ಇವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ ಮುಖಂಡರು ಹುನ್ನಾರ ನಡೆಸಿದ್ದಾರಂತೆ, ಪ್ರಿಯಾಂಕಾ ಹೇಳಿದ್ದು ಯಾರ ಬಗ್ಗೆ?

ವಯನಾಡು: ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳ ಮುಖಂಡರು ರಾಹುಲ್​ ಗಾಂಧಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹುನ್ನಾರ ನಡೆಸಿದ್ದಾರೆ. ರಾಹುಲ್​ ಅವರನ್ನು ಹುಟ್ಟಿನಿಂದ ಬಲ್ಲ ನನಗೆ ಅದು ಅವರ ನಿಜವಾದ ವ್ಯಕ್ತಿತ್ವ ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ವಯನಾಡಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಹುಲ್​ ಗಾಂಧಿ ಅವರು ಜನಿಸಿದ ದಿನದಿಂದಲೂ ನಾನು ಬಲ್ಲೆ. ಆದ್ದರಿಂದಲೇ ಅವರ ಪರವಾಗಿ ಮತ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಕಳೆದ 10 ವರ್ಷಗಳಿಂದ ರಾಹುಲ್​ ಗಾಂಧಿ ಅವರ ನಿಜ ವ್ಯಕ್ತಿತ್ವವನ್ನು ಮರೆಮಾಚಿ, ಅದಕ್ಕೆ ಮಸಿ ಬಳಿದು ಕೆಟ್ಟದಾಗಿ ಚಿತ್ರಿಸಲು ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳ ಮುಖಂಡರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 5 ವರ್ಷಗಳ ಹಿಂದೆ ಬಿಜೆಪಿ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟ ಜನರು ಅದನ್ನು ಗೆಲ್ಲಿಸಿದರು. ಆದರೆ, ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷ ಅಧಿಕಾರ ತನಗೆ ಸೇರಿದ್ದು ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಜನರ ಹಿತವನ್ನು ಕಡೆಗಣಿಸಿತು. ಅಧಿಕಾರದ ಮದ ಅದೆಷ್ಟು ಏರಿತ್ತೆಂದರೆ, ಆ ಪಕ್ಷದ ಅಧ್ಯಕ್ಷರು ಭಾರತದ ಪ್ರತಿಯೊಬ್ಬ ಪ್ರಜೆಯ ಖಾತೆಗೂ 15 ಲಕ್ಷ ರೂ. ಸಂದಾಯ ಮಾಡುವುದಾಗಿ ಹುಸಿ ಭರವಸೆ ನೀಡಿ ಜನರನ್ನು ವಂಚಿಸಿದರು ಎಂದು ದೂರಿದರು. (ಏಜೆನ್ಸೀಸ್​)