ನೀರಾವರಿ ನಿಗಮ ಕಚೇರಿ ಸ್ಥಳಾಂತರಕ್ಕೆ ವಿರೋಧ

ಧಾರವಾಡ: ನೀರಾವರಿ ನಿಗಮದ ಕೇಂದ್ರ ಕಚೇರಿಯನ್ನು ಧಾರವಾಡದಿಂದ ಹೊಸಪೇಟೆಗೆ ಸ್ಥಳಾಂತರ ಮಾಡುವುದನ್ನು ಕೈ ಬಿಟ್ಟು ಇಲ್ಲಿಯೇ ಮುಂದುವರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ನಿಮಿತ್ತ ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಾರ್ಯಾಲಯನ್ನು ಧಾರವಾಡಕ್ಕೆ 2001ರಲ್ಲಿ ಸ್ಥಳಾಂತರಿಸಲಾಗಿತ್ತು. ಅಲ್ಲಿ ಐಐಟಿ ಆರಂಭವಾಗಿದ್ದರಿಂದ ನಿಗಮ ಶ್ರೀನಗರದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಕ್ರಮ ಜರುಗಿಸುತ್ತಿರುವುದು ಸ್ವಾಗತಾರ್ಹ. ಆದರೆ ಉತ್ತರ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಅವೈಜ್ಞಾನಿಕವಾಗಿ ಬೇರೆಡೆ ಸ್ಥಳಾಂತರಿಸುತ್ತಿರುವುದು ಸರಿಯಲ್ಲ. ಧಾರವಾಡದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನೀರಾವರಿ ನಿಗಮದ ಕಚೇರಿಯನ್ನು ಇಲ್ಲಿಯೇ ಮುಂದುವರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಕಪಟಕರ, ಪಾಲಿಕೆ ಸಭಾನಾಯಕ ವಿಜಯಾನಂದ ಶೆಟ್ಟಿ, ಮಾಜಿ ಮಹಾಪೌರ ಶಿವು ಹಿರೇಮಠ, ಈರಣ್ಣ ಹಪ್ಪಳಿ, ಟಿ.ಎಸ್. ಪಾಟೀಲ, ಸುರೇಶ ಬೆದರೆ, ಮೋಹನ ರಾಮದುರ್ಗ, ರಾಜು ಕೋಟೆನ್ನವರ ಅರವಿಂದ ರೇಗನಗೌಡರ, ಶರಣು ಅಂಗಡಿ, ದೇವರಾಜ ಶಹಪುರ, ಶ್ರೀನಿವಾಸ ಕೋಟ್ಯಾನ, ನಿರ್ಮಲಾ ಜವಳಿ, ಅನಸೂಯಾ ಹಿರೇಮಠ, ರೂಪಾ ವೀರೇಶನವರ, ಶಫಿ ಬಿಜಾಪುರಿ, ಪ್ರಮೋದ ಬಾಗಿಲರ, ಮಕ್ತುಂಹುಸೇನ ಲಷ್ಕರಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.