ವರ್ಗಾವಣೆ ದಂಧೆಗೆ ಆನ್​ಲೈನ್​ ಅಂಕುಶ

| ಬೇಲೂರು ಹರೀಶ

ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆ ಪ್ರಕ್ರಿಯೆಗೆ ವೇದಿಕೆ ಸಜ್ಜಾಗಿರುವಂತೆಯೇ ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗಗಳಿಗೆ ತಂದು ಕೂರಿಸಲು ಪ್ರಭಾವಿಗಳು ಮಾಡುವ ಶಿಫಾರಸು, ಒತ್ತಡಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ತೀರ್ವನಿಸಿದೆ. ಪಾರದರ್ಶಕವಾಗಿ ವರ್ಗಾವಣೆ ನಡೆಸುವ ನಿಟ್ಟಿನಲ್ಲಿ ಆನ್​ಲೈನ್ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಆರೋಗ್ಯ -ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ವ್ಯವಸ್ಥೆಯ ಮುಂದುವರಿದ ಭಾಗವಾಗಿ ಕಂದಾಯ ಇಲಾಖೆಯ ಅಧೀನದಲ್ಲಿರುವ ಭೂ ಮಾಪನ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದೇ ಆನ್​ಲೈನ್ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಹಂತಹಂತವಾಗಿ ಎಲ್ಲ ಇಲಾಖೆಗಳಿಗೂ ವಿಸ್ತರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಜು.31ರೊಳಗೆ ಪೂರ್ಣ

ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಹೊರತುಪಡಿಸಿ ಗ್ರೂಪ್ ಎ, ಬಿ ಮತ್ತು ಸಿ ಶ್ರೇಣಿಯ ಸರ್ಕಾರಿ ನೌಕರರನ್ನು ವರ್ಗಾವಣೆ ನೀತಿಯ ಅನ್ವಯ ಪ್ರತಿ ಇಲಾಖೆಯ ಮಂಜೂರಾದ ಹುದ್ದೆಗಳ ಪೈಕಿ ಶೇ.4ರ ಮಿತಿಯಲ್ಲಿ ಜು.31ರೊಳಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ಪಟ್ಟಿ ತಯಾರಿಸಲಾಗುತ್ತಿದೆ.

ದಂಧೆ ನಡೆವುದು ಹೇಗೆ?

# ಉದ್ಯೋಗಿಗಳಿಂದ ಹಣ ಪಡೆದು ವರ್ಗಾವಣೆ ಮಾಡಿಸುವ ದಲ್ಲಾಳಿಗಳು

# ಆಯಕಟ್ಟಿನ ಸ್ಥಳಗಳಿಗೆ ಬೇಕಾದವರನ್ನು ತರಲು ರಾಜಕಾರಣಿಗಳ ಪ್ರಭಾವ

# ವರ್ಗಾವಣೆ ದಂಧೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳೇ ಭಾಗಿ ಆರೋಪ

# ಪ್ರತಿವರ್ಷ ವರ್ಗಾವಣೆ ಪ್ರಕ್ರಿಯೆ ಸಂದರ್ಭ ಕೋಟ್ಯಂತರ ರೂ. ವ್ಯವಹಾರ

# ರಾಜಕೀಯ ನಾಯಕರು, ದಲ್ಲಾಳಿಗಳು, ಅಧಿಕಾರಿಗಳವರೆಗೆ ಚೈನ್​ಲಿಂಕ್

ಯಾರಿಗೆ ಆದ್ಯತೆ?

ದಂಪತಿ, ಅಂಗವಿಕಲರು ಮತ್ತು ಮಹಿಳೆಯರಿಗೆ ಆದ್ಯತೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ತಪ್ಪಿಸಲು ಎಲ್ಲ ಇಲಾಖೆಯಲ್ಲಿ ಆನ್​ಲೈನ್ ವ್ಯವಸ್ಥೆ ಜಾರಿಗೆ ತಂದರೆ ಒಳ್ಳೆಯದು. ಆಡಳಿತ ಯಂತ್ರ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

-ಎಂ.ಆರ್.ಶ್ರೀನಿವಾಸ ಮೂರ್ತಿ-ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ

ಕಳೆದ ವರ್ಷ ಒಳ್ಳೆಯ ರ್ಯಾಂಕ್ ಬಂದಿದ್ದರೂ ನನ್ನನ್ನು ಇಲಾಖೆ ವರ್ಗಾವಣೆ ಮಾಡಲಿಲ್ಲ. ಹಣ ನೀಡಿದ ಅಧಿಕಾರಿಗಳನ್ನಷ್ಟೇ ವರ್ಗಾವಣೆ ಮಾಡಲಾಯಿತು. ಈ ವರ್ಷ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ಆನ್​ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ನಿಷ್ಠಾವಂತರಿಗೆ ಅನುಕೂಲವಾಗುತ್ತಿದೆ.

– ನೌಕರ-ಭೂ ಮಾಪನ ಇಲಾಖೆ

ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳಲ್ಲಿ ಆನ್​ಲೈನ್ ವ್ಯವಸ್ಥೆ ಜಾರಿಗೆ ತಂದರೆ ಸೂಕ್ತ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

-ವಿಜಯ ಭಾಸ್ಕರ್-ಮುಖ್ಯ ಕಾರ್ಯದರ್ಶಿ

ವಿರೋಧದಿಂದ ಟೇಕಾಫ್ ಆಗಲಿಲ್ಲ

ವರ್ಗಾವಣೆ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಆನ್​ಲೈನ್ ವ್ಯವಸ್ಥೆ ಜಾರಿಗೆ ಯೋಜನೆ ರೂಪಿಸಿದ್ದರು. ಆದರೆ, ಈ ಯೋಜನೆಗೆ ಕೆಲ ಸಚಿವರು ಹಾಗೂ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆ ಯೋಜನೆ ಅನುಷ್ಠಾನದ ವಿಚಾರ ಪ್ರಗತಿ ಕಾಣಲಿಲ್ಲ.

ಪಾರದರ್ಶಕತೆ ಹೇಗೆ?

# ಒಂದೇ ಕಡೆ 1 ವರ್ಷ ಸೇವೆ ಸಲ್ಲಿಸಿರುವ ಶ್ರೇಣಿಗೆ ತಕ್ಕಂತೆ ವರ್ಗಾವಣೆ

# ಕೌನ್ಸೆಲಿಂಗ್ ಪ್ರಕ್ರಿಯೆ ಆನ್​ಲೈನ್​ನಲ್ಲಿ ನಡೆಯುವುದರಿಂದ ಅಕ್ರಮ ಅಸಾಧ್ಯ

# ಮುಖ್ಯಸ್ಥರ ಮೇಲೆ ಶಾಸಕರು, ಸಚಿವರ ಶಿಫಾರಸು, ಒತ್ತಡಕ್ಕೆ ಅವಕಾಶ ಇಲ್ಲ

# ನೌಕರನ ಸೇವಾ ಅವಧಿ, ಜ್ಯೇಷ್ಠತೆ ಸಂಪೂರ್ಣ ವಿವರ ಆನ್​ಲೈನ್​ನಲ್ಲೇ ಲಭ್ಯ

ಹೀಗಿರುತ್ತೆ ಪ್ರಕ್ರಿಯೆ

ಯಾವ ಇಲಾಖೆ, ಯಾವ ಜಿಲ್ಲೆ, ಯಾವ ಹುದ್ದೆ, ಎಷ್ಟು ವರ್ಷಗಳಿಂದ ಕರ್ತವ್ಯ ನಿರ್ವಹಣೆ ಮಾಹಿತಿಯನ್ನು ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸೂಚ್ಯಂಕ ಆಧಾರದ ಮೇಲೆ ಜ್ಯೇಷ್ಠತಾ ಪಟ್ಟಿ ಸಿದ್ಧವಾಗುತ್ತದೆ. ನಂತರ ಆ ಪಟ್ಟಿಯನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಿ ಶ್ರೇಣಿ ಆಧಾರಿತ ಪಟ್ಟಿ ಸೃಷ್ಟಿಸಲಾಗುತ್ತದೆ. ಜ್ಯೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತದೆ.

ಕೆಲ ಸಿಬ್ಬಂದಿ ಪ್ರಭಾವಿಗಳಿಂದ ಕರೆ ಮಾಡಿಸಿ ಒತ್ತಡ ತರುತ್ತಿದ್ದಾರೆ. ಪಾರದರ್ಶಕ ವರ್ಗಾವಣೆ ಪ್ರಕ್ರಿಯೆಗಾಗಿ ಆನ್​ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಜ್ಯೇಷ್ಠತೆ ಆಧಾರದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

| ಮನೀಶ್ ಮೌದ್ಗಿಲ್ ಆಯುಕ್ತರು, ಭೂ ಮಾಪನ ಇಲಾಖೆ