ಔಷಧ ವ್ಯಾಪಾರಸ್ಥರ ಪ್ರತಿಭಟನೆ

ಗದಗ: ಆನ್​ಲೈನ್ ಮೂಲಕ ಔಷಧಿ ಮಾರಾಟ (ಇ-ಫಾರ್ಮಸಿ) ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಸ್ಥರು ಶುಕ್ರವಾರ ಔಷಧ ಮಳಿಗೆಗಳನ್ನು ಬಂದ್ ಮಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಗದಗ-ಬೆಟಗೇರಿ ಅವಳಿ ನಗರದ 150 ಔಷಧ ಮಳಿಗೆಗಳು ಸೇರಿದಂತೆ ಜಿಲ್ಲಾದ್ಯಂತ 430 ಕ್ಕೂ ಹೆಚ್ಚು ಮಳಿಗೆಗಳನ್ನು ಬಂದ್ ಮಾಡಿದ ವ್ಯಾಪಾರಸ್ಥರು ಆನ್​ಲೈನ್ ಮೂಲಕ ಔಷಧ ಮಾರಾಟ (ಇ-ಫಾರ್ಮಸಿ) ಕಾನೂನು ಬದ್ಧಗೊಳಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಸಾಮಾನ್ಯವಾಗಿ ಔಷಧ ಮಳಿಗೆಗಳಲ್ಲಿ ವೈದ್ಯರು ಸೂಚಿಸಿದಂತಹ ಔಷಧಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ, ಇ-ಫಾರ್ಮಸಿಯಲ್ಲಿ ಮತ್ತು ಬರಿಸುವ ಹಾಗೂ ವ್ಯಸನ ಉಂಟು ಮಾಡುವ ಮಾತ್ರೆಗಳನ್ನು ಸಲೀಸಾಗಿ ಪಡೆಯಬಹುದು. ಅಲ್ಲದೇ, ಇ-ಫಾರ್ಮಸಿಯು ಲಾಭದ ಉದ್ದೇಶದಿಂದ ಅವಧಿ ಮುಗಿದ ಔಷಧಗಳನ್ನು ಪೂರೈಸುವುದರಿಂದ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಿಶ್ವನಾಥ ವನಕಿ, ಗೌರವ ಕಾರ್ಯದರ್ಶಿ ಬಿ. ಮಂಜುನಾಥ ರೆಡ್ಡಿ, ಸುರೇಶ ಹೆಗಡಿಕಟ್ಟಿ, ರಾಜೇಂದ್ರ ಜೈನ್, ಎನ್.ಎಸ್. ದೇಸಾಯಿ, ನಾಗರಾಜ ಗಂಗಾವತಿ, ಲಲಿತ ಜೈನ್, ರಾಜೇಶ ಜೈನ್, ಎಂ.ಡಿ. ಕಾಬಳ್ಳಿ, ಎಂ.ಬಿ. ರಮಣಿ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಔಷಧ ವ್ಯಾಪಾರಸ್ಥರು ಇದ್ದರು.

ರಾಜ್ಯಪಾಲರಿಗೆ ವ್ಯಾಪಾರಸ್ಥರ ಮನವಿ

ಗಜೇಂದ್ರಗಡ: ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಕರೆ ನೀಡಲಾದ ಔಷಧ ಅಂಗಡಿ ಬಂದ್​ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಾರಾಟಗಾರರು ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಿದರು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಔಷಧಿ ಅಂಗಡಿ ಮಾತ್ರ ಎಂದಿನಂತೆ ಬಾಗಿಲು ತೆರೆದಿತ್ತು. ಔಷಧಿ ಖರೀದಿಗೆ ರೋಗಿಗಳು ಮುಗಿಬಿದ್ದರು. ಗಜೇಂದ್ರಗಡ ಔಷಧ ವ್ಯಾಪರಸ್ಥರ ಸಂಘದ ವತಿಯಿಂದ ದುರ್ಗಾ ವೃತ್ತದಿಂದ ಕಾಲಕಾಲೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಆನ್​ಲೈನ್ ಮೂಲಕ ಔಷಧ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಉಮೇಶ ಮೆಣಸಗಿ ಮಾತನಾಡಿ, ಲಕ್ಷಾಂತರ ರೂ. ಬಂಡವಾಳ ಹಾಕಿ ಅನೇಕ ವರ್ಷಗಳಿಂದ ಗ್ರಾಹಕರಿಗೆ ಅಗತ್ಯವಾದ ಔಷಧಗಳನ್ನು ಮಾರುತ್ತಿದ್ದ ನಮಗೆ ಆನ್​ಲೈನ್ ಔಷಧ ವ್ಯಾಪಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದರು.

ರಮೇಶ ಮಾರನಬಸರಿ, ಮುತ್ತಣ್ಣ ಚಟ್ಟೇರ, ಕಲ್ಲಪ ಪಾಗಿ, ಪ್ರಭು ಬೆಟಗೇರಿ, ಎಚ್.ಆರ್. ಕರಿಕಟ್ಟಿ, ಗೀರೀಶ ಬೆರಗಿ, ನಿಖಿಲ ರಾಜಪುರೋಹಿತ, ಅಂಬರೀಶ ಅಂಗಡಿ, ಮಹೇಶ ಮಳಗಿ, ಶೌಕತ್​ಅಲಿ ಅರಳಿಕಟ್ಟಿ, ಜಗದೀಶ ಕನಕೇರಿ, ಬಾಬಣ್ಣ ಚವಡಿ, ರಿತೇಶ ಮೆಹರವಾಡೆ, ಸಿದ್ದಲಿಂಗಪ್ಪ ಕನಕೇರಿ ಇತರರಿದ್ದರು.

ಹನ್ನೆರಡು ಅಂಗಡಿಗೆ ಬೀಗ

ಮುಂಡರಗಿ: ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಪಟ್ಟಣದಲ್ಲಿದ್ದ 12 ಔಷಧ ಮಳಿಗೆಗಳನ್ನು ಶುಕ್ರವಾರ ಬಂದ್ ಮಾಡಲಾಗಿತ್ತು.

ಔಷಧ ಸಿಗದೇ ರೋಗಿಗಳು ತೊಂದರೆ ಅನುಭವಿಸಿದರು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಗುರುವಾರವೇ ಅಗತ್ಯವಿರುವ ಔಷಧಿ ಹಾಗೂ ಸಲಾಯನ್ ಬಾಟಲಿ ಮತ್ತಿತರರ ಔಷಧಗಳನ್ನು ಖರೀದಿಸಿಟ್ಟುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಿದರು.

ರೋಗಿ ಶೇಖಪ್ಪ ಮೈನಹಳ್ಳಿ ಮಾತನಾಡಿ, ‘ನಮ್ಮ ಮಗುವಿಗೆ ಪಿಟ್ಸ್ ಬಂದಿದ್ದರಿಂದ ವೈದ್ಯರ ಬಳಿ ಕರೆತಂದೆವು. ಔಷಧ ಮಳಿಗೆಗಳು ಬಂದ್ ಆಗಿದ್ದರಿಂದ ವೈದ್ಯರೇ ಆಸ್ಪತ್ರೆಯಲ್ಲಿ ಸಂಗ್ರಹಿಸಿಟ್ಟಿದ್ದ ಔಷಧಿ ನೀಡಿ ಚಿಕಿತ್ಸೆ ನೀಡಿದರು’ ಎಂದರು.

ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಆನ್​ಲೈನ್​ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿರುವುದು ಖಂಡನೀಯ ಎಂದರು.