ಜಗಳವೊಂದೇ ವಿಚ್ಛೇದನಕ್ಕೆ ಕಾರಣವಾಗಲಾರದು

ಮದುವೆಯಾಗಿ ಮೂರು ವರ್ಷ. ಮೂರು ವಾರಗಳ ಹಿಂದೆ ಹೆಣ್ಣು ಮಗು ಆಗಿದೆ. ನಾನು ಸಿಟಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದೇನೆ. ನಾನು ತಂದೆ ತಾಯಿಗೆ ಒಬ್ಬನೇ ಮಗ. ನಮ್ಮ ತಂದೆ ತಾಯಿ ಇಬ್ಬರೂ ನನ್ನ ಹತ್ತಿರವೇ ಇದ್ದಾರೆ. ನನ್ನ ಹೆಂಡತಿ ತುಂಬ ಜೋರು ಸ್ವಭಾವದವಳು, ಮದುವೆ ಆದಾಗಲಿನಿಂದ ಅವಳಿಗೆ ನಮ್ಮ ತಾಯಿಯ ಮೇಲೆ ಕಣ್ಣು. ಪ್ರತಿ ದಿನ ನಾನು ದುಡಿದು ಸುಸ್ತಾಗಿ ಮನೆಗೆ ಬಂದರೆ ‘ನಿಮ್ಮ ತಾಯಿ ಹೀಗೆ, ಹಾಗೆ’ ಎಂದು ಆರೋಪ. ಜತೆಗೆ ಅವಳ ತಾಯಿಯೊಂದಿಗೆ ಪ್ರತಿನಿತ್ಯ ಸುಮಾರು 3-4 ತಾಸು ಫೋನಿನಲ್ಲಿ ಮಾತು. ಅವಳ ತಾಯಿ ಅವಳಿಗೆ ಹೇಳಿಕೊಡುವುದು ಜಾಸ್ತಿ. ಹೆಂಡತಿ ಜಗಳ ತೆಗೆದರೆ ಕೆಟ್ಟ ಕೆಟ್ಟ ಮಾತು. ಅವಳ ತಮ್ಮಂದಿರು ಅವರ ಊರಿನಿಂದ ‘ನಿಮ್ಮ ತಾಯಿಯನ್ನು ಹುಟ್ಟಿಲ್ಲ ಅಂತ ಮಾಡ್ತೇವೆ’ ಅಂತ ಬೆದರಿಕೆ ಹಾಕುತ್ತಾರೆ. ನಮ್ಮ ತಾಯಿ ಶಾಂತ ಸ್ವಭಾವದವರು. ಅವರದು ಯಾವ ತಪ್ಪೂ ಇಲ್ಲ. ನನಗೆ ಈಗ ಏನು ಮಾಡುವುದು ಅಂತ ತಿಳಿಯುತ್ತಿಲ್ಲ. ಬೇರೆ ಮನೆ ಮಾಡು ಅಂತ ಹೆಂಡತಿಯ ಹಠ. ನನ್ನನ್ನು ಕಷ್ಟಪಟ್ಟು ಸಾಕಿದ ತಂದೆ ತಾಯಿಯರನ್ನು ನಾನು ಬಿಡುವುದು ಹೇಗೆ? ಅದಕ್ಕೆ ಹೆಂಡತಿಯನ್ನೇ ಬಿಟ್ಟು ಬಿಡೋಣ ಎನ್ನುತ್ತಿದ್ದೇನೆ. ಬೇಗ ವಿಚ್ಛೇದನ ಪಡೆಯಲು ಏನು ಮಾಡಬೇಕು ತಿಳಿಸಿ.

| ಬಸವರಾಜ ಮಹಮ್ಮದಪುರ

ನೀವು ವಿಚ್ಛೇದನದ ವಿಷಯವನ್ನು ಮನಸ್ಸಿನಿಂದ ತೆಗೆದು ಹಾಕಿ. ಮೂರು ವಾರಗಳ ಹಿಂದೆ ನಿಮಗೆ ಮಗು ಆಗಿರುವಾಗ ಈಗ ವಿಚ್ಛೇದನ ಸಿಗುವ ಪ್ರಶ್ನೆಯೇ ಇಲ್ಲ. ನಿಮಗೆ ಮಗು ಆಗದೇ ಇದ್ದಿದ್ದರೆ ಆಗ ಬೇರೆಯ ವಿಷಯ. ಆಗಲೂ ನಿಮ್ಮ ಹೆಂಡತಿಗೂ ನಿಮ್ಮ ತಾಯಿಗೂ ಸರಿಹೋಗುತ್ತಿಲ್ಲ ಎನ್ನುವ ಕಾರಣದಿಂದ ನಿಮಗೆ ವಿಚ್ಛೇದನ ಸಿಗುವುದು ಕಷ್ಟ. ಇಂತಹ ವಿಷಯಗಳೆಲ್ಲ ಕ್ರೂರತೆಯ ಅಂಶಗಳಲ್ಲ. ಆದರೆ ಪ್ರತಿನಿತ್ಯದ ಜೀವನದ ಆಗುಹೋಗುಗಳ ವಿಷಯ. ಇವು ಬಹಳಷ್ಟು ಮಟ್ಟಿಗೆ ಎಲ್ಲ ಸಂಸಾರಗಳಲ್ಲೂ ಇರುವ ವಿಷಯವೇ ಎಂದು ಸುಪ್ರೀಂಕೋರ್ಟು ಹಲವಾರು ಸಂದರ್ಭಗಳಲ್ಲಿ ಹೇಳಿದೆ. ಪ್ರತಿ ವಿವಾಹಿತ ಪುರುಷನಿಗೂ ಸಾಮಾನ್ಯವಾಗಿ ತಾಯಿ ಹಾಗೂ ಪತ್ನಿ ಇಬ್ಬರನ್ನೂ ನಿಭಾಯಿಸುವ ಕಲೆ ಗೊತ್ತಿರಬೇಕು. ನೀವು ನಿಮ್ಮ ಪತ್ನಿಯ ಹತ್ತಿರ ಕೂತು ಮಾತಾಡಿ. ಒಪ್ಪಿದರೆ ವಿವಾಹ ಸಂಧಾನಕಾರರ ಹತ್ತಿರ ಇಬ್ಬರೂ ಹೋಗಿ. ಆಕೆಯ ಮನಸ್ಸು ಪರಿವರ್ತನೆ ಆಗಬಹುದು. ಆಕೆ ಒಪ್ಪದಿದ್ದರೆ ನಿಮ್ಮ ಮನೆಯ ಸಮೀಪವೇ ತಂದೆ ತಾಯಿಗೆ ಬೇರೆ ಮನೆಯ ವ್ಯವಸ್ಥೆ ಮಾಡಿಕೊಡಲು ಸಾಧ್ಯವೇ ಎಂದು ಯೋಚಿಸಿ. ಪತ್ನಿ ಮತ್ತು ಪಾಲಕರು ಇಬ್ಬರಿಗೂ ಬೇಸರವಾಗದಂತೆ ನೀವು ಏನು ಮಾಡಬಹುದು ಎನ್ನುವುದನ್ನು ಯೋಚಿಸಿ. ಬೇರೆಯವರು ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಡಿ. ಮದುವೆ ಆಗಿ, ಪತ್ನಿ ಗರ್ಭವತಿ ಆಗಿ ಮಗು ಆದ ಕೆಲವೇ ವಾರಗಳಲ್ಲಿ ನೀವು ವಿಚ್ಛೇದನದ ಬಗ್ಗೆ ಯೋಚಿಸುವುದು ಸರಿಯಲ್ಲ. ಕ್ರೂರತೆ ವಿಚ್ಛೇದನಕ್ಕೆ ಕಾರಣವಾಗಬಹುದು. ಆದರೆ ಪತಿ ಪತ್ನಿಯರ ನಡುವಣ ಜಗಳ ಮಾತ್ರ ವಿಚ್ಛೇದನಕ್ಕೆ ಕಾರಣ ಆಗಲಾರದು. ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ತಾಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ‘ವ್ಯಾಜ್ಯಪೂರ್ವ ಮಧ್ಯಸ್ಥಿಕೆ’ಗೆ ಅರ್ಜಿ ಕೊಡಿ. ಅಲ್ಲಿ ನಿಮ್ಮಿಬ್ಬರನ್ನೂ ನಿಮ್ಮ ತಾಯಿಯನ್ನೂ ಕರೆಯಿಸಿ ನಿಮ್ಮ ಮಧ್ಯೆ ಒಂದು ತೀರ್ವನಕ್ಕೆ ಬರಲು ಅನುವು ಮಾಡಿಕೊಡುತ್ತಾರೆ.

ತಂದೆ ತಾಯಿಗೆ ನಾನು ಮತ್ತು ನನ್ನ ಅಕ್ಕ ಇಬ್ಬರೇ ಹೆಣ್ಣುಮಕ್ಕಳು. ನಮ್ಮ ಅಕ್ಕನ ಮದುವೆ ಆಗಿ ಇಪ್ಪತ್ತು ವರ್ಷಗಳಾಗಿವೆ. ಅವಳಿಗೆ ಮಕ್ಕಳಿಲ್ಲ. ನನ್ನನ್ನು ಮಗಳಂತೆ ಸಾಕುತ್ತಿದ್ದಳು. ನಮ್ಮ ತಂದೆ ತುಂಬ ಬಡವರು. ನಾವು ಹಿಂದೂ ಬಲಿಜ ಜನಾಂಗದವರು. ನನ್ನ ಭಾವನಿಗೆ ಒಳ್ಳೆಯ ಕೆಲಸ ಇತ್ತು. ಸ್ವಯಾರ್ಜಿತವಾಗಿ ಬಹಳಷ್ಟು ಆಸ್ತಿ ಪಾಸ್ತಿ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಅಕ್ಕ ಭಾವ ಇಬ್ಬರೂ ಒಂದೇ ಕಾಲಕ್ಕೆ ತೀರಿಕೊಂಡರು. ಈಗ ಅವರ ಆಸ್ತಿಯನ್ನೆಲ್ಲ ನಮ್ಮ ಭಾವನ ಅಣ್ಣ ತಮ್ಮಂದಿರು ತಮಗೇ ಸೇರಬೇಕು ಎನ್ನುತ್ತಿದ್ದಾರೆ. ನನಗೆ ಏನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಾನು ಕೇಸು ಹಾಕಿದರೆ ಏನೂ ಸಿಗುವುದಿಲ್ಲ ಎನ್ನುತ್ತಿದ್ದಾರೆ. ನಿಜವೇ? ನಾನು ಕೇಸು ಹಾಕಬಹುದೇ? ನಮ್ಮ ಭಾವನ ಕಡೆಯವರಿಗೆ ಎಷ್ಟು ಭಾಗ? ನನಗೆ ಎಷ್ಟು ಭಾಗ ಹೋಗುತ್ತದೆ ತಿಳಿಸಿ.

| ಸುಮಲತಾ ಬೆಂಗಳೂರು

ಪತಿ ಪತ್ನಿ ಇಬ್ಬರೂ ಏಕಕಾಲಕ್ಕೆ ತೀರಿಕೊಂಡಾಗ, ಇಬ್ಬರಲ್ಲಿ ಯಾರು ಸಣ್ಣವರು ಮತ್ತು ಯಾರು ದೊಡ್ಡವರು ಎನ್ನುವುದನ್ನು ನೋಡಲಾಗುತ್ತದೆ, ಹಿರಿಯರಾದವರು ಮೊದಲು ತೀರಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವನ್ನು ಕಾನೂನಿನಲ್ಲಿ ಮಾಡಲಾಗುತ್ತದೆ. ನಿಮ್ಮ ಅಕ್ಕ ಭಾವ ಇಬ್ಬರಲ್ಲಿ ನಿಮ್ಮ ಭಾವ ಹಿರಿಯ ವಯಸ್ಸಿನವರಾದರೆ ಅವರೇ ಮೊದಲು ತೀರಿಕೊಂಡರು ಎನ್ನುವ ನಿರ್ಧಾರಕ್ಕೆ ನ್ಯಾಯಾಲಯ ಬರುತ್ತದೆ. ಹೀಗಾಗಿ ನಿಮ್ಮ ಭಾವ ತೀರಿಕೊಂಡಾಗ ಅವರ ಸ್ವಯಾರ್ಜಿತ ಆಸ್ತಿ ನಿಮ್ಮ ಅಕ್ಕನಿಗೆ ಮೊದಲಿಗೆ ಬರುತ್ತದೆ. ಆಕೆ ತೀರಿಕೊಂಡಾಗ ಅವರ ಆಸ್ತಿ ಆಕೆಯ ಮೊದಲನೇ ದರ್ಜೆಯ ವಾರಸುದಾರರಾದ ಮಕ್ಕಳಿಗೆ ಹೋಗುತ್ತದೆ. ಆಕೆಗೆ ಮಕ್ಕಳಿಲ್ಲದೇ ಹೋದಾಗ ಎರಡನೆಯ ದರ್ಜೆಯ ವಾರಸುದಾರರಾದ ಆಕೆಯ ಪತಿಯ ವಾರಸುದಾರರಿಗೆ ಹೋಗುತ್ತದೆ. ಆಕೆಯ ಪತಿಗೂ ವಾರಸುದಾರರು ಇಲ್ಲದೇ ಹೋದಾಗ ಆಕೆಯ ತಂದೆ ತಾಯಿಯರಿಗೆ ಆಸ್ತಿ ಹೋಗುತ್ತದೆ. ಆಕೆಯ ತಂದೆ ತಾಯಿಯರೂ ಇಲ್ಲದೇ ಹೋದರೆ ಆಗ ಆಕೆಯ ತಂದೆಯ ವಾರಸುದಾರರಿಗೆ ಹೋಗುತ್ತದೆ. ಅಂದರೆ ಮೇಲೆ ತಿಳಿಸಿದ ಮೂರು ವರ್ಗಗಳ ವಾರಸುದಾರರು ಇಲ್ಲದೇ ಹೋದಾಗ ಮಾತ್ರ ನಿಮಗೆ, ನಿಮ್ಮ ಅಕ್ಕನ ವಾರಸುದಾರರು ಎನ್ನುವ ಅರ್ಹತೆಯಿಂದ ನಿಮ್ಮ ಭಾವನ ಆಸ್ತಿಯಲ್ಲಿ ಭಾಗ ಸಿಗುತ್ತದೆ. ಈ ಬಗ್ಗೆ ಹಿಂದೂ ವಾರಸಾ ಕಾಯ್ದೆಯ ಕಲಂ 21, ಕಲಂ 8 ಮತ್ತು ಕಲಂ 15 ಬೆಳಕನ್ನು ಚೆಲ್ಲುತ್ತದೆ. ನೀವು ರಾಜಿಯ ಮಾತಾಡಿ ಏನಾದರೂ ಪಡೆಯಲು ನೋಡುವುದು ಒಳ್ಳೆಯದು.

(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)