ಗಣರಾಜ್ಯೋತ್ಸವ ಪಥಸಂಚಲನಕ್ಕೆ ತಡೆ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳು ಗ್ರಾಮದ ಬೀದಿಗಳಲ್ಲಿ ವಾದ್ಯಗಳೊಂದಿಗೆ ಪಥ ಸಂಚಲನ ಸಾಗುತ್ತಿದ್ದಾಗ ಪ್ರಾರ್ಥನಾ ಮಂದಿರದೆದುರು ಒಂದು ಕೋಮಿನ ಜನರು ತಡೆದು ವಾಗ್ವಾದ ನಡೆಸಿದ ಘಟನೆ ತಾಲೂ ಕಿನ ಹಿರೂರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಈ ಸಂಬಂಧ ಶಾಲಾ ಎಸ್​ಡಿಎಂಸಿಯವರು ಅಬ್ದುಲ್​ಸಾಬ ಗುಲಾಬಸಾಬ ದರ್ಗಾ, ಮಕ್ಬೂಲ ಅಹಮ್ಮದ ಹಜರೇಸಾಬ ಹಂಚಿನಮನಿ, ಮಹ್ಮದ ಅಜಮ್ ಭಕ್ಷುಸಾಬ ಹಾನಗಲ್ಲ, ಹಜರೇಸಾಬ ಹಂಚಿನಮನಿ, ರಿಜಾಜ ಸಯ್ಯದಮತಾಬಸಾಬ ಹಳೇಕೋಟಿ, ಖಾಜಾಮೈನುದ್ದೀನ್ ಮಹ್ಮದ ಖಾನಸಾಬ್ ಅಕ್ಕಿ, ಮಹ್ಮದಸಾಧೀಕ ಮಹಬೂಬ ಸಾಬ ರುಸ್ತುಂಮಲಿ, ಅನಿಸ್​ಅಹ್ಮದ ಗೌಸ್​ವೋದೀನ್ ದಾದಾಮಿಯಾನವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ನಿಮಿತ್ತ ಗ್ರಾಮದಲ್ಲಿನ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ವಾದ್ಯಗಳನ್ನು ಬಾರಿಸುತ್ತಿದ್ದ ವಿದ್ಯಾರ್ಥಿಗಳನ್ನು ಮುಸ್ಲಿಂ ಸಮುದಾಯದ ಕೆಲವರು ಗ್ರಾಮದ ಮಧ್ಯಭಾಗದ ಪ್ರಾರ್ಥನಾ ಮಂದಿರದ ಎದುರು ತಡೆದು, ವಾದ್ಯ ಬಾರಿಸದಂತೆ ತಾಕೀತು ಮಾಡಿದ್ದಾರೆ. ಶಾಲಾ ಮಕ್ಕಳು ಬಾರಿಸುತ್ತಿದ್ದ ಬ್ಯಾಂಡ್ ಸೆಟ್​ಗಳನ್ನು ಕಸಿದುಕೊಳ್ಳು ಯತ್ನಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಆಕ್ರೋಶಕ್ಕೊಳಗಾದ ಗ್ರಾಮಸ್ಥರು, ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿದಾಗ ಎರಡೂ ಕೋಮುಗಳ ನಡುವೆ ಕೈ-ಕೈ ಮಿಲಾಯಿ ಸುವ ಹಂತಕ್ಕೆ ಹೋಗಿತ್ತು. ಘಟನೆಯಲ್ಲಿ ಐವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ನಂತರ ಗ್ರಾಮಸ್ಥರು ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲು ತೀರ್ವನಿಸಿದರು. ಗಲಾಟೆಗೆ ಕಾರಣರಾದ ಕಿಡಿಗೇಡಿಗಳು ಈಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪರಿಸ್ಥಿತಿ ಶಾಂತ ವಾಗಿದೆ. ಹಾನಗಲ್ಲ ಪಿಎಸ್​ಐ ಗುರುರಾಜ ಮೈಲಾರ, ಆಡೂರ ಪಿಎಸ್​ಐ ಟಿ. ಮುರುಗೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಗಣೇಶ ವಿಸರ್ಜನೆ ಸಂದರ್ಭದಲ್ಲೂ ಇದೇ ಪ್ರಾರ್ಥನಾ ಮಂದಿರದ ಎದುರು ಮಂಗಲವಾದ್ಯ ಬಾರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಗಣೇಶ ಮೂರ್ತಿ ವಿಸರ್ಜನೆಯನ್ನೇ ಮುಂದೂಡಲಾಗಿತ್ತು. ನಂತರ ಪೊಲೀಸರ ಬಿಗಿ ಬಂದೋಬಸ್ತ್​ನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕೈಗೊಳ್ಳಲಾಗಿತ್ತು.

ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ: ಹಾನಗಲ್ಲ ತಾಲೂಕು ಹಿರೂರ ಗ್ರಾಮದಲ್ಲಿ ಗಣರಾಜ್ಯೋತ್ಸವದ ಪ್ರಭಾತಪೇರಿಗೆ ಅಡ್ಡಿಪಡಿಸಿದ ಒಂದು ಕೋಮಿನ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ರಾಷ್ಟ್ರ ಹಿತರಕ್ಷಣಾ ಸಮಿತಿಯಿಂದ ಶನಿವಾರ ಎಸ್​ಪಿ ಕೆ. ಪರಶುರಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯ ಮಕ್ಕಳು ಪ್ರಭಾತಪೇರಿ ಹೋಗುತ್ತಿದ್ದ ಸಮಯದಲ್ಲಿ ಒಂದು ಕೋಮಿನ 10ಕ್ಕೂ ಅಧಿಕ ವ್ಯಕ್ತಿಗಳು, ‘ನೀವು ಮಸೀದಿ ಮುಂದೆ ವಾದ್ಯಗಳನ್ನು ನುಡಿಸುತ್ತ ತೆರಳುವಂತಿಲ್ಲ’ ಎಂದು ವಿದ್ಯಾರ್ಥಿಗಳಿಗೆ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹಬ್ಬದ ಆಚರಣೆಗೆ ಅಡ್ಡಿಪಡಿಸಿರುವುದು ರಾಷ್ಟ್ರದ್ರೋಹದ ಕೃತ್ಯವಾಗಿದೆ. ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಹಲವಾರು ಬಾರಿ ಕಾನೂನು ಬಾಹಿರ ಚಟುವಟಿಕೆಗಳನ್ನು ಒಂದು ಕೋಮಿನ ವ್ಯಕ್ತಿಗಳು ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೂಡಲೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ರಾಷ್ಟ್ರದ್ರೋಹ, ಹಲ್ಲೆ, ಕೋಮು ಪ್ರಚೋದಿತ ಗಲಭೆ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಡಾ. ಸಂತೋಷ ಆಲದಕಟ್ಟಿ, ಕಿರಣ ಶೆಟ್ಟಿ, ಕಿರಣ ಕೋಣನವರ, ರವಿ ಅಂಗಡಿ, ಅಭಿಷೇಕ ಉಪ್ಪಿನ, ಕಿರಣ ಸಿ.ಬಿ., ಕೋಟ್ರೇಶ ಮಂಜಾಲಪುರ, ಅಭಿಲಾಷ ಎಸ್.ಎಂ., ಜಿ.ಆರ್. ಚಪ್ಪರದಳ್ಳಿಮಠ ಇತರರು ಇದ್ದರು.