ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯೋಣ, ದೇಶಕ್ಕಾಗಿ ಒಂದಾಗೋಣ: ಎಚ್​.ಡಿ ದೇವೇಗೌಡ

ಕೋಲ್ಕತ: “ಲೋಕಸಭೆ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ನಾವು ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡಬೇಕಿದೆ,” ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಇಂದು ನಡೆದ ಯುನೈಟೆಡ್​ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್​ನ ವರಿಷ್ಠರೂ ಆಗಿರುವ ದೇವೇಗೌಡರು, ” ದೇಶದ ಸಣ್ಣ ಸಣ್ಣ ಪಕ್ಷಗಳ ಹಿರಿಯ ನಾಯಕರು ಒಟ್ಟುಗೂಡಿ, ಉತ್ತಮ ಆಡಳಿತಕ್ಕಾಗಿ ನಕ್ಷೆಯೊಂದನ್ನು ರೂಪಿಸಬೇಕಿದೆ,” ಎಂದು ಅಭಿಪ್ರಾಯಪಟ್ಟರು.

“ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮಗಿರುವ ಅತ್ಯಂತ ದೊಡ್ಡ ಸವಾಲೆಂದರೆ ಅದು ಸೀಟು ಹಂಚಿಕೆಗೆ ಸಂಬಂಧಿಸಿದ್ದು. ಆದರೆ, ಬಿಜೆಪಿಯನ್ನು ಸೋಲಿಸುವ ಒಂದೇ ಉದ್ದೇಶಕ್ಕೆ ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇಬೇಕಾಗಿದೆ. ಜನರೂ ಕೂಡ ಹೊಸ ಸರ್ಕಾರವೊಂದನ್ನು ಬಯಸಿದ್ದಾರೆ ಎಂಬುದನ್ನು ಮರೆಯಬಾರದು,” ಎಂದು ದೇವೇಗೌಡರು ಹೇಳಿದರು.

ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಸ್ಥಿರ ಸರ್ಕಾರವೊಂದು ಅತ್ಯಗತ್ಯ. ಆದರೆ, 2014ರಲ್ಲಿ 282ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ, ಬಲಿಷ್ಠ ಭಾರತವನ್ನು ಕಟ್ಟುವುದರ ಬದಲಿಗೆ ದೇಶದ ಜಾತ್ಯತೀತ ತತ್ವವನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡವಿತು,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ನರೇಂದ್ರ ಮೋದಿಯ ನಂತರ ಪ್ರಧಾನ ಮಂತ್ರಿ ಯಾರು ಎಂಬ ಪ್ರಶ್ನೆಯನ್ನು ಆಗಿಂದಾಗ್ಗೆ ಕೇಳಲಾಗುತ್ತಿದೆ. ಆದರೆ, ಬಿಜೆಪಿಯೇತರ ಪಕ್ಷಗಳು ಐದು ವರ್ಷ ಸ್ಥಿರ ಸರ್ಕಾರ ನೀಡುವ ಭರವಸೆಯನ್ನು ಮೊದಲು ದೇಶದ ಜನತೆಗೆ ನೀಡಬೇಕು. ಈ ಸಮಾವೇಶದಲ್ಲಿ ಸೇರಿರುವ ಎಲ್ಲ ನಾಯಕರು ಈ ಬಗ್ಗೆ ಆಶ್ವಾಸನೆ ನೀಡಬೇಕಿದೆ,” ಎಂದು ಗೌಡ ತಿಳಿಸಿದರು.

“ಮೈತ್ರಿ ಸರ್ಕಾರಗಳು ಉತ್ತಮ ಆಡಳಿತ ನೀಡಲಾರವು ಎಂದು ಮೋದಿ ಹೇಳುತ್ತಲೇ ಇರುತ್ತಾರೆ. ಆದರೆ, ಅವರು ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. 1996-97ರ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ನಾನು ದೇಶದಲ್ಲಿ ಉತ್ತಮ ಆಡಳಿತ ನೀಡಿದ್ದೆ,” ಎಂದು ದೇವೇಗೌಡರು, ತಾವು ಜಾರಿಗೆ ತಂದ ಹಲವು ಯೋಜನೆಗಳನ್ನು ಉಲ್ಲೇಖಿಸಿದರು.