ಮೈಸೂರು: ರಾಜ್ಯ ಸರ್ಕಾರ ಹೊಸದಾಗಿ 473 ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿಯಿಂದ ಸೋಮವಾರ ನಗರದ ರೈಲ್ವೆ ನಿಲ್ದಾಣದ ಬಳಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಸಂಘಟನೆ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ರಾಜ್ಯ ಸರ್ಕಾರ ಕಡಿಮೆ ದಾಖಲಾತಿ ನೆಪವೊಡ್ಡಿ 6200ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಈಗಾಗಲೇ ಮುಚ್ಚಿದೆ. ಈ ನಡುವೆಯೇ ಸರ್ಕಾರ ಸದ್ದು ಗದ್ದಲವಿಲ್ಲದೆ ಈ ಶೈಕಣಿಕ ವರ್ಷ 473 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿ, ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಮೈಸೂರು ಜಿಲ್ಲೆಯಲ್ಲಿ ಕಡಿಮೆ ದಾಖಲಾತಿಯಿರುವ 30 ಶಾಲೆಗಳು ಕೆಟ್ಟ ಪರಿಸ್ಥಿತಿಯಲ್ಲಿದೆ. ಬಹುಪಾಲು ಶಾಲೆಗಳಲ್ಲಿ ಅತಿ ಹೆಚ್ಚು ಅಂದರೆ ಮುಖ್ಯ ಶಿಕ್ಷಕರನ್ನೊಳಗೊಂಡಂತೆ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ ಎಂದು ದೂರಿದರು.
ಇದುವರೆಗೆ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಇಲ್ಲದಂತಾಗಿದೆ. ಕಟ್ಟಡಗಳು ದುರಸ್ತಿಗೆ ಬಂದಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸರಿಯಾದ ಶೌಚಗೃಹ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಮಸ್ಯೆಗಳ ಬಗ್ಗೆ ಯೋಚಿಸದೆ ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ ಎಂಬ ಕಾರಣ ಕೊಡುತ್ತಿದ್ದಾರೆ. ಪಾಲಕರು ಇಂಗ್ಲಿಷ್ ಮಾಧ್ಯಮದ ಹಿಂದೆ ಓಡುತ್ತಿದ್ದರೆ ಮತ್ತು ಖಾಸಗಿ ಶಾಲೆಗಳ ಮೇಲೆ ಅವರಿಗೆ ಅತಿಯಾದ ಪ್ರೀತಿಯಿದೆ ಎಂದು ಹೇಳುತ್ತಿದ್ದಾರೆ ಎಂದರು.
ಸಚಿವರು ದಾಖಲಾತಿ ಪ್ರಮಾಣದ ಕುಸಿತಕ್ಕೆ ಪಾಲಕರನ್ನೇ ಹೊಣೆದಾರರನ್ನಾಗಿ ಮಾಡಿದ್ದಾರೆ. ಮೂಲಸೌಕರ್ಯ ಉತ್ತಮವಾಗಬೇಕು ಎಂದು ಹೇಳಿದರೂ ಪಾಲಕರು ಇದಕ್ಕೆ ಚಿಂತೆ ಮಾಡದೆ ಮಕ್ಕಳನ್ನು ಕಳುಹಿಸಬೇಕು ಎನ್ನುವ ಮೂಲಕ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಕಳೆದ ಆರು ವರ್ಷಗಳಲ್ಲಿ 3378 ಖಾಸಗಿ ಶಾಲೆಗಳಿಗೆ ಸರ್ಕಾರಗಳು ಪರವಾನಗಿ ನೀಡಿವೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಕೂಡಲೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನದಿಂದ ಸರ್ಕಾರ ಹಿಂದೆ ಸರಿಯಬೇಕು. ದಿನಗೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕರ ಮತ್ತು ಬಡ ರೈತರ ಮಕ್ಕಳು ಓದಲು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ರೈಲ್ವೆ ನಿಲ್ದಾಣದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನೂರಾರು ಜನರು ಸರ್ಕಾರಿ ಶಾಲೆ ಉಳಿಸುವುದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿ ಸಹಿ ಹಾಕಿದರು.
ಸಂಘಟನೆಯ ಜಿಲ್ಲಾ ಅಧಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಉಪಾಧಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ದಿಶಾ, ಅಂಜಲಿ, ಕಾರ್ಯಕರ್ತರಾದ ದೀಕ್ಷಾ, ಆರತಿ, ಪ್ರಿಯಾಂಕಾ, ಚೈತ್ರಾ, ಆರತಿ ಇದ್ದರು.
