ ದಂಡ ವಿಧಿಸಿ ಪರಿಹಾರ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನಿತೇಶ್ ಟಿ.ನಾಯಕ್ ಎಂಬುವವರ ಕಾರು 2022ರ ಸೆಪ್ಟೆಂಬರ್‌ನಲ್ಲಿ ಅಪಘಾತಕ್ಕೊಳಗಾಗಿತ್ತು. ಇದರ ರಿಪೇರಿ ಖರ್ಚು 1,53,397 ರೂ. ವಿಮಾ ಮೊತ್ತ ನೀಡುವಂತೆ ನಿತೇಶ್ ವಿಮೆ ಕಂಪನಿಗೆ ಮನವಿ ಮಾಡಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ವಿಮೆ ನೀಡುವುದು ಸಾಧ್ಯವಿಲ್ಲ ಎಂದು ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿತ್ತು.
ಈ ಹಿನ್ನೆಲೆಯಲ್ಲಿ ನಿತೇಶ್ ಅವರು ವಿಮೆ ಕಂಪನಿಯ ಜಯಪುರ, ರಾಜಸ್ತಾನ ಮತ್ತು ಶಿವಮೊಗ್ಗ ಕಚೇರಿ ವಿರುದ್ಧ ಸೇವಾ ನ್ಯೂನತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಜಿದಾರರ ಪರವಾಗಿ ಆಯೋಗ ತೀರ್ಪು ನೀಡಿದೆ.
ಕಾರಿನ ರಿಪೇರಿ ಖರ್ಚಿನ ಬಾಬ್ತು 30,226 ರೂ.ಅನ್ನು ಶೇ. 9 ವಾರ್ಷಿಕ ಬಡ್ಡಿಯೊಂದಿಗೆ ಅರ್ಜಿದಾರರಿಗೆ ನೀಡಬೇಕು. ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ ಹಿಂಸೆಗೆ 25 ಸಾವಿರ ರೂ., ಕಾನೂನು ಹೋರಾಟದ ಬಾಬ್ತು 10 ಸಾವಿರ ರೂ. ನೀಡುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.