ಬೆಳಗಾವಿ: ಅವಕಾಶಗಳ ಸದುಪಯೋಗದಿಂದ ಯಶಸ್ಸು

ಬೆಳಗಾವಿ: ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಸಮಯಪ್ರಜ್ಞೆ, ಶಿಸ್ತು ಹಾಗೂ ಸಾಮಾಜಿಕ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಕೂಲ್ ಆಪ್ ಎಜ್ಯುಕೇಷನ್ ಸಹಾಯಕ ಉಪನ್ಯಾಸಕಿ, ನಿರ್ದೇಶಕಿ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ ಹೇಳಿದ್ದಾರೆ.

ನಗರದ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಪ್ರಸಕ್ತ ಸಾಲಿನ ಪಪೂ, ಸ್ನಾತಕ ಹಾಗೂ ಎಂ.ಕಾಂ. ಸ್ನಾತಕೋತ್ತರ ವಿಭಾಗಗಳ ಶೈಕ್ಷಣಿಕ ತರಗತಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ದಲ್ಲಿ ನಿರಂತರವಾದ ಪರಿಶ್ರಮ, ಶಿಸ್ತು, ಸೃಜನಶೀಲ ಗುಣ, ಸಂವಹನ ಕೌಶಲ ಹೊಂದಿರಬೇಕು. ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ವ್ಯಕ್ತಿತ್ವ ಹೊಂದಬೇಕು ಎಂದರು.

ಪ್ರಾಚಾರ್ಯ ಪ್ರೊ.ಎಚ್.ಎಸ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನ ಮಾಡಿ ಗುರಿ ತಲುಪಬೇಕು. ತಮ್ಮಲ್ಲಿರುವ ಸಾಮರ್ಥ್ಯದ ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಸೋಲು, ಗೆಲುವುಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದರು.

ಪ್ರಾಚಾರ್ಯ ಪ್ರೊ.ಸಂಗೀತಾ ದೇಸಾಯಿ, ಡಾ.ಸಂಜಯ ಪೂಜಾರಿ, ಪ್ರೊ.ನಾಗೇಶ್ವರ ಡೆಮಿನಕೊಪ್ಪ, ಡಾ.ಷಣ್ಮುಖ ಕುಚಬಾಳ, ಪ್ರೊ.ಉಮೇಶ ಕಾಳೆ, ಪ್ರೊ.ಶಿವಪ್ರಸಾದ ಭಗವಂತನವರ, ಪ್ರೊ.ಭಾರತಿ ಎಸ್.ಬಿ., ಪ್ರೊ.ನಿಂಗಪ್ಪ ಸಬರದ, ಪ್ರೊ.ಸಂಜೀವ ಕುಮಾರಮಠ, ಪ್ರೊ.ಶಿವಪ್ರಸಾದ ಭಗವಂತನವರ, ಐಶ್ವರ್ಯ ಸಾಲಿಮಠ, ಶಾಂತಲಾ ಶಿವಕುಮಾರ, ನಮಿತಾ ಸುರೂಶಿ ಇದ್ದರು. ನವೀನ ಬಸ್ಮೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು.