ಉಡುಪಿ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳಷ್ಟೇ ಭಾಗಿ!

ಉಡುಪಿ: ಜಿಲ್ಲಾಡಳಿತ ವತಿಯಿಂದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಸಹಿತ ಆಡಳಿತ ಮೈತ್ರಿಕೂಟದ ಜನಪ್ರತಿನಿಧಿಗಳ ಅನುಪಸ್ಥಿತಿ ಎದ್ದುಕಂಡಿತು.

ಮುಂಜಾಗ್ರತಾ ಕ್ರಮವಾಗಿ ಡಿಸಿ ಕಚೇರಿ ಆವರಣದಲ್ಲಿ ಮತ್ತು ಡಿಸಿ ಕಚೇರಿ ರಸ್ತೆ ಕಂಟ್ರಿ ಇನ್ ಹೋಟೆಲ್ ಬಳಿ ಬ್ಯಾರಿಕೇಡ್ ಅಳವಡಿಸಿ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಡಿಸಿ ಕಚೇರಿಗೆ, ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ತೆರಳುವ ಪ್ರತಿಯೊಂದು ವಾಹನವನ್ನು ತಪಾಸಣೆಗೊಳಪಡಿಸಿ, ವಾಹನ ಸಂಖ್ಯೆ ನಮೂದಿಸಿ ಒಳಗೆ ಬಿಡಲಾಗುತಿತ್ತು.

ತೆಂಕನಿಡಿಯೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಯಪ್ರಕಾಶ್ ಶೆಟ್ಟಿ ಉಪನ್ಯಾಸ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ. ಇಬ್ರಾಹಿಂ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು, ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿ, ವಂದಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಟಿಪ್ಪು ಕುರಿತು ಗಾಯನ ಮತ್ತು ದಫ್ ಕಾರ್ಯಕ್ರಮ ನಡೆಯಿತು.

ಮಾತನಾಡದ ಡಿಸಿ: ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಕಾರ್ಯಕ್ರಮ ಉದ್ಘಾಟಿಸಿ, ಒಂದೆರಡು ಮಾತುಗಳನ್ನಾಡುತ್ತಾರೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಾರ್ಯಕ್ರಮ ಉದ್ಘಾಟಿಸಿದರೂ ಟಿಪ್ಪು ಜಯಂತಿ ಸಂಬಂಧಿಸಿ ಯಾವುದೇ ಮಾತುಗಳನ್ನಾಡಲಿಲ್ಲ.

ಕೇಸರಿ ಬಾವುಟದಲ್ಲಿ ಟಿಪ್ಪು: ಟಿಪ್ಪು ಭಾವಚಿತ್ರವಿರುವ ಬೃಹತ್ ಕೇಸರಿ ಬಣ್ಣದ ಬಾವುಟವನ್ನು ಬೈಕ್‌ಗೆ ಸಿಕ್ಕಿಸಿಕೊಂಡು ಇಬ್ಬರು ಯುವಕರು ಓಡಾಡುತ್ತಿದ್ದರು. ಪೊಲೀಸರು ಯುವಕರನ್ನು ತಡೆದು ನಿಲ್ಲಿಸಿ ವಿಚಾರಿಸಿದರು. ಬಜರಂಗದಳ ಕಾರ್ಯಕರ್ತರು ಕೂಡ ಆಕ್ಷೇಪ ವ್ಯಕ್ತಪಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಆಗ್ರಹಿಸಿದರು. ಪೊಲೀಸರು ಬಾವುಟ ತೆಗೆಸಿದರು.

ಪ್ರತಿಭಟಿಸಿದವರ ಬಂಧನ: ಬೆಳಗ್ಗೆ 11 ಗಂಟೆ ಸುಮಾರಿಗೆ ಬಜರಂಗದಳ ಮುಖಂಡ ಸುನೀಲ್ ಕೆ.ಆರ್. ನೇತೃತ್ವದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಕಾರ್ಯಕರ್ತರು ಕೈಗೆ ಕಪ್ಪುಪಟ್ಟಿ ಧರಿಸಿ ಘೋಷಣೆ ಕೂಗುತ್ತ ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಮಾಡಬಾರದು, ಟಿಪ್ಪು ಹಿಂದು ವಿರೋಧಿ ಎಂದು ಸುನೀಲ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ತಮ್ಮ ಪ್ರಭುತ್ವ ಉಳಿಸಿಕೊಳ್ಳಲು ಎಲ್ಲ ರಾಜರೂ ಯುದ್ಧಗಳನ್ನು ಮಾಡಿದ್ದಾರೆ. ಟಿಪ್ಪುವನ್ನು ಒಂದು ಪ್ರಭುತ್ವದ ರಾಜನನ್ನಾಗಿ ನೋಡದೆ, ವಸಾಹತುಶಾಹಿ ವಿರುದ್ಧ ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು ಎಂಬ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಹಿನ್ನೆಲೆಯಿಂದ ಗುರುತಿಸದೆ ಒಬ್ಬ ಮನುಷ್ಯನನ್ನಾಗಿ ಕಾಣಬೇಕು.
|ಡಾ. ಜಯಪ್ರಕಾಶ್ ಶೆಟ್ಟಿ, ತೆಂಕನಿಡಿಯೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ