ವಿದ್ಯುತ್ ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪ

ಮಂಗಳೂರು: ವಿದ್ಯುತ್ ದರ ಏರಿಸುವ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಪ್ರಸ್ತಾವನೆಗೆ ರೈತರು ಸೇರಿದಂತೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ 706.39 ಕೋಟಿ ರೂ. ಕಂದಾಯ ಕೊರತೆ ಉಂಟಾಗಿದೆ. ಇದನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಅವಶ್ಯವಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮೆಸ್ಕಾಂ ಕೋರಿಕೆ ಸಲ್ಲಿಸಿತ್ತು.
ದ.ಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಶಂಭುದಯಾಳ್ ಮೀನಾ ವಿದ್ಯುತ್ ದರ ಪರಿಷ್ಕರಣೆ ಕುರಿತು ವಿಚಾರಣೆ ನಡೆಸಿ ಮೆಸ್ಕಾಂ ಅಧಿಕಾರಿಗಳು ಮತ್ತು ಸಾರ್ವಜನಿಕರ ವಾದ ಆಲಿಸಿದರು. ಈ ಸಂದರ್ಭ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡದಂತೆ ಗ್ರಾಹಕ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

 ದರ ಏರಿಕೆ ಪ್ರಸ್ತಾವನೆ: ಸಭೆ ಆರಂಭದಲ್ಲಿ ದರ ಏರಿಕೆ ಬೇಡಿಕೆ ಮಂಡಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. 2019-20ನೇ ಸಾಲಿನಲ್ಲಿ ಮೆಸ್ಕಾಂ 3447.12 ಕೋಟಿ ರೂ. ಕಂದಾಯ ನಿರೀಕ್ಷಿಸಿದೆ. ಆದರೆ ವೆಚ್ಚ 4,153 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 706.39 ಕೋಟಿ ರೂ. ಕಂದಾಯ ಕೊರತೆ ಸರಿದೂಗಿಸಲು ಪ್ರತಿ ಯೂನಿಟ್‌ಗೆ 1.38 ರೂ. ದರ ಹೆಚ್ಚಿಸುವ ಅಗತ್ಯವಿದೆ ಎಂದರು.

ಕಳೆದ ಸಾಲಿನಲ್ಲಿ 4,881.92 ಮಿಲಿಯನ್ ಯೂನಿಟ್ ವಿದ್ಯುತ್ ಮಾರಾಟ ಮಾಡಲಾಗಿದೆ. ಈ ಸಾಲಿನಲ್ಲಿ 5,006.39 ಮಿಲಿಯನ್ ಯೂನಿಟ್ ಹಾಗೂ 2019-20ನೇ ಸಾಲಿನಲ್ಲಿ 5,134.92 ಮಿಲಿಯನ್ ಯೂನಿಟ್ ವಿದ್ಯುತ್ ಮಾರಾಟ ಗುರಿ ಇದೆ. ವಿದ್ಯುತ್ ಬಳಕೆಯಲ್ಲಿ ಶೇ.2.55 ಹೆಚ್ಚಳ ದಾಖಲಾಗಿದೆ ಎಂದು ವಿವರ ನೀಡಿದರು.

ದರ ಕಡಿತಕ್ಕೆ ಅವಕಾಶ: ಗ್ರಾಹಕ ಸಂಘಟನೆಯ ಸತ್ಯನಾರಾಯಣ ಉಡುಪ ಮಾತನಾಡಿ, ಹತ್ತು ವರ್ಷದಿಂದ ವಿವಿಧ ಕಂಪನಿಗಳು ಮೆಸ್ಕಾಂಗೆ 1,231 ಕೋಟಿ ರೂ. ಪಾವತಿಸಲು ಬಾಕಿ ಇದೆ. ಇದನ್ನು ವಸೂಲಿ ಮಾಡಿದರೆ ದರ ಏರಿಕೆ ಮಾಡುವ ಬದಲು ಕಡಿಮೆ ಮಾಡಲು ಅವಕಾಶ ಇದೆ. ಯುಪಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಕಂಪನಿಗಳಿಂದ ಮೆಸ್ಕಾಂ ದುಬಾರಿ ದರಕ್ಕೆ ವಿದ್ಯುತ್ ಖರೀದಿಸುತ್ತಿದೆ. ಇದು 150 ಕೋಟಿ ರೂ. ಹೆಚ್ಚುವರಿ ನಷ್ಟಕ್ಕೆ ಕಾರಣವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಮೆಸ್ಕಾಂ ಎಲ್ಲ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡದೆ, ನಿರಂತರ ವಿದ್ಯುತ್ ಪೂರೈಸದೆ ಸರ್ಕಾರದಿಂದ ನಿಯಮ ಬಾಹಿರವಾಗಿ ಪೂರ್ತಿ ಸಬ್ಸಿಡಿ ಮೊತ್ತ ಪಡೆಯುತ್ತಿದೆ ಎಂದು ಆರೋಪಿಸಿದರು.

ಹೊಸ ವಿದ್ಯುತ್ ಸಂಪರ್ಕಕ್ಕೆ ಅಭಿವೃದ್ಧಿ ಹೆಸರಿನಲ್ಲಿ 10 ಸಾವಿರ ರೂ. ಶುಲ್ಕ ವಸೂಲಿ ಮಾಡುವುದಕ್ಕೆ ಗ್ರಾಹಕರ ಸಂಘಟನೆಯ ರಾಮಕೃಷ್ಣ ಶರ್ಮ ಬಂಟಕಲ್ಲು ಆಕ್ಷೇಪ ವ್ಯಕ್ತಪಡಿಸಿದರು. ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಕೆನರಾ ಛೇಂಬರ್ ಅಧ್ಯಕ್ಷ ಅಬ್ದುಲ್ ಹಮೀದ್ ಒತ್ತಾಯಿಸಿದರು.
ಮೆಸ್ಕಾಂನ ಕಂಟ್ರೋಲ್ ರೂಂ 1912ಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಮೆಸ್ಕಾಂ ಕಚೇರಿಗಳಿಗೆ ಕರೆ ಮಾಡಿದರೆ, ಸಿಬ್ಬಂದಿ ಉಡಾಫೆಯಿಂದ ಉತ್ತರಿಸುತ್ತಾರೆ. ಮೆಸ್ಕಾಂ ಮೂಲಕ ವಿತರಣೆಯಾದ ಎಲ್‌ಇಡಿ ಬಲ್ಬ್‌ಗಳು ಕಳಪೆಯಾಗಿವೆ. ಬದಲಾಯಿಸಲು ಕೋರಿದರೆ ನಮಗೆ ಸಂಬಂಧವಿಲ್ಲ ಎಂದು ಮೆಸ್ಕಾಂನವರು ಉತ್ತರಿಸುತ್ತಾರೆ ಎಂದು ಸಾರ್ವಜನಿಕರು ದೂರಿದರು.

ಆಯೋಗ ಸದಸ್ಯರಾದ ಎಚ್.ಡಿ.ಅರುಣ್‌ಕುಮಾರ್, ಎಚ್.ಎಂ.ಮಂಜುನಾಥ್, ಕಾರ್ಯದರ್ಶಿ ಪಾಂಡುರಂಗ ನಾಯಕ್, ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಆರ್ಥಿಕ ಸಲಹೆಗಾರ ಆರ್.ಎಸ್.ಜಂಬಗಿ, ಮಂಗಳೂರು ವಿಭಾಗ ಮುಖ್ಯ ಅಭಿಯಂತರ ಮಂಜಪ್ಪ, ಶಿವಮೊಗ್ಗ ವಿಭಾಗ ಮುಖ್ಯ ಅಭಿಯಂತರ ಎಂ.ಸಿ.ನರೇಂದ್ರ ಉಪಸ್ಥಿತರಿದ್ದರು.

ಚಾರಿಟೆಬಲ್ ಹೆಸರಲ್ಲಿ ಲಾಭ?: ಚಾರಿಟೆಬಲ್ ಎಂದು ಹೆಸರು ನೋಂದಾಯಿಸಿದ ಸಂಸ್ಥೆಗಳು ನಡೆಸುವ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಆದರೆ ಈ ಸಂಸ್ಥೆಗಳು ಜನರಿಗೆ ಸೇವೆ ನೀಡದೆ ಕೋಟ್ಯಂತರ ರೂ. ಹಣ ಸಂಗ್ರಹಿಸುತ್ತಿವೆ. ಮಂಗಳೂರಿನಲ್ಲಿ ಸಭಾಂಗಣ ನಿರ್ಮಿಸಿ ಲಕ್ಷಾಂತರ ರೂ. ಬಾಡಿಗೆ ವಸೂಲಿ ಮಾಡುವ ಚಾರಿಟೆಬಲ್ ಸಂಸ್ಥೆಗಳಿವೆ ಎಂದು ಗ್ರಾಹಕರು ಆಯೋಗದ ಅಧ್ಯಕ್ಷರ ಗಮನ ಸೆಳೆದರು.

ಸಲಹೆ ಪರಿಗಣಿಸಿ ತೀರ್ಮಾನ: ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಗೆ ಆದ್ಯತೆ ನೀಡಬೇಕು. ಗ್ರಾಹಕ ಸ್ನೇಹಿಯಾಗಿ ಮೆಸ್ಕಾಂ ವರ್ತಿಸಬೇಕು ಎಂದು ಆಯೋಗ ಅಧ್ಯಕ್ಷ ಶಂಭುದಯಾಳ್ ಮೀನಾ ಸೂಚನೆ ನೀಡಿದರು. ಸಾರ್ವಜನಿಕರು ಆಯೋಗಕ್ಕೆ ನೀಡಿದ ಸಲಹೆಗಳನ್ನು ಪರಿಗಣಿಸಿ ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದದರು.

ಗ್ರಾಹಕ ಸ್ನೇಹಿ ಆ್ಯಪ್‌ಗೆ ಸೂಚನೆ: ಮೆಸ್ಕಾಂ ಇನ್ನು ಗ್ರಾಹಕ ಸ್ನೇಹಿ ಆ್ಯಪ್ ಹೊಂದಲಿದೆ. ಗ್ರಾಹಕರು ಈಗ ಎಟಿಪಿ ಯಂತ್ರ, ಮಂಗಳೂರು, ಶಿವಮೊಗ್ಗ ಒನ್ ಕೇಂದ್ರ, ಕರ್ನಾಟಕ ಮೊಬೈಲ್ ಒನ್, ಅಂಚೆ ಕಚೇರಿ, ನ್ಯಾಷನಲ್‌ಅಟೋಮೇಟೆಡ್ ಕ್ಲಿಯರಿಂಗ್ ಹೌಸ್(ಎನ್‌ಎಸಿಎಚ್), ಪೇಟಿಯಂ ಮೂಲಕ ಬಿಲ್ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮೆಸ್ಕಾಂಗೆ ಪ್ರತ್ಯೇಕ ಆ್ಯಪ್ ರಚನೆ ಬಗ್ಗೆ ಚಿಂತನೆ ನಡೆಸುವಂತೆ ಆಯೋಗ ನಿರ್ದೇಶನ ನೀಡಿದೆ.

ಉತ್ತಮ ಸೇವೆಗೆ ಮೆಸ್ಕಾಂ ಬದ್ಧ: ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮೆಸ್ಕಾಂ ಸದಾ ಬದ್ಧವಾಗಿದೆ. ಸಿಬ್ಬಂದಿ ನಡವಳಿಕೆ ಬಗ್ಗೆ ವ್ಯಾಪಕ ದೂರು ಹಿನ್ನೆಲೆಯಲ್ಲಿ ಅವರಿಗೆ ತಿಳಿವಳಿಕೆ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. 10 ಸಾವಿರ ನೀರಾವರಿ ಪಂಪ್‌ಸೆಟ್‌ಗಳನ್ನು ಇನ್ನು 14 ಸಾವಿರ ಪಂಪ್‌ಸೆಟ್ ಸಕ್ರಮಗೊಳಿಸಲು ಬಾಕಿ ಇದೆ. ನಿರಂತರ ಜ್ಯೋತಿ ಯೋಜನೆಯಲ್ಲಿ 128 ಫೀಡರ್‌ಗಳನ್ನು ಅಳವಡಿಸಲಾಗುವುದು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ರಾಯಮನೆ ತಿಳಿಸಿದರು.