ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದ ಇಮ್ರಾನ್‌ ಖಾನ್‌ ಹೇಳಿಕೆಗೆ ಮೋದಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು

ನವದೆಹಲಿ: ಈ ಭಾರಿ ಪ್ರಧಾನಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿದರೆ ಪಾಕ್‌ ಜತೆಗಿನ ಶಾಂತಿ ಮಾತುಕತೆಗೆ ಉತ್ತಮ ಅವಕಾಶವಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷಗಳು ಬಿಜೆಪಿಯನ್ನು ಭಾರೀ ಟ್ರೋಲ್‌ಗೆ ಗುರಿಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿಯು ಪಾಕಿಸ್ತಾನಿ ಭಾಷೆಯನ್ನು ಮಾತನಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ, ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರಾದ ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ನಾಯಕರು ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿದ್ದಾರೆ.

ಪಾಕಿಸ್ತಾನವು ಅಧಿಕೃತವಾಗಿ ಮೋದಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ! ಮೋದಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ ಎಂದು ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸಿಂಗ್‌ ಸುರ್ಜೇವಾಲ ಟ್ವೀಟ್‌ ಮಾಡಿದ್ದಾರೆ. ಮೋದಿಜಿಗೆ ಮೊದಲು ನವಾಜ್‌ ಷರೀಫ್‌, ಈಗ ಇಮ್ರಾನ್‌ ಖಾನ್‌ ಸ್ನೇಹಿತರು. ಈಗ ರಹಸ್ಯ ಹೊರಬಿದ್ದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನಕ್ಕೆ ಯಾಕೆ ಮೋದಿಯೇ ಗೆಲ್ಲಬೇಕು? ಪ್ರಧಾನಿ ಮೋದಿಯವರೇ, ಪಾಕಿಸ್ತಾನದೊಂದಿಗಿನ ನಿಮ್ಮ ಸಂಬಂಧ ಎಷ್ಟು ಆಳವಾಗಿದೆ ಎಂಬುದನ್ನು ದೇಶದ ಮುಂದಿಡಿ. ಮೋದಿ ಜಯ ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂಬುದನ್ನು ಪ್ರತಿ ಭಾರತೀಯರು ತಿಳಿಯಬೇಕು ಎಂದು ಆಪ್‌ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸರಣಿ ಟ್ವೀಟ್‌ ಮಾಡುವ ಮೂಲಕ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಮತ್ತು ಅದರ ಬೆಂಬಲಿಗರು ಮಾತ್ರ ಬಿಜೆಪಿ ಸೋಲಲಿ ಎಂದು ಬಯಸುತ್ತಿದ್ದಾರೆ ಎಂದು ಮೋದಿ ಸಾಹೇಬ್ ದೇಶದ ಎಲ್ಲ ಕಡೆಗೂ ಹೇಳುತ್ತಿದ್ದಾರೆ. ಆದರೆ, ಇಮ್ರಾನ್ ಖಾನ್ ಮೋದಿ ಎರಡನೇ ಅವಧಿಗೆ ಆಯ್ಕೆ ಆಗಲಿ ಎಂದು ಬಯಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇದರೊಂದಿಗೆ ಪಿಡಿಪಿ ನಾಯಕಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಮೆಹಬೂಬ ಮುಫ್ತಿ ಕೂಡ ಟ್ವೀಟ್‌ ಮಾಡಿದ್ದು, ಇಮ್ರಾನ್‌ ಖಾನ್‌ರ ಹೇಳಿಕೆಯಿಂದಾಗಿ ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ ಮತ್ತು ಖಾನ್‌ರನ್ನು ಹೊಗಳಬೇಕೋ ಅಥವಾ ಬೇಡವೋ ಎನ್ನುವ ಕುರಿತು ಗೊಂದಲಕ್ಕೀಡಾಗಿದ್ದಾರೆ ಎಂದಿದ್ದಾರೆ.

ಇನ್ನು ಫೆ.14ರಂದು ನಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಬಿಗಡಾಯಿಸಿದ್ದು, ಇದೀಗ ಇಮ್ರಾನ್‌ ಖಾನ್‌ರ ಹೇಳಿಕೆಯು ಆಶ್ಚರ್ಯಕ್ಕೆ ಕಾರಣವಾಗಿದೆ. ಎಲ್ಲೆಡೆ ಈ ಬಗ್ಗೆ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)

One Reply to “ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದ ಇಮ್ರಾನ್‌ ಖಾನ್‌ ಹೇಳಿಕೆಗೆ ಮೋದಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು”

  1. It is really appreciable statement by Pakistan PM Shri. Imran Khan.He is seeking Peace and Progressive neighbour hood Government.Ye Badalav ka Suchana Hai!Aur Achhe Din Aane ka suchana hai.Let us welcome the statement instead of Politicising.

Comments are closed.