ಶುಲ್ಕ ವಿಧಿಸುವ ಸರ್ಕಾರದ ನೀತಿಗೆ ಖಂಡನೆ I ಸ್ಥಳಕ್ಕೆ ಶಾಸಕ ಭೇಟಿ, ಸಮಸ್ಯೆ ಆಲಿಕೆ
ಜಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ನೀತಿ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ದಾವಣಗೆರೆ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಹೊಸ ಬಸ್ ನಿಲ್ದಾಣ, ಡಾ. ರಾಜ್‌ಕುಮಾರ್ ರಸ್ತೆ ಮಹಾತ್ಮ ಗಾಂಧಿ ಹಳೇ ವೃತ್ತ ಮೂಲಕ ಬೆಸ್ಕಾಂ ಕಚೇರಿಗೆ ತೆರಳಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ವಿವಿಧ ಸಮಸ್ಯೆಗಳಿಂದ ರೈತರು ಇಂದಿನ ದಿನಗಳಲ್ಲಿ ತುಂಬ ಸಂಕಷ್ಟದಲ್ಲಿ ಬದುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆ ಜಾರಿಗೆ ತರುವ ಮೂಲಕ ಗಾಯದ ಮೇಲೆ ಬರೆ ಎಳೆದಿವೆ. ಇದೀಗ ರೈತರಿಗೆ ಸಂಬಂಧಿಸಿದ ಕೊಳವೆಬಾವಿಗೆ ಆರ್‌ಆರ್ ನಂಬರ್ ನೀಡಿ ಅವುಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ವಿದ್ಯುತ್ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ತ್ವರತಿಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನಿಯ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ಕಾನನಕಟ್ಟೆ, ದಿದ್ದಿಗಿ, ರಂಗಾಪುರ, ಹನುಮಂತಾಪುರ, ಕೆಳಗೋಟೆ, ಬೈರನಾಯಕನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದು ವಾರವಾದರೂ ತೆರವುಗೊಳಿಸಿ, ಹೊಸ ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಿಲ್ಲ. ಸರ್ಕಾರದಿಂದ ಸಂಬಳ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕು ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಮಾತನಾಡಿ, ರೈತರು ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ವರ್ಷವಿಡಿ ಕೃಷಿಯಲ್ಲಿ ಕೆಲಸ ಮಾಡಿದರೂ ಸಾಲ ತೀರುತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಬೇಕಾದ ಮೂಲಸೌಕರ್ಯಗಳಾದ ಭೂಮಿ, ರಸ್ತೆ, ನೀರು, ವಿದ್ಯುತ್ ಬಿತ್ತನೆ ಬೀಜಗಳು, ಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡುವುದು ಸರ್ಕಾರದ ಜವಾಬ್ದಾರಿ. ಆದರೆ, ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಸರ್ಕಾರಗಳು ರೈತ ವಿರೋಧಿ ಕಾಯ್ದೆ ತಂದು ಒಕ್ಕಲೆಬ್ಬಿಸುತ್ತಿವೆ ಎಂದು ಆರೋಪಿಸಿದರು.
ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಪಿ. ಗಂಗಾಧರಪ್ಪ, ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಹಸಿರು ಸೇನೆ ತಾಲೂಕು ಉಪಾಧ್ಯಕ್ಷ ಸಹದೇವ ರೆಡ್ಡಿ, ಉಪಾಧ್ಯಕ್ಷ ಚಿಕ್ಕಬನ್ನಿಹಟ್ಟಿ ವೀರೇಶ್, ಮುಖಂಡರಾದ ಎಂ.ಶರಣಪ್ಪ, ಕೆಂಚಪ್ಪ, ಯರಲಕಟ್ಟೆ ಕೆಂಚಪ್ಪ, ಕಾನನಕಟ್ಟೆ ಅನಿಲ್, ರಮೇಶ್, ಮಡ್ರಳ್ಳಿ ತಿಪ್ಪೇಸ್ವಾಮಿ, ಪರಸರಪ್ಪ, ಪಾಪಣ್ಣ, ಕಸವ್ವನಹಳ್ಳಿ ನಾಗರಾಜ್, ಮೇಘನಾಥ್, ತಿಪ್ಪೇಸ್ವಾಮಿ ಇತರರಿದ್ದರು.
ಸ್ಥಳಕ್ಕೆ ಶಾಸಕ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು. ಆಧಾರ್ ಜೋಡಣೆಯಿಂದ ತೊಂದರೆ ಆಗದಂತೆ ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು. ರೈತರು ಭಯಪಡುವುದು ಬೇಡ. ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಭರವಸೆ ನೀಡಿದರು.
ಕೃಷಿ ಕೊಳವೆಬಾವಿಗಳಿಗೆ 2023ರಿಂದ ಟಿಸಿ ವಿದ್ಯುತ್ ಕಂಬ, ವೈರ್ ಮತ್ತಿತರ ಸಾಮಗ್ರಿಗಳನ್ನು ಕೃಷಿಕರು ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬೇಕೆಂಬ ಕಾನೂನು ಜಾರಿಗೊಳಿಸಿದೆ. ರಾಜ್ಯದಲ್ಲಿ ರೈತರು ಕೊಳವೆಬಾವಿ ಆಶ್ರಯಿಸಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಆದರೆ, ಸರ್ಕಾರಗಳು ರೈತರ ನೆರವಿಗೆ ಬರಬೇಕು.
I ಸಿ.ಎಂ. ಹೊಳೆ ಚಿರಂಜೀವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ.