More

  ವಿಜಯ್​ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಭರ್ಜರಿ ಗೆಲುವಿನಾರಂಭ; ಸಮರ್ಥ್​-ಮಯಾಂಕ್​ ಶತಕದಾಟ

  ಅಹಮದಾಬಾದ್​: ರನ್​ಪ್ರವಾಹ ಹರಿಸುವ ಮೂಲಕ ಕರ್ನಾಟಕ ತಂಡ ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಗೆಲುವಿನ ಆರಂಭ ಕಂಡಿದೆ. ನಾಯಕ ಮಯಾಂಕ್​ ಅಗರ್ವಾಲ್​ (157 ರನ್​, 133 ಎಸೆತ, 11 ಬೌಂಡರಿ, 8 ಸಿಕ್ಸರ್​) ಮತ್ತು ಉಪನಾಯಕ ಆರ್​. ಸಮರ್ಥ್​ (123 ರನ್​, 120 ಎಸೆತ, 11 ಬೌಂಡರಿ, 2 ಸಿಕ್ಸರ್​) ಸೊಗಸಾದ ಶತಕದ ಬಲದಿಂದ ಕರ್ನಾಟಕ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಜಮ್ಮು&ಕಾಶ್ಮೀರ ಎದುರು 222 ರನ್​ಗಳಿಂದ ಸುಲಭ ಗೆಲುವು ದಾಖಲಿಸಿತು.

  ಮೊಟೆರಾದ ಸರ್ದಾರ್​ ಪಟೇಲ್​ ಬಿ ಗ್ರೌಂಡ್​ನಲ್ಲಿ ನಡೆದ ಗುರುವಾರ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ಮಯಾಂಕ್​-ಸಮರ್ಥ್​ ಜೋಡಿ ಮೊದಲ ವಿಕೆಟ್​ಗೆ ಪೇರಿಸಿದ 267 ರನ್​ ಜತೆಯಾಟದ ನೆರವಿನಿಂದ 2 ವಿಕೆಟ್​ಗೆ 402 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ವೇಗಿ ವೈಶಾಕ್​ ವಿಜಯ್​ಕುಮಾರ್​ (57ಕ್ಕೆ 4) ದಾಳಿಗೆ ತತ್ತರಿಸಿದ ಜಮ್ಮು&ಕಾಶ್ಮೀರ 30.4 ಓವರ್​ಗಳಲ್ಲಿ 180 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು.

  ಮಯಾಂಕ್​-ಸಮರ್ಥ್​ ಜುಗಲ್​ಬಂದಿ
  ರಾಜ್ಯದ ಆರಂಭಿಕರಾದ ಮಯಾಂಕ್​ ಅಗರ್ವಾಲ್​&ಆರ್​. ಸಮರ್ಥ್​ ಜೋಡಿ ಜಮ್ಮು&ಕಾಶ್ಮೀರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ರನ್​ಮಳೆ ಹರಿಸಿತು. ಮಯಾಂಕ್​ ಮಧ್ಯಮ ಓವರ್​ಗಳಲ್ಲಿ ಸ್ಪಿನ್ನರ್​ಗಳ ಮೇಲೆ ಆಕ್ರಮಣ ನಡೆಸಿದರೆ, ಸಮರ್ಥ್​ ಸೂಕ್ತ ಬೆಂಬಲ ಒದಗಿಸಿದರು. ಮಯಾಂಕ್​ 104 ಮತ್ತು ಸಮರ್ಥ್​ 97 ಎಸೆತಗಳಲ್ಲಿ ಶತಕ ಪೂರೈಸಿದರು. ಪಂದ್ಯದ 39ನೇ ಓವರ್​ನಲ್ಲಿ ಸಮರ್ಥ್​, ರಸಿಕ್​ ಸಲಾಮ್​ ಯಾರ್ಕರ್​ ಎಸೆತಕ್ಕೆ ಬೌಲ್ಡಾದರು. ನಂತರ ಕ್ರೀಸ್​ಗೆ ಇಳಿದ ದೇವದತ್​ ಪಡಿಕಲ್​ (71*ರನ್​, 35 ಎಸೆತ, 4 ಬೌಂಡರಿ, 5 ಸಿಕ್ಸರ್​) ಸ್ಫೋಟಕ ಆಟವಾಡಿ ಮಯಾಂಕ್​ ಜತೆ 2ನೇ ವಿಕೆಟ್​ಗೆ 60 ರನ್​ ಮತ್ತು ಮನೀಷ್​ ಪಾಂಡೆ (23*) ಜತೆ ಮುರಿಯದ 3ನೇ ವಿಕೆಟ್​ಗೆ 75 ರನ್​ ಸೇರಿಸಿ ಮೊತ್ತವನ್ನು 400ರ ಗಡಿ ದಾಟಿಸಿದರು.

  ಕರ್ನಾಟಕ: 2 ವಿಕೆಟ್​ಗೆ 402 (ಸಮರ್ಥ್​ 123, ಮಯಾಂಕ್​ 157, ಪಡಿಕಲ್​ 71*, ಮನೀಷ್​ 23*, ರಿಸಿಕ್​ 82ಕ್ಕೆ 1). ಜಮ್ಮು-ಕಾಶ್ಮೀರ: 30.4 ಓವರ್​ಗಳಲ್ಲಿ 180 (ಖಜೂರಿಯಾ 29, ವಿವ್ರಾಂತ್​ 41, ಯಧ್ವೀರ್​ 64, ವೈಶಾಕ್​ 57ಕ್ಕೆ 4, ಕೌಶಿಕ್​ 31ಕ್ಕೆ 1, ವಿದ್ವತ್​ 32ಕ್ಕೆ 1, ಜೆ. ಸುಚಿತ್​ 10ಕ್ಕೆ 1).

  *ಕರ್ನಾಟಕಕ್ಕೆ ಮುಂದಿನ ಪಂದ್ಯ
  ಎದುರಾಳಿ: ಉತ್ತರಾಖಂಡ
  ಯಾವಾಗ: ಶನಿವಾರ
  ಆರಂಭ: ಬೆಳಗ್ಗೆ 9.00

  *402: ಕರ್ನಾಟಕ ತಂಡ ದೇಶೀಯ ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಮೊದಲ ಬಾರಿಗೆ 400 ಪ್ಲಸ್​ ಮತ್ತು ತನ್ನ ಸರ್ವಾಧಿಕ ಮೊತ್ತ ಪೇರಿಸಿತು. 2014&15ರಲ್ಲಿ ಪಂಜಾಬ್​ ಎದುರು 7 ವಿಕೆಟ್​ಗೆ 359 ರನ್​ ಕಲೆಹಾಕಿದ್ದು ಹಿಂದಿನ ಗರಿಷ್ಠ.

  ಸೌರಾಷ್ಟ್ರಕ್ಕೆ ಕೇರಳ ಶಾಕ್​
  ಹಾಲಿ ಚಾಂಪಿಯನ್​ ಸೌರಾಷ್ಟ್ರ ತಂಡ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಕೇರಳ ಎದುರು 3 ವಿಕೆಟ್​ಗಳಿಂದ ಆಘಾತಕಾರಿ ಸೋಲು ಅನುಭವಿಸಿತು. ವಿಶ್ವರಾಜ್​ ಜಡೇಜಾ 98 ರನ್​ ಗಳಿಸಿದ ನಡುವೆ ಸೌರಾಷ್ಟ್ರ 185 ರನ್​ಗಳಿಗೆ ಸರ್ವಪತನ ಕಂಡರೆ, ಕೇರಳ 47.4 ಓವರ್​ಗಳಲ್ಲಿ 7 ವಿಕೆಟ್​ಗೆ 188 ರನ್​ ಗಳಿಸಿ ಜಯಿಸಿತು.

  ಟಿ20ಗೆ ರೋಹಿತ್​ ಶರ್ಮ ಗುಡ್​ಬೈ? ಇನ್ನು ಏಕದಿನ-ಟೆಸ್ಟ್​ ಕ್ರಿಕೆಟ್​ನತ್ತ ಗಮನ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts