ಶಬರಿಮಲೆ ಪ್ರವೇಶಿಸಿದ್ದು 51 ಮಹಿಳೆಯರಲ್ಲ, ಕೇವಲ ಇಬ್ಬರೇ: ಕೇರಳ ಸರ್ಕಾರ ಯು-ಟರ್ನ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಮಾಡಬಹದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ನಂತರ 10 ರ ಮೇಲ್ಪಟ್ಟ 50ವಯಸ್ಸಿನೊಳಗಿನ ಒಟ್ಟು 51 ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಈ ಹಿಂದೆ ಕೇರಳ ಸರ್ಕಾರ ತಿಳಿಸಿತ್ತು. ಆದರೆ ಈಗ ಆ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದು ಕೇವಲ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ವರದಿ ನೀಡಿದೆ.

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಈಗಾಗಲೇ ಹಲವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಇನ್ನೆರಡು ದಿನಗಳಲ್ಲಿ ಅವುಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈಗ ಕೇರಳ ಸರ್ಕಾರ ಯು-ಟರ್ನ್​ ಹೊಡೆದಿದೆ. ಇಂದು ಶಾಸನ ಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವ ಕದಕಂಪಲ್ಲಿ ಸುರೇಂದ್ರನ್​ ಅವರು ಮಾಹಿತಿ ನೀಡಿದ್ದಾರೆ. 50 ವರ್ಷದೊಳಗಿನ ಇಬ್ಬರು ಮಹಿಳೆಯರು ಮಾತ್ರ ಅಯ್ಯಪ್ಪ ದೇವಾಲಯ ಪ್ರವೇಶ ಮಾಡಿದ್ದಾರೆ ಎಂದು ದೇಗುಲ ನಿರ್ವಹಣಾ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ತಿಳಿಸಿದರು. ಆದರೆ ಈ ಮೊದಲು ಯಾಕೆ, 51 ಮಹಿಳೆಯರು ಪ್ರವೇಶಿಸಿದ್ದಾಗಿ ತಿಳಿಸಿದ್ದಿರಿ ಎಂದು ಪ್ರತಿಪಕ್ಷಗಳು ಪ್ರಶ್ನಿಸಿದರೆ ಅದಕ್ಕೆ ಸಚಿವರು ಏನೂ ಉತ್ತರ ನೀಡಲಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ವರದಿ ಪ್ರಕಾರ ಬಿಂದು ಅಮ್ಮಿನಿ ಮತ್ತು ಕನಕದುರ್ಗಾ ಅವರು ಮಾತ್ರ ದೇಗುಲ ಬೆಟ್ಟವನ್ನು ಸಂಪೂರ್ಣವಾಗಿ ಹತ್ತಿ ಒಳಪ್ರವೇಶಿಸಿದ್ದಾರೆ.

ಜ.18ರಂದು ಕೇರಳ ಸರ್ಕಾರ 51 ಮಹಿಳೆಯರ ಹೆಸರುಗಳಿರುವ ಪಟ್ಟಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಿತ್ತು. ಇದನ್ನು ನೋಡಿದ ಕೆಲವು ಮಹಿಳೆಯರು ನಮಗೆ 50 ವರ್ಷ ಮೇಲ್ಪಟ್ಟು ವಯಸ್ಸಾಗಿದೆ. ಆದರೆ ಸರ್ಕಾರ ಕಡಿಮೆ ವಯಸ್ಸನ್ನು ತೋರಿಸಿ ನಮ್ಮ ಹೆಸರನ್ನು ಪಟ್ಟಿಯಲ್ಲಿ ನಮೂದಿಸಿದ್ದಾರೆಂದು ಆರೋಪ ಮಾಡಿದ್ದರು. ಇದರಿಂದ ಅವಮಾನಿತಗೊಂಡ ಸರ್ಕಾರ ಮತ್ತೆ ಸರಿಯಾದ ತನಿಖೆ ನಡೆಸಿ, 34 ಜನರ ಹೆಸರನ್ನು ಪಟ್ಟಿಯಿಂದ ಹೊರತೆಗೆದಿತ್ತು.