ಮಹಾರಾಷ್ಟ್ರ ಪೊಲೀಸರ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಹಾಕಿಕೊಂಡ ಪ್ರಿಯಾಂಕ ಚೋಪ್ರಾ ರಿಯಾಕ್ಷನ್‌ ಹೇಗಿತ್ತು?

ನವದೆಹಲಿ: ಇತ್ತೀಚೆಗಷ್ಟೇ ರಿಲೀಸ್‌ ಆದ ಸ್ಕೈ ಈಸ್‌ ಪಿಂಕ್‌ ಚಿತ್ರದ ಟ್ರೈಲರ್‌ನಲ್ಲಿನ ಸಂಭಾಷಣೆಗಾಗಿ ನಟಿ ಪ್ರಿಯಾಂಕ ಚೋಪ್ರಾ ಮತ್ತು ಫರ್ಹಾನ್‌ ಅಖ್ತರ್‌ ಮಹಾರಾಷ್ಟ್ರ ಪೊಲೀಸರ ಗಮನ ಸೆಳೆದಿದ್ದು, ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಫರ್ಹಾನ್‌ ಅಖ್ತರ್‌ ತೆರೆ ಮೇಲಿನ ಮಗಳು ಆಯೇಷಾ ಮಾರಣಾಂತಿಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುತ್ತಾಳೆ ಮತ್ತು ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಕುಟುಂಬ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿರುತ್ತದೆ. ತಾಯಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕ, ‘ಒಮ್ಮೆ ಆಯೇಷಾ ಚೇತರಿಸಿಕೊಂಡ ನಂತರ ನಾವು ಒಟ್ಟಾಗಿ ಬ್ಯಾಂಕ್‌ ಅನ್ನು ಲೂಟಿ ಮಾಡೋಣ’ ಎಂದು ಫರ್ಹಾನ್‌ ಅಖ್ತರ್‌ಗೆ ಹೇಳುತ್ತಾಳೆ.

ಈ ಸಂಭಾಷಣೆಯ ಸ್ಕ್ರೀನ್​ಶಾಟ್​ ಒಂದನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ಪೊಲೀಸರು, ‘ಐಪಿಸಿ ಸೆಕ್ಷನ್ 393ರ ಪ್ರಕಾರ ಈ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಟ್ವೀಟ್‌ಗೆ ಪ್ರತಿಯಾಗಿ ಟ್ವೀಟ್‌ ಮಾಡಿರುವ ಪ್ರಿಯಾಂಕ ಚೋಪ್ರಾ, ಓ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡೆ… ಪ್ಲ್ಯಾನ್‌ ಬಿಯನ್ನು ಕಾರ್ಯಗತಗೊಳಿಸುವ ಸಮಯವಿದು ಫರ್ಹಾನ್‌ ಅಖ್ತರ್‌ ಎಂದು ಬರೆದಿದ್ದಾರೆ.

ಪ್ರಿಯಾಂಕಾರ ಟ್ವೀಟ್‌ ರೀಟ್ವೀಟ್‌ ಮಾಡಿರುವ ನಟ ಫರ್ಹಾನ್‌ ಅಖ್ತರ್‌, ಹ್ಹಹ್ಹಹ್ಹ… ಕ್ಯಾಮರಾ ಮುಂದೆ ಈ ರೀತಿಯ ಯೋಜನೆಗಳನ್ನು ಮಾಡಲೇಬಾರದು ಎಂದು ಹೇಳಿದ್ದಾರೆ.

ದಿ ಸ್ಕೈ ಈಸ್‌ ಪಿಂಕ್‌ ಚಿತ್ರವನ್ನು ಶೋನಾಲಿ ಬೋಸ್‌ ನಿರ್ದೇಶಿಸುತ್ತಿದ್ದು, ಅನಾರೋಗ್ಯದಿಂದ ಬಳಲಿ ನಿಧನರಾದ ಸ್ಫೂರ್ತಿದಾಯಕ ಭಾಷಣಗಾರ್ತಿ ಮತ್ತು ಲೇಖಕಿ ಆಯಿಷಾ ಚೌಧರಿ ಅವರ ಜೀವನ ಮತ್ತು ಅನುಭವಗಳನ್ನು ಆಧರಿಸಿದೆ. ಜೈರಾ ವಾಸಿಮ್‌ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ರೋಹಿತ್‌ ಸಾರಫ್‌ ಪ್ರಿಯಾಂಕ ಮತ್ತು ಫರ್ಹಾನ್‌ ಪುತ್ರನಾಗಿ ನಟಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *