94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಅವಧಿಯನ್ನು ರಾಜ್ಯ ಸರ್ಕಾರ ಮಾರ್ಚ್ 31ರ ತನಕ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಾಲೂಕು ಕಚೇರಿಗಳಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ.
ಇದರಿಂದ ಇನ್ನೂ ವಾಸ್ತವ್ಯದ ಮನೆ ಜಮೀನನ್ನು ಸಕ್ರಮಗೊಳಿಸಲು ಅಸಾಧ್ಯವಾಗಿರುವ ಅರ್ಹ ಫಲಾನುಭವಿಗಳಿಗೆ ಇನ್ನೊಂದು ಅವಕಾಶ ದೊರೆತಂತಾಗಿದೆ. ಅವಧಿ ವಿಸ್ತರಣೆ ಕುರಿತಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪ್ರಕಟಿಸಿದ್ದಾರೆ. 1966ರ ನಿಯಮ 108- ಕ್ಯೂ ಮತ್ತು 108- ಎಕ್ಸ್‌ಗಳಿಗೆ ತಿದ್ದುಪಡಿ ತಂದು ಕಾಲಾವಕಾಶ ವಿಸ್ತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ಅವಧಿಯಲ್ಲಿ ದ.ಕ. ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿ 94ಸಿ ಯೋಜನೆಯಡಿ 1,05,135 ಅರ್ಜಿ ಸಲ್ಲಿಕೆಯಾಗಿದ್ದು, 96,632 ಅರ್ಜಿ ವಿಲೇವಾರಿ ಮಾಡಲಾಗಿದೆ. ಇದರಲ್ಲಿ 46,344 ಹಕ್ಕುಪತ್ರ ಮಂಜೂರಾಗಿದೆ. ನಗರ ಪ್ರದೇಶದಲ್ಲಿ 94ಸಿಸಿ ಯೋಜನೆಯಡಿ 38,828 ಮಂದಿ ಅರ್ಜಿ ಸಲ್ಲಿಸಿದ್ದು, 31,946 ಅರ್ಜಿ ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 20,033 ಹಕ್ಕುಪತ್ರ ಮಂಜೂರಾಗಿದೆ.

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 94ಸಿ ಅಡಿ 33729 ಅರ್ಜಿ ಸ್ವೀಕಾರವಾಗಿದೆ. 29184 ವಿಲೇವಾರಿಯಾಗಿದ್ದು, ಇದರಲ್ಲಿ 6689 ಹಕ್ಕುಪತ್ರ ಮಂಜೂರಾಗಿದೆ. 94ಸಿಸಿ ಸಂಬಂಧಿಸಿ ನಗರ ಪ್ರದೇಶದಲ್ಲಿ 8921 ಅರ್ಜಿ ಸ್ವೀಕಾರವಾಗಿದ್ದು, 7735 ಅರ್ಜಿ ಇತ್ಯರ್ಥವಾಗಿದೆ. ಇದರಲ್ಲಿ 1853 ಮಂದಿಗೆ ಹಕ್ಕುಪತ್ರ ದೊರೆತಿದೆ.

ಶೀಘ್ರ ಸಭೆ: ತಿರಸ್ಕರಿಸಲ್ಪಟ್ಟ ಅರ್ಜಿಗಳಲ್ಲಿ ಯೋಜನೆಯಡಿ ಸೌಲಭ್ಯ ಪಡೆಯುವ ಸಲುವಾಗಿಯೇ ಸರ್ಕಾರಿ ಭೂಮಿಯಲ್ಲಿ ತಾತ್ಕಾಲಿಕ ಮನೆ ನಿರ್ಮಿಸಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಅಧಿಕವಿದೆ ಎಂದು ತಿಳಿದುಬಂದಿದೆ. ಕಂದಾಯ ಸಚಿವರು ಮಾರ್ಚ್ 1ರಂದು ಮಂಗಳೂರಿನಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಯಲಿದ್ದು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ.

ಬಗರ್‌ಹುಕುಂ ಮಾ.16 ಕೊನೇ ದಿನ: ಅನಧಿಕೃತವಾಗಿ ಸಾಗುವಳಿ ನಡೆಸುತ್ತಿರುವ ಭೂಮಿಯನ್ನು ಬಗರ್‌ಹುಕುಂ ಯೋಜನೆಯಡಿ ಸಕ್ರಮಗೊಳಿಸುವ ಯೋಜನೆ (ನಮೂನೆ 57ರಲ್ಲಿ) ಸಂಬಂಧಿಸಿ ಅರ್ಜಿ ಸಲ್ಲಿಸಲು ಮಾರ್ಚ್ 16ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಅವಧಿಯಲ್ಲಿ ನಮೂನೆ 50ರಲ್ಲಿ ದ.ಕ. ಜಿಲ್ಲೆಯಲ್ಲಿ 1,13,730 ಅರ್ಜಿಗಳು ಬಂದಿದ್ದು, 1,13,661 ವಿಲೇವಾರಿಯಾಗಿದೆ. 46,577 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ. 94ಬಿ ನಮೂನೆ 53ರಲ್ಲಿ 1,11,387 ಅರ್ಜಿ ಬಂದಿದ್ದು, 1,04,031 ಅರ್ಜಿ ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 32,725 ಮಂಜೂರಾತಿ ಒದಗಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನಮೂನೆ 50ರಲ್ಲಿ ಬಂದ 50368 ಅರ್ಜಿಗಳಲ್ಲಿ 49981 ವಿಲೇವಾರಿಯಾಗಿದೆ. 9926 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 94ಬಿ ನಮೂನೆ 53ರಲ್ಲಿ ಬಂದ 58453 ಅರ್ಜಿಗಳಲ್ಲಿ 41786 ಅರ್ಜಿ ಇತ್ಯರ್ಥಪಡಿಸಲಾಗಿದ್ದು, 11321 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.