ಸುಸಜ್ಜಿತ ಚರಂಡಿ ತೆರವಿಗೆ ವಿರೋಧ

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಮಠದ ಬೀದಿಯಲ್ಲಿ ಸುಸಜ್ಜಿತವಾಗಿರುವ ಚರಂಡಿಯನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಹೊಸದಾಗಿ ಚರಂಡಿ ನಿರ್ಮಿಸುವ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಮಾಜಿ ಶಾಸಕ ಎಸ್.ಜಯಣ್ಣ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ ತಿಮ್ಮರಾಜಿಪುರ ಗ್ರಾಮದ ವಿವಿಧ ಕೋಮಿನ ಬೀದಿಗಳ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರಾಗಿದ್ದು, ಈ ಪೈಕಿ ಗ್ರಾಮದ ಮಠದ ಬೀದಿಯಲ್ಲಿ 150 ಮೀಟರ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯೂ ಸೇರಿದೆ.

ಅಂತೆಯೇ, ಗುರುವಾರ ಗ್ರಾಮದ ಮಠದ ಬೀದಿಯ ಶಿವರುದ್ರಪ್ಪ ಎಂಬುವರ ಮನೆಯಿಂದ ನಾಗರಾಜು ಎಂಬುವರ ಮನೆವರೆಗಿದ್ದ ಅಚ್ಚುಕಟ್ಟಾದ ಚರಂಡಿಯನ್ನು ಪಟ್ಟಣದ ಕೆಆರ್‌ಐಡಿಎಲ್ ಇಂಜಿನಿಯರ್ ಸೂಚನೆಂತೆ ಗುತ್ತಿಗೆದಾರರು ತೆರವುಗೊಳಿಸಲು ಮುಂದಾಗಿದ್ದು, ಇದೇ ಸ್ಥಳದಲ್ಲಿ ಹೊಸದಾಗಿ ಚರಂಡಿ ನಿರ್ಮಿಸುವುದಾಗಿ ನಿವಾಸಿಗಳಿಗೆ ತಿಳಿಸಿದ್ದಾರೆ.

ಇದನ್ನು ವಿರೋಧಿಸಿದ ಗ್ರಾಮಸ್ಥರು, 8 ವರ್ಷಗಳ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ಮಠದ ಬೀದಿಯ ಶಿವರುದ್ರಪ್ಪ ಅವರ ಮನೆಯಿಂದ ನಾಗರಾಜು ಎಂಬುವರ ಮನೆವರೆಗೆ ನಿರ್ಮಿಸಿದ ಚರಂಡಿ ಇನ್ನೂ ಚೆನ್ನಾಗಿದೆ. ಇದನ್ನು ಹೊರತುಪಡಿಸಿ, ನಾಗರಾಜು ಅವರ ಮನೆಯಿಂದ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿ ಗ್ರಾಮದ ಹೊರವಲಯದ ಓಣಿ ದಾರಿಯ ಕಬಿನಿ ನಾಲೆಗೆ ಸೇರುವಂತೆ ಆಗ್ರಹಿಸಿದರು.
ನಾಗರಾಜು ಅವರ ಮನೆವರೆಗೆ ಮಾತ್ರ ಕಳೆದ ಹಲವು ವರ್ಷಗಳಿಂದ ಚರಂಡಿಯಿದ್ದು, ಮುಂದಕ್ಕೆ ಚರಂಡಿ ನಿರ್ಮಿಸದ ಹಿನ್ನೆಲೆ ಚರಂಡಿ ನೀರು ಹಿಮ್ಮುಖವಾಗಿ ಹರಿಯುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಮಳೆ ಸುರಿದ ಸಂದರ್ಭದಲ್ಲಿ ನಾಗರಾಜು ಅವರ ಮನೆ ಪಕ್ಕದಲ್ಲಿರುವ ನಾಗಲಿಂಗಚಾರಿ ಎಂಬುವರ ಮನೆ ಅಂಗಳಕ್ಕೆ ಚರಂಡಿ ನೀರು ಚಾಚಿಕೊಳ್ಳುತ್ತದೆ.

ಅಲ್ಲದೆ, ವರ್ಷವಿಡಿ ನಾಗಲಿಂಗಾಚಾರಿ ಕುಟುಂಬದವರು ಚರಂಡಿ ನೀರಿನ ಗಬ್ಬು ವಾಸನೆ ಮತ್ತು ಸೊಳ್ಳೆ ಕಾಟದಿಂದ ಪರಿತಪಿಸುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೂ ತರಲಾಗಿದೆ. ಆದರೀಗ ಚರಂಡಿ ಇಲ್ಲದ ಸ್ಥಳದಲ್ಲಿ ಚರಂಡಿ ನಿರ್ಮಿಸುವುದನ್ನು ಬಿಟ್ಟು ಚೆನ್ನಾಗಿರುವ ಚರಂಡಿಯನ್ನೇ ಕಿತ್ತು ಹೊಸದಾಗಿ ಕಟ್ಟಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡರಲ್ಲದೆ, ಕೆಲಸ ಸ್ಥಗಿತಗೊಳಿಸಿದರು.

ಮಠದ ಬೀದಿಯಲ್ಲಿ ಕೊನೆಯ ಮನೆ ನಮ್ಮದಾಗಿದ್ದು, ಇಲ್ಲಿಂದಾಚೆಗೆ ತ್ಯಾಜ್ಯ ನೀರು ಸಾಗಲು ಸೂಕ್ತ ರೀತಿಯಲ್ಲಿ ಚರಂಡಿ ನಿರ್ಮಿಸಿಲ್ಲ. 20 ವರ್ಷದಿಂದಲೂ ನಮಗೆ ಇದೇ ಸಮಸ್ಯೆಯಿದೆ. ಇನ್ನಾದರೂ ನಮ್ಮ ಮನೆ ಮುಂದೆ ಚರಂಡಿ ನೀರು ಚಾಚಿಕೊಳ್ಳುವುದನ್ನು ತಪ್ಪಿಸಿ, ಗ್ರಾಮದಿಂದ ಹೊರಕ್ಕೆ ಚರಂಡಿ ನಿರ್ಮಿಸಲಿ.
ರಾಜಮ್ಮ, ಮಠದ ಬೀದಿ ನಿವಾಸಿ, ತಿಮ್ಮರಾಜಿಪುರ

ಮಠದ ಬೀದಿಯ ನಾಗರಾಜು ಅವರ ಮನೆಯಿಂದ ಮುಂದಕ್ಕೆ 150 ಮೀಟರ್ ಉದ್ದದ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗ್ರಾಮಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆಗಿದ್ದರೂ ಕೆಆರ್‌ಐಡಿಎಲ್ ಇಲಾಖೆ ಇಂಜಿನಿಯರ್ಸ್‌ ಶಿವರುದ್ರಪ್ಪ ಅವರ ಮನೆ ಮುಂದಿರುವ ಚೆನ್ನಾಗಿರುವ ಚರಂಡಿಯನ್ನೇ ತೆರವುಗೊಳಿಸುವುದು ಸರಿಯಲ್ಲ.
ಅಶ್ವಿನಿ ರಾಚಪ್ಪ, ಅಧ್ಯಕ್ಷೆ, ತಿಮ್ಮರಾಜಿಪುರ ಗ್ರಾಪಂ

ಜಿಪಂ ಅನುಮೋದಿಸಿರುವ ಕ್ರಿಯಾ ಯೋಜನೆಯಂತೆ ತಿಮ್ಮರಾಜಿಪುರ ಗ್ರಾಮದ ಮಠದ ಬೀದಿಯಲ್ಲಿ ಚರಂಡಿ ನಿರ್ಮಾಣ ಕೆಲಸಕ್ಕೆ ಮುಂದಾಗಲಾಗಿತ್ತು. ಇದರಲ್ಲಿ ನಮ್ಮ ತಪ್ಪೇನಿಲ್ಲ. ಗ್ರಾಮಸ್ಥರು ಹೇಳುವ ರೀತಿ ನಾಗರಾಜು ಮನೆ ಮುಂದಕ್ಕೆ ಚರಂಡಿ ಕೆಲಸವಾಗಬೇಕು ಎನ್ನುವುದಾದರೆ, ಜಿಪಂನಲ್ಲಿ ಕ್ರಿಯಾಯೋಜನೆ ಬದಲಾಯಿಸಿಕೊಡಬೇಕು.
ಟಿ.ಎಂ.ರಮೇಶ್, ಎಇಇ, ಕೆಆರ್‌ಐಡಿಎಲ್ ಕೊಳ್ಳೇಗಾಲ