ಗಜೇಂದ್ರಗಡ: ರೈತರ ಜಮೀನು, ದೇವಾಲಯ ಹಾಗೂ ಮಠದ ಆಸ್ತಿಗಳ ಮೇಲೆ ವಕ್ಪ್ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ, ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಸೋಮವಾರ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಗಜೇಂದ್ರಗಡದಲ್ಲೂ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನಂತರ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಶಾಂತಿ, ಸಾಮರಸ್ಯದ ನಾಡಲ್ಲಿ ಕಾಂಗ್ರೆಸ್ ಸರ್ಕಾರ ವಕ್ಪ್ಮಂಡಳಿ ಮೂಲಕ ರಾಜ್ಯವನ್ನು ಆತಂಕದ ಸ್ಥಿತಿಗೆ ತಳ್ಳುತ್ತಿದೆ. ರೈತರ, ಮಠ- ಮಂದಿರಗಳ ಆಸ್ತಿಗಳನ್ನು ವಕ್ಪ್ ಮಂಡಳಿ ತನ್ನ ಹೆಸರಿಗೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಈಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ. ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ ಮಾತನಾಡಿ, ಅಧಿಕಾರದ ಆಸೆಗಾಗಿ ರಾಜ್ಯ ಸರ್ಕಾರ ಇದೇ ತೆರನಾದ ನಿಲುವು ಮುಂದುವರಿಸಿದಲ್ಲಿ ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಮೆರವಣಿಗೆಯು ಕಳಕಪ್ಪ ಬಂಡಿ ಅವರ ಗೃಹ ಕಚೇರಿಯಿಂದ ಪ್ರಾರಂಭಗೊಂಡು ಕಾಲಕಾಲೇಶ್ವರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಅಶೋಕ ವನ್ನಾಲ, ಉಮೇಶ ಪಾಟೀಲ, ಬಾಳಾಜಿರಾವ್ ಭೋಸಲೆ, ಶಿವಬಸಪ್ಪ ಬೆಲ್ಲದ, ಶ್ರೀನಿವಾಸ ಸವದಿ, ಕುಮಾರ ರಾಠೋಡ, ಬುಡ್ಡಣ್ಣ ಮೂಲಿಮನಿ, ಅಂದಪ್ಪ ಅಂಗಡಿ, ಮಹಾಂತೇಶ ಪೂಜಾರ ಇದ್ದರು.