ಅರಕಲಗೂಡು: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳ ನಾಡಕಚೇರಿ ಆವರಣದಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರವನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ತಹಸೀಲ್ದಾರ್ ರೇಣುಕುಮಾರ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್ ಶಾಖೆಯಲ್ಲಿ ನೋಂದಣಿ ಮಾಡಲಾಗುತ್ತಿದೆ. ನಿತ್ಯ 25 ಜನರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬ್ಯಾಂಕ್ ಕೆಲಸದ ನಡುವೆ ಸಾರ್ವಜನಿಕರಿಗೆ ಮುಕ್ತವಾಗಿ ನೋಂದಣಿ ಮಾಡಲು ತಾಂತ್ರಿಕ ತೊಂದರೆ ಆಗುತ್ತಿದೆ. ಹೀಗಾಗಿ ತಹಸೀಲ್ದಾರ್ ಕಚೇರಿ ಹಾಗೂ ನಾಡಕಚೇರಿ ಆವರಣದಲ್ಲಿ ಕೇಂದ್ರ ತೆರೆಯಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಜಿಪಂ ಸದಸ್ಯ ಬರಗೂರು ರವಿ ಮಾತನಾಡಿ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಈ ಸಂಬಂಧ ಉಪ ವಿಭಾಗಾಧಿಕಾರಿಗಳ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ತಹಸೀಲ್ದಾರ್ ರೇಣುಕುಮಾರ್ ಭರವಸೆ ನೀಡಿದರು.
ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ರವಿಕುಮಾರ್, ಕರವೇ ಮುಖಂಡರಾದ ಸೋಮಶೇಖರ್, ಜಿಮ್ ಸೋಮು, ಧರ್ಮರಾಜ್, ಮೋಹನ್‌ಕುಮಾರ್, ಮಹೇಶ್, ರವಿ, ಜಮೀರ್ ಪಾಷಾ, ಮಂಜುನಾಥ್, ಚಂದ್ರ ಇತರರು ಹಾಜರಿದ್ದರು.