ಶಾಲಾ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ತೆರೆ

ನಂಜನಗೂಡು: ನಗರದ ಅಶೋಕಪುರಂ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ 12 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ ಗಿಡ ನೆಡುವ ಮೂಲಕ ತೆರೆ ಕಂಡಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ ಹಾಗೂ ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಯೋಗ, ಅಧ್ಯಾತ್ಮ, ಕರಕುಶಲತೆ, ಪ್ರವಾಸ, ದೇಸಿ ಕ್ರೀಡೆ ಸೇರಿ ವಿವಿಧ ಆಯಾಮದಲ್ಲಿ ಮಕ್ಕಳ ವ್ಯಕ್ತಿತ್ವ ವೃದ್ಧಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಯಿತು.
ಅಂತಿಮ ದಿನವಾದ ಮಂಗಳವಾರ ಅಶೋಕಪುರಂ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿ ಹಲವೆಡೆ ಗಿಡಗಳನ್ನು ನೆಡುವ ಮೂಲಕ ಮಕ್ಕಳು ಶ್ರಮದಾನ ಮಾಡಿದರು. ಕುಡಿಯುವ ನೀರಿನ ಮಹತ್ವ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಸ್ತರಣಾಧಿಕಾರಿ ಗೀತಾಲಕ್ಷ್ಮಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಲ್ಲಿ ಭೌದ್ಧಿಕ, ಮಾನಸಿಕವಾಗಿ ಸದೃಢರಾಗಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ಲಭಿಸುವುದಿಲ್ಲ ಎಂಬ ಅಪವಾದವನ್ನು ಮರೆಯಾಗಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ನೆರವಿನಿಂದ ಆಯೋಜಿಸಲಾಗಿದೆ ಎಂದರು.

ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶ್ರೀನಿವಾಸ್ ಮಾತನಾಡಿ, ಭವಿಷ್ಯದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರಸ್ತುತ ಶಾಲಾ ಹಂತದಲ್ಲಿ ಪರಿಸರಾಧಾರಿತ ಶಿಕ್ಷಣ ದೊರಕಬೇಕು. ಜತೆಗೆ ಸಾಮಾಜಿಕ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಶೀಲರನ್ನಾಗಿ ಮಾಡಬೇಕು. ಈ ದಿಸೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವ ನಿಟ್ಟಿನಲ್ಲಿ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು ಎಂದು ತಿಳಿಸಿದರು.

Leave a Reply

Your email address will not be published. Required fields are marked *