ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶತಾಯುಷಿ ಸಾಲುಮರದ ತಿಮ್ಮಕ್ಕನವರ ಬಗ್ಗೆ ಯಾವ ಕನ್ನಡಿಗರಿಗೆ ತಿಳಿದಿಲ್ಲ ಹೇಳಿ? ಮಕ್ಕಳಿಲ್ಲದ ಅವರು ನೂರಾರು ಆಲದ ಮರದ ಸಸಿಗಳನ್ನು ರಸ್ತೆಬದಿ ನೆಟ್ಟು, ಹೆತ್ತ ಮಕ್ಕಳಂತೆ ರಕ್ಷಿಸಿ, ಪೋಷಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ಸಾಧನೆಗೆ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ದೊರೆತಿದೆ. ಇದೀಗ ಇದೇ ಸಾಲುಮರದ ತಿಮ್ಮಕ್ಕನವರ ಜೀವನದ ಕುರಿತು ಸಿನಿಮಾ ಕೂಡ ಘೋಷಣೆಯಾಗಿದೆ. ಚಿತ್ರಕ್ಕೆ “ವೃಕ್ಷಮಾತೆ’ ಎಂದು ಶೀರ್ಷಿಕೆ ಇಡಲಾಗಿದ್ದು, “ಒರಟ, ಐ ಲವ್ ಯೂ’, “ಒಂಟಿ’, “ಕೋರ’ ಖ್ಯಾತಿಯ ಶ್ರೀ ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕ ಶ್ರೀ, “ಈಗಾಗಲೇ ತುಮಕೂರಿನ ಮಧುಗಿರಿ ಮತ್ತು ಹುಲಿಕಲ್ನಲ್ಲಿ 35 ದಿನಗಳ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 30 ದಿನಗಳ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದ್ದು, ಸಸ್ಯ ಚಿತ್ರೀಕರಣ ಭರದಿಂದ ಸಾಗಿದೆ. ಇದು ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ “ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿ ಆಧಾರಿತ ಚಿತ್ರವಾಗಿದ್ದು, ಅದೇ ಹೆಸರಿನಲ್ಲೇ ಸಿನಿಮಾ ಕೂಡ ಮೂಡಿಬರಲಿದೆ’ ಎಂದು ಮಾಹಿತಿ ನೀಡುತ್ತಾರೆ.
ಸಾಲುಮರದ ತಿಮ್ಮಕ್ಕ ಪಾತ್ರದಲ್ಲಿ ನಟಿ ಸೌಜನ್ಯ ನಟಿಸಲಿದ್ದು, ವಿಶೇಷ ಅಂದರೆ ಲುಕ್ಟೆಸ್ಟ್ ಮಾಡಿ, ಅವರು ತಿಮ್ಮಕ್ಕನವರಿಗೆ ಹೋಲುತ್ತಾರೆ ಎಂಬುದನ್ನು ಸ್ಪಷ್ಟಡಿಸಿಕೊಂಡೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಿಮ್ಮಕ್ಕನವರ ಪತಿ ಚಿಕ್ಕಯ್ಯ ಪಾತ್ರದಲ್ಲಿ ನೀನಾಸಂ ಅಶ್ವತ್ಥ್ ನಟಿಸುತ್ತಿದ್ದು ಎಂ.ಕೆ. ಮಠ, ಗಣೇಶ್ ರಾವ್ ಕೇಸರ್ಕರ್, ದೀಪಾ ಡಿಕೆ, ಭೂಮಿಕಾ, ಪ್ರಕಾಶ್ ಶೆಟ್ಟಿ, ಮನು ತಾರಾಗಣದಲ್ಲಿದ್ದಾರೆ. ಉಳಿದಂತೆ ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಮತ್ತು ಶ್ಯಾಮ್ ಸಂಗೀತದಲ್ಲಿ ಈ ಸಿನಿಮಾ ಮೂಡಿಬರಲಿದೆ. ಎಲ್ಲವೂ ಅಂದುಕೊಂಡಂತಾದರೆ ಇದೇ ವರ್ಷ ಸಿನಿಮಾ ರೆಡಿ ಮಾಡಿಕೊಂಡು, ಮೊದಲು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಕಳುಹಿಸಿ, ನಂತರ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡದ್ದು.
ನಾನು ಇದುವರೆಗೆ ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಕೊಂಡು ಬಂದವನು. ಬ್ರಿಡ್ಜ್ ಸಿನಿಮಾ ಮಾಡುವ ಆಸೆ ಇತ್ತು. ಸಾಲುಮರದ ತಿಮ್ಮಕ್ಕ ಅವರು ನಮ್ಮ ನೆಲದಲ್ಲಿ ಹುಟ್ಟಿ ವಿಶ್ವಾದ್ಯಂತ ಹಸಿರಿನ ಮೂಲಕವೇ ಹೆಸರು ಮಾಡಿದವರು. ಅವರ ಕುರಿತು ಮುಂದಿನ ಪೀಳಿಗೆಗೆ ತಿಳಿಸಬೇಕು. ಹೀಗಾಗಿ ಅವರು ಹುಟ್ಟಿದಾಗಿನಿಂದ ಇದುವರೆಗಿನ ಜೀವನದ ಕುರಿತು ಸಿನಿಮಾದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದ್ದೇವೆ.
ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಶ್ರೀ.