‘ಟೈಟಲ್ ಹೀಗಿದ್ದರೂ ಮೇಕಿಂಗ್ ಹೈಕ್ಲಾಸ್ ಟ್ರೇನ್ ರೀತಿಯೇ ಇದೆ. ಬಾಲಿವುಡ್ ಶೈಲಿಯಲ್ಲಿ ಕೊರಿಯೊಗ್ರಫಿ ಮಾಡಲಾಗಿದೆ. ‘ಸನಿಹ ಸನಿಹ’ ಎಂಬ ಹಾಡಿಗೆ ಚಿನ್ನಿಪ್ರಕಾಶ್ ಏಳು ಸೆಟ್ ಹಾಕಿಸಿದ್ರು. ಇದು ನನ್ನ ಕರಿಯರ್ನ ದೊಡ್ಡ ಬಜೆಟ್ ಸಿನಿಮಾ. ಒಂದು ಊರಿನಿಂದ ಬೆಂಗಳೂರಿಗೆ ಬರುವ ಜರ್ನಿ, ಸಿನಿಮಾ ಬಹುತೇಕ ಟ್ರೇನ್ನಲ್ಲೇ ನಡೆಯುತ್ತದೆ..’
– ಹೀಗೆಂದು ತಮ್ಮ ಸಿನಿಮಾ ‘ಲೋಕಲ್ ಟ್ರೇನ್’ ಬಗ್ಗೆ ಹೇಳಿಕೊಂಡವರು ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ. ಇತ್ತೀಚೆಗಷ್ಟೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈ ಚಿತ್ರದ ಆಡಿಯೋ ಲಾಂಚ್ ಮಾಡಿ, ಶುಭ ಹಾರೈಸಿದರು. ‘ಸಿನಿಮಾದ ಮೂರು ಹಾಡು ಒಟ್ಟಿಗೆ ರಿಲೀಸ್ ಮಾಡಿದ್ದೀರಿ. ಈಗೀಗ ಹಲವರು ಒಂದೊಂದೇ ಹಾಡನ್ನು ಬಿಡುಗಡೆ ಮಾಡುತ್ತಿರುವಾಗ ನೀವು ಹಳೇ ಸಂಪ್ರದಾಯ ಅನುಸರಿಸಿದ್ದೀರಿ’ ಎಂದು ಚಿತ್ರತಂಡದ ಬಗ್ಗೆ ಪುನೀತ್ ರಾಜ್ಕುಮಾರ್ ಮೆಚ್ಚುಗೆ ಸೂಚಿಸಿದರು.
ಚಿತ್ರದಲ್ಲಿ ನನ್ನದು ಕಾಲೇಜ್ ಸ್ಟುಡೆಂಟ್ ಪಾತ್ರ. ಇಲ್ಲಿ ಇಬ್ಬರು ನಾಯಕಿಯರಿದ್ದಾರೆ ಎನ್ನುತ್ತ ಚಿತ್ರ ಹಾಗೂ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡರು ಕೃಷ್ಣ. ‘ಜಾಕಿ’ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಬಂದವನು ನಾನು ಎನ್ನುತ್ತ ನಾಯಕ ಕೃಷ್ಣ, ಪುನೀತ್ ರಾಜ್ಕುಮಾರ್ ಅವರ ಬೆಂಬಲವನ್ನು ಸ್ಮರಿಸಿಕೊಂಡರು.
ನಾಯಕಿಯರಲ್ಲಿ ಒಬ್ಬರಾಗಿರುವ ಮೀನಾಕ್ಷಿ ದೀಕ್ಷಿತ್, ‘ನಾನು ಈಗಾಗಲೇ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಾಡಿದ್ದೇನೆ. ಕನ್ನಡದಲ್ಲಿ ಇದು ಮೊದಲನೇ ಸಿನಿಮಾ. ಈ ಚಿತ್ರ ನನಗೆ ಮಹತ್ವದ್ದು’ ಎನ್ನುತ್ತ ಕನ್ನಡಿಗರ ಬೆಂಬಲ ಕೋರಿದರು. ‘ಇದು ಪ್ಯಾಷನ್ನಲ್ಲಿ ಮಾಡಿದ ಸಿನಿಮಾ.
ಮೊದಲ ಚಿತ್ರವಾದರೂ ಚೌಕಾಸಿ ಮಾಡದೆ ಮಾಡಬೇಕು ಎಂದುಕೊಂಡು ಮಾಡಿದ್ದು. ಚಿತ್ರರಂಗದಲ್ಲಿರುವ ಶ್ರೇಷ್ಠವಾದದ್ದೆಲ್ಲ ಇದರಲ್ಲಿ ಇರಬೇಕು ಅಂತ ಉತ್ತಮವಾದ ಚಿತ್ರವನ್ನೇ ಮಾಡಿದ್ದೇವೆ. ಈ ಚಿತ್ರಕ್ಕೆ ಕಥೆ ನನ್ನದೇ ರಚನೆ. 5 ಸಾಂಗ್, 4 ಫೈಟ್, ಒಂದು ಚೇಸ್ ಈ ಸಿನಿಮಾದಲ್ಲಿದೆ. ಫೆಬ್ರವರಿ 2 ಅಥವಾ 3ನೇ ವಾರ ಚಿತ್ರ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ’ ಎಂದರು ನಿರ್ಮಾಪಕ ಸುಬ್ರಾಯ ವಾಲ್ಕೆ.
ಸಮಾರಂಭದಲ್ಲಿ ನಿರ್ದೇಶಕ ರುದ್ರಮುನಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ‘ಸಣ್ಣ ಭಿನ್ನಾಭಿಪ್ರಾಯ ಉಂಟಾದ್ದರಿಂದ ಅವರೊಂದಿಗೆ ಚಿತ್ರತಂಡಕ್ಕೆ ಸ್ವಲ್ಪ ಅಂತರ ಉಂಟಾಗಿದೆ. ಮುಂದೆ ಜತೆ ಆಗಬಹುದು’ ಎಂದರು ನಿರ್ಮಾಪಕರು.