ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಾಶ್ಮೀರದ ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಯಾಗಿ ಭಾರತ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ಅಲ್ಲಿಯ ಉಗ್ರರ ನೆಲೆಗಳನ್ನು ದ್ವಂಸಗೊಳಿಸಿದ್ದು ಪ್ರಶಂಸನೀಯ. ಆದರೆ, ಆಪರೇಷನ್ ಸಿಂಧೂರ ಇನ್ನು ಹೆಚ್ಚು ದಿನಗಳು ನಡೆಸಿದ್ದರೆ ನಮಗೆ ಹಾಗೂ ದೇಶದ ಹಿಂದುಗಳಿಗೆ ಹೆಚ್ಚು ಖುಷಿ ಆಗುತ್ತಿತ್ತು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಅಭಿಪ್ರಾಯಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಇನ್ನಷ್ಟು ದಿನಗಳು ನಡೆಯಬೇಕಿತ್ತು, ಅದರಿಂದ ಶತ್ತು ರಾಷ್ಟ್ರ ಪಾಕಿಸ್ತಾನಕ್ಕೆ ಹೆಚ್ಚು ಹಾನಿ ಉಂಟು ಮಾಡಬಹುದಿತ್ತು. ತಕ್ಕ ಪಾಠ ಕಲಿಸಬೇಕಿತ್ತು. ಯಾವ ಕಾರಣಕ್ಕೆ ಆಪರೇಷನ್ ಸಿಂಧೂರ ತ್ವರಿತವಾಗಿ ಸ್ಥಗಿತಗೊಳಿಸಿದರೂ ಎಂಬುದು ನಮಗೆ ಗೊತ್ತಾಗುವುದಿಲ್ಲ. ಸರ್ಕಾರದ ಆಂತರಿಕ ನಿರ್ಧಾರಗಳ ಬಗ್ಗೆ ನಮ್ಮಂಥ ಹೊರಗಿನವರು ಏನು ಹೇಳಲು ಬರುವುದಿಲ್ಲ ಎಂದರು.
ಅಡೆತಡೆಗಳಿವೆ
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ‘ಗೆ ಅಡೆತಡೆಗಳು ಇವೆ. ಎಲ್ಲ ರಾಜಕೀಯ ಪಕ್ಷಗಳು ಸೇರಿ ವಿಸõತವಾಗಿ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಬೇಕು. ಪರಸ್ಪರ ಸಮಾಲೋಚನೆ ನಡೆಸುವುದು ಪ್ರಜಾಪ್ರಭುತ್ವ ಒಳ್ಳೆಯ ನಡೆಯಾಗಿದೆ. ಪ್ರತಿಯೊಂದರಲ್ಲೂ ಲಾಭ-ನಷ್ಟ ಇದ್ದೇ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2018ರಲ್ಲಿ ಕಟ್ಟಿದ ಆಂತಾರಾಷ್ಟ್ರೀಯ ಹಿಂದು ಪರಿಷತ್ನ ಹಿಂದೆ ರಾಜಕೀಯ ಪಕ್ಷ ಕಟ್ಟುವ ಉದ್ದೇಶವಿಲ್ಲ. ಮೊದಲಿನಿಂದಲೂ ನಾವು ಹಿಂದು ಪರ ಅಂದೋಲನದಲ್ಲಿ ತೊಡಗಿಸಿಕೊಂಡಿದ್ದೇನೆ. ಹಿಂದುಗಳ ಸಮೃದ್ಧಿ, ಸಂರಕ್ಷಣೆಗಾಗಿ ಭಾರತದ ರಾಜಕೀಯದ ಮೇಲೆ ಜನಶಕ್ತಿಯಿಂದ ಪ್ರಭಾವ ಬೀರುವ ಕೆಲಸ ನಾವು ಮೊದಲಿನಿಂದಲೂ ಮಾಡಿದ್ದೇವೆ. ಇಂದು ಮತ್ತು ಮುಂದೆಯೂ ಸಹ ಮಾಡುತ್ತೇವೆ ಎಂದು ಹೇಳಿದರು.
ಭಾರತ ಹಿಂದು ರಾಷ್ಟ್ರವೇ ಆಗಿದೆ. ಅದರಲ್ಲಿ ಯಾವುದೇ ಸಂಶಯ ಬೇಡ. ಅದು ಅನುಭವಕ್ಕೆ ಬರಬೇಕಾದರೆ ಎಲ್ಲರಿಗೂ ಅನ್ನ, ಶಿಕ್ಷಣ, ಆರೋಗ್ಯ ಸಿಗಬೇಕು. ನಾನು 1975ರಲ್ಲಿ ಎಂಬಿಬಿಎಸ್ಗೆ ಪ್ರವೇಶ ಪಡೆದಾಗ 25 ರೂ. ಶುಲ್ಕವಿತ್ತು. ಕೇವಲ 2 ಎಕರೆ ಜಮೀನು ಹೊಂದಿದ ರೈತನ ಮಗನಾಗಿ ನಾನು ವೈದ್ಯನಾಗಿದ್ದೇನೆ. ವೈದ್ಯರಾಗಲು 50 ಲಕ್ಷ ದಿಂದ 1 ಕೋಟಿ ರೂ. ಖರ್ಚು ಮಾಡಬೇಕಾಗುವಂಥ ಹಿಂದು ರಾಷ್ಟ್ರ ನನಗೆ ಬೇಕಾಗಿಲ್ಲ. ಎಲ್ಲರಿಗೂ ಆಹಾರ, ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುವಂತ ಹಿಂದು ರಾಷ್ಟ್ರವನ್ನು ನಾವು ಬಯಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.