ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿದ ಪ್ರತಿಪಕ್ಷಗಳ ನಾಯಕರು

ಕೋಲ್ಕತ: ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಧರಣಿ ಕುಳಿತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ.

ಚಂದ್ರಬಾಬು ನಾಯ್ಡು, ಅರವಿಂದ್​ ಕೇಜ್ರಿವಾಲ್​, ಅಖಿಲೇಶ್​ ಯಾದವ್, ತೇಜಸ್ವಿ ಯಾದವ್​, ಓಮರ್​ ಅಬ್ದುಲ್ಲಾ, ಅಹಮದ್​ ಪಟೇಲ್​, ಎಂ.ಕೆ. ಸ್ಟಾಲಿನ್​ ಸೇರಿದಂತೆ ಹಲವು ನಾಯಕರು ಮಮತಾ ಬ್ಯಾನರ್ಜಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರೊಂದಿಗೆ ಸಂಫುಟದ ಹಿರಿಯ ಸಚಿವರು, ಕೋಲ್ಕತ ಮೇಯರ್​ ಫಿರ್ಹಾನ್​ ಹಕೀಮ್​, ಕೋಲ್ಕತ ಪೊಲೀಸ್​ ಕಮಿಷನರ್​ ರಾಜೀವ್​ ಕುಮಾರ್​, ಪಶ್ಚಿಮ ಬಂಗಾಳ ಡಿಜಿ ವೀರೇಂದ್ರ ಮತ್ತು ಎಡಿಜಿ ಅನುಜ್​ ಶರ್ಮಾ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಧರಣಿ ಕುಳಿತ ನಂತರ ಟ್ವೀಟ್​ ಮಾಡಿರುವ ಕೇಜ್ರಿವಾಲ್​ ‘ನಾನು ಇದೀಗ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದ್ದು, ಅವರಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಜೋಡಿ ತೆಗೆದುಕೊಂಡಿರುವ ನಿರ್ಧಾರ ವಿಲಕ್ಷಣವಾಗಿದೆ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.  (ಏಜೆನ್ಸೀಸ್​)