More

  ಹೊಸ ಬಡಾವಣೆ ನಿರ್ಮಾಣಕ್ಕೆ ವಿರೋಧ

  ಅರಸೀಕೆರೆ: ನಗರಸಭೆ ಪರಿಮಿತಿಯಲ್ಲಿ ಹೊಸ ಬಡಾವಣೆಗಳ ನಿರ್ಮಾಣ ಹಾಗೂ ಖಾತೆ ಬಿಡುಗಡೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎನ್ನುವ ಕೂಗು ಚುನಾಯಿತ ನಗರಸಭೆ ಸದಸ್ಯರಿಂದಲೇ ಬಲವಾಗಿ ಕೇಳಿಬಂದಿದೆ.

  ಇದಕ್ಕೆ ಪೂರಕ ಎನ್ನುವಂತೆ ಜೆಡಿಎಸ್ ಹಾಗೂ ಬಿಜೆಪಿಯ ಸದಸ್ಯರು ಕೆಲ ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಮಲ್ಲೇಶ್ವರ, ಸುಬ್ರಮಣ್ಯ ನಗರ, ಮೈಸೂರು ರಸ್ತೆ, ಕಾಳನಕೊಪ್ಪಲು, ಗರುಡನಗಿರಿ, ಬಾಬಾ ಸಾಹೇಬ್ ಕಾಲನಿ, ಸಿದ್ದಪ್ಪನಗರ, ಕಂತೇನಹಳ್ಳಿ, ಹೆಂಜಗೊಂಡನಹಳ್ಳಿ, ಮಾರುತಿನಗರ, ಮಲ್ಲಪ್ಪ ಲೇಔಟ್, ಮಿನಿ ವಿಧಾನಸೌಧ, ಹೊಯ್ಸಳನಗರ ಸೇರಿದಂತೆ ಹಲವೆಡೆ ತರಾತುರಿಯಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಭೂಮಿ ಸಮತಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡು ಜಿಲ್ಲಾಧಿಕಾರಿ ಆಡಳಿತ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಇಂತಹದ್ದೊಂದು ಬೆಳವಣಿಗೆ ನಡೆದಿರುವುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

  ಹೊಸ ಬಡಾವಣೆಗಳ ನಿರ್ಮಾರ್ಣಕ್ಕೆ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ದೊರೆತ ಕೂಡಲೇ ನಗರಸಭೆಯಿಂದ ಖಾತೆ ಬಿಡುಗಡೆ ಮಾಡಬೇಕೆನ್ನುವ ನಿಯಮವಿದೆ. ಇದನ್ನು ಮನಗಂಡಿದ್ದ 13ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಎಂ.ಆರ್. ವೆಂಕಟಮುನಿ ಸೇರಿದಂತೆ ಹಲವು ಸದಸ್ಯರು ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ ದೊರೆತ ನಂತರವೇ ಹೊಸ ಬಡಾವಣೆಗಳಿಗೆ ಅನುಮೋದನೆ ನೀಡಬೇಕು ಹಾಗೂ ಖಾತೆ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದರು. ಈ ಸಂಬಂಧ ಜೂ.19ರಂದು ಸಿ.ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದೀಗ ಸರ್ವ ಸದಸ್ಯರ ಒಮ್ಮತದ ನಿರ್ಣಯಕ್ಕೆ ಕೆಲವರು ಎಳ್ಳು ನೀರು ಬಿಡಲು ಹೊರಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

  ನಗರ ಸ್ಥಳೀಯ ಯೋಜನಾ ಪ್ರಾಧಿಕಾರ ಹಾಗೂ ನಗರಸಭೆ ಆಡಳಿತಾಧಿಕಾರಿಗಳ ಅನುಮತಿ ಪಡೆದು ತರಾತುರಿಯಲ್ಲಿ ಖಾತೆ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಕೃಷಿ ಭೂಮಿ ಪರಿವರ್ತನೆ, ಹಸಿರುವ ವಲಯಗಳ ಮಾರ್ಪಾಡಿಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಮುಂದಾಗಿದ್ದಾರೆನ್ನುವ ಮಾತುಗಳು ಕೇಳಿ ಬಂದಿದ್ದು, ಕುರುಡು ಕಾಂಚಾಣ ಸದ್ದು ಮಾಡತೊಡಗಿದೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕೆನ್ನುವ ಹಠಕ್ಕೆ ಬಿದ್ದಿರುವ ಕೆಲ ಸದಸ್ಯರು ಇದೀಗ ಜಿಲ್ಲಾಡಳಿತದ ಕದ ತಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯ ಗುರುವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡದಂತೆ ಅಹವಾಲು ಸಲ್ಲಿಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

  ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಮಹಾಯೋಜನೆಯ ತಾತ್ಕಾಲಿಕ ಅನುಮೋದಿತ ಸೀಮಾರೇಖೆ ವಿಸ್ತಾರಕ್ಕೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಆದೇಶ ಹೊರಡಿಸಿತ್ತು. ನಗರ ಪರಿಮಿತಿಯಲ್ಲಿ 5.65 ಕಿ.ಮೀ. ಗಡಿ ಗುರುತಿಸಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿತ್ತು. 20 ವರ್ಷದಲ್ಲಿ ನಗರದ ಸಮಗ್ರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಅಂದಾಜಿಸಿ ಕೈಗೊಳ್ಳಬಹುದಾದ ಚಟುವಟಿಕೆಗಳಿಗೆ 3853.76 ಹೆಕ್ಟೇರ್ ಪೈಕಿ 2107.55 ಹೆಕ್ಟೇರ್ ಪ್ರದೇಶವನ್ನು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾ ಯೋಜನೆಯ ವ್ಯಾಪ್ತಿಗೆ ತರಲಾಯಿತು.

  ವಸತಿ ನಿರ್ಮಾಣಕ್ಕೆ 1047.98(ಶೇ.49.73)ಹೆಕ್ಟೇರ್, ವಾಣಿಜ್ಯ ಚಟುವಟಿಕೆಗಳಿಗೆ 126.96, ಕೈಗಾರಿಕೆಗೆ 62.52, ಸಾರ್ವಜನಿಕ, ಅರೆ ಸಾರ್ವಜನಿಕ ಉಪಯೋಗಕ್ಕೆ 96.19, ಉದ್ಯಾನವನ ಬಯಲ ಪ್ರದೇಶ 250.41, ಸಾರ್ವಜನಿಕ ಉಪಯುಕ್ತತೆಗೆ 17.99 ಮತ್ತು ಸಾರಿಗೆ ಸಂಪರ್ಕ ವಲಯಕ್ಕೆ 505.50 ಹೆಕ್ಟೇರ್ ಭೂಮಿ ಮೀಸಲಿರಿಸುವಂತೆ ಎರಡು ವರ್ಷದ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಇದರ ಪರಿಣಾಮ ಗ್ರಾಮಠಾಣಾ 24.36,ಅರಣ್ಯ 133.48, ಜಲಮೂಲ 391.55 ಹಾಗೂ ಕೃಷಿ ಭೂಮಿ 1196.76 ಸೇರಿ 3853.76 ಹೆಕ್ಟೇರ್ ಗಡಿ ಗುರುತಿಸಲಾಯಿತು. ಗುಂಡ್ಕಾನಹಳ್ಳಿ, ಜಾಜೂರು, ಕಲ್ಲನಾಯ್ಕನಹಳ್ಳಿ, ಭೈರನಾಯ್ಕನಹಳ್ಳಿ, ಕಾಳನಕೊಪ್ಪಲು, ಕಾಟೀಕೆರೆ, ಮುದ್ದನಹಳ್ಳಿ, ಹೊಸಳ್ಳಿ, ನಾಗತಿಹಳ್ಳಿ, ಗೀಜಿಹಳ್ಳಿ, ತಿರುಪತಿಹಳ್ಳಿ, ಕಾರೇಹಳ್ಳಿ, ಅಮರಗಿರಿ ಮಾಲೇಕಲ್ ತಿರುಪತಿ, ಕೆರೆ ಕೋಡಿಹಳ್ಳಿ ಗ್ರಾಮಗಳು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಯ ಪರಿಮಿತಿಗೆ ಸೇರ್ಪಡೆಗೊಂಡಿದ್ದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ರತ್ನಗಂಬಳಿ ಹಾಸಿದಂತಾಗಿದೆ. ಘೋಷಿತ ಪ್ರದೇಶದಲ್ಲಿ ರೈತರಿಂದ ಗುಂಟೆ ಲೆಕ್ಕದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹತ್ತಾರು ಹೆಕ್ಟೇರ್ ಭೂಮಿ ಖರೀದಿಸಿದ್ದಾರೆ. ಅಲ್ಲದೇ, ನೂರಾರು ಎಕರೆ ಸರ್ಕಾರಿ ಖರಾಬು ಜಮೀನು ಭೂ ಕಬಳಿಕೆ ಮಾಡುವ ಹುನ್ನಾರ ನಡೆದಿದೆ ಎನ್ನುವ ಗುರುತರ ಆರೋಪವೂ ನಗರಸಭೆ ಸದಸ್ಯರಿಂದಲೇ ಕೇಳಿಬಂದಿದೆ.

  ಆಕ್ರೋಶ: ಈಗಾಗಲೇ ನಿರ್ಮಾಣಗೊಂಡಿರುವ ಬಡಾವಣೆಗಳ ನಿವಾಸಿಗಳಿಗೆ ರಸ್ತೆ, ಕುಡಿಯುವ ನೀರು, ಯುಜಿಡಿ, ವಿದ್ಯುತ್ ಸೇರಿ ಯಾವುದೇ ಬಗೆಯ ಮೂಲಸೌಕರ್ಯ ಕಲ್ಪಿಸಿಲ್ಲ ಎನ್ನುವ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಬಾಲಾಜಿ ಬಡಾವಣೆ ನಿವಾಸಿಗಳು ಲೇಔಟ್ ನಿರ್ಮಿಸಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ತಿಂಗಳ ಹಿಂದೆ ಸಿ.ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದರು. ಪರಿಸ್ಥಿತಿ ಹೀಗಿದ್ದರೂ ತರಾತುರಿಯಲ್ಲಿ ಹೊಸ ಬಡಾವಣೆಗಳ ಅನುಮೋದನೆಗೆ ಮುಂದಾಗಿರುವುದು ಹುಬ್ಬೇರುವಂತೆ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ನಗರಸಭೆ ಸದಸ್ಯರ ಮನವಿ ಪುರಸ್ಕರಿಸಿ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

  ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಹೊಸ ಬಡಾವಣೆಗಳ ನಿರ್ಮಾಣ, ಅನುಮೋದನೆ ಕುರಿತ ಕಡತಗಳು ಕಚೇರಿಗೆ ಬಂದಿಲ್ಲ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ನೀಡುವ ನಿರ್ದೇಶನ ಪಾಲಿಸಲಿದ್ದು ಒತ್ತಡಕ್ಕೆ ಮಣಿಯುವುದಿಲ್ಲ. ಈಗಾಗಲೇ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.
  ಕೃಷ್ಣಮೂರ್ತಿ ಪೌರಾಯುಕ್ತ, ಅರಸೀಕೆರೆ

  ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ. ಜನಪ್ರನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುವ ಮುನ್ನವೇ ಫೈಲ್ ಕ್ಲಿಯರ್ ಮಾಡಿಸಲು ಹೊರಟಿರುವ ಮಾಹಿತಿ ಲಭ್ಯವಾಗಿದೆ. ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದೇವೆ. ಇದರ ಹೊರತಾಗಿಯೂ ಹೊಸ ಲೇಔಟ್‌ಗಳಿಗೆ ಅನುಮೋದನೆ ನೀಡಿದರೆ ನಗರಸಭೆ ಕಚೇರಿ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸಲು ಹಿಂದೇಟು ಹಾಕುವುದಿಲ್ಲ.
  ಜಾಕೀರ್ ಹುಸೇನ್ ನಗರಸಭೆ ಜೆಡಿಎಸ್ ಸದಸ್ಯ, ಅರಸೀಕೆರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts