ಧರ್ಮಸ್ಥಳ ತುಲಾಭಾರ ಸೇವೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತುಲಾಭಾರ ಸೇವೆಗೆ ಆನ್‌ಲೈನ್ ಮೂಲಕ ಮುಂಗಡ ಕಾಯ್ದಿರಿಸುವ ಸೌಲಭ್ಯಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಭಕ್ತರು www.shridharmasthala.org ವೆಬ್‌ಸೈಟ್ ಮೂಲಕ ತುಲಾಭಾರ ಸೇವೆಯ ದಿನಾಂಕ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕ ಸೇವೆಯ ಹಣ ಪಾವತಿಸಬಹುದು. ಸೇವೆಯ ದಿನಾಂಕ ಕಾದಿರಿಸಿದ ಬಳಿಕ ಈ ಬಗ್ಗೆ ಖಚಿತ ಸಂದೇಶ ರವಾನಿಸಲಾಗುತ್ತದೆ. ಧರ್ಮಸ್ಥಳಕ್ಕೆ ಬಂದಾಗ ಸಂದೇಶದ ವಿವರ ತಿಳಿಸಿ ತುಲಾಭಾರ ಸೇವೆ ಮಾಡಬಹುದು.
ತುಲಾಭಾರ ಸೇವೆಗೆ ಆನ್‌ಲೈನ್ ಕಾಯ್ದಿರಿಸುವ ಸೌಲಭ್ಯವನ್ನು ಡಿ.ಶ್ರೇಯಸ್ ಕುಮಾರ್ ಮತ್ತು ನಿಶ್ಚಲ್ ಕುಮಾರ್ ಡಿ. ಮಾರ್ಗದರ್ಶನದಲ್ಲಿ ಬೆಂಗಳೂರಿನ ವೈರ್‌ಕ್ಯಾಂಪ್ ಸಂಸ್ಥೆ ರೂಪಿಸಿದೆ.
ವೆಬ್‌ಸೈಟ್ ಚಾಲನೆ ಸಂದರ್ಭ ಹೇಮಾವತಿ ವಿ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಪೂರಣ್‌ವರ್ಮ ಉಪಸ್ಥಿತರಿದ್ದರು.