ಕೃಷಿ ಉತ್ಪನ್ನಕ್ಕೆ ಆನ್‌ಲೈನ್ ಸ್ಪರ್ಶ

ರಾಜೇಶ್ ಶೆಟ್ಟಿ ದೋಟ ಮಂಗಳೂರು

ಕಚೇರಿಯಲ್ಲಿ ಕುಳಿತು ಕಂಪ್ಯೂಟರ್ ಮೌಸ್ ಹಿಡಿಯುತ್ತಿದ್ದ ಟೆಕ್ಕಿಗಳ ತಂಡವೊಂದು ಕೃಷಿಗೆ ಮರಳಿ, ರೈತರ ಸಂಕಷ್ಟಗಳನ್ನು ಸ್ವತಃ ಅರಿತು ಆಧುನಿಕ ತಂತ್ರಜ್ಞಾನ ಮೂಲಕ ಅವರಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ.

ರೈತರು ತಾವು ಬೆಳೆದ ಬೆಳೆ, ಉತ್ಪನ್ನಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಡಿಡಿಡಿ.್ಝಟ್ಚಚ್ಝ್ಛಚ್ಟಞಛ್ಟಿ.ಜ್ಞಿ/ ವೆಬ್‌ಸೈಟ್ ರೂಪಿಸಿದ್ದು, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಅಲ್ಲದೆ ಗ್ರಾಹಕರು ತಾವು ಬಯಸಿದ ಉತ್ಪನ್ನಗಳನ್ನು ನೇರವಾಗಿ ರೈತರಿಂದಲೇ ಪಡೆದುಕೊಳ್ಳುತ್ತಿದ್ದಾರೆ.

ಐಟಿ ಕಂಪನಿಗಳಲ್ಲಿ ಹಲವು ವರ್ಷ ಕೆಲಸ ನಿರ್ವಹಿಸಿ ಕೃಷಿಗೆ ಮರಳಿದ ಬೊಂಡಾಲ ಯತೀಶ್ ಶೆಟ್ಟಿ, ಅವರ ಪತ್ನಿ ಶ್ರೀದೇವಿ ಡಿ.ಎನ್. ಹಾಗೂ ರಜತ್ ಶೆಟ್ಟಿ ಯೋಜನೆ ರುವಾರಿಗಳು. ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಈ ವೇದಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರಿಂದ ಪ್ರೇರಿತರಾಗಿ ಮುಂದೆ ಆ್ಯಪ್ ಆಧಾರಿತ ಮಾರುಕಟ್ಟೆ ಜಾರಿಗೆ ತರಲು ಈ ಯುವಪಡೆ ಸಿದ್ಧವಾಗುತ್ತಿದೆ.

2017 ಮೇನಲ್ಲಿ ಕೃಷಿ ಕಾಯಕಕ್ಕೆ ಇಳಿದ ಬಳಿಕ ಕೃಷಿಕರ ಸಂಕಷ್ಟಗಳನ್ನು ಅರಿತು, ‘ತುಳುನಾಡ ಸಾವಯವ ಉತ್ಪಾದಕರು’ ಎಂಬ ರೈತರ ತಂಡ ರಚಿಸಿದರು. ಆ ಮೂಲಕ ಸ್ಟಾಲ್ ಹಾಗೂ ಸಾಮಾಜಿಕ ಜಾಲತಾಣ ಮೂಲಕ ಗ್ರಾಹಕರನ್ನು ಸಂಪರ್ಕಿಸಲಾರಂಭಿಸಿ, ಕೃಷಿಕ-ಗ್ರಾಹಕ ಸಂಪರ್ಕ ಸಮೀಕ್ಷೆ ನಡೆಸಿ ಬಳಿಕ ಆನ್‌ಲೈನ್ ವೇದಿಕೆಗೆ ರೂಪು ನೀಡಿದ್ದಾರೆ.

ಮಾರಾಟ-ಖರೀದಿ ಪ್ರಕ್ರಿಯೆ: ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 35ಕ್ಕೂ ಅಧಿಕ ರೈತರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆ ರೈತರ ಪರಿಚಯ ಹಾಗೂ ಸಂಪರ್ಕ ಸಂಖ್ಯೆ ಪ್ರಕಟಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಬೆಲೆ ಸಹಿತ ಪ್ರದರ್ಶಿಸಬಹುದು. ಗ್ರಾಹಕರು ವೆಬ್‌ಸೈಟ್‌ನಲ್ಲೇ ಫೀಡ್‌ಬ್ಯಾಕ್ ನಮೂದಿಸಬಹುದು.

ಮತ್ತೊಂದು ಅನುಕೂಲವೆಂದರೆ, ರೈತರು ತಮ್ಮ ಬೆಳೆಗಳನ್ನು ಕೊಯ್ಲಿನ ಮುನ್ನವೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿ, ಕೊಯ್ಲಿನ ಬಳಿಕ ತಾಜಾವಾಗಿ ಗ್ರಾಹಕರಿಗೆ ಒದಗಿಸಬಹುದು. ರೈತರಿಗೆ ಯಾವುದೇ ಶುಲ್ಕವಿಲ್ಲ. ಗ್ರಾಹಕರು ಉತ್ಪನ್ನಗಳನ್ನು ರೈತರ ಬಳಿ ತೆರಳಿ ಪಡೆದುಕೊಳ್ಳಬಹುದು. ಅಥವಾ ಸಂಸ್ಥೆಯಿಂದಲೂ ವಾರಕ್ಕೆ ಎರಡು ಬಾರಿ ಡೆಲಿವರಿ ವ್ಯವಸ್ಥೆ ಇದೆ. ಪ್ರಸ್ತುತ ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈ ವ್ಯವಸ್ಥೆ ಲಭ್ಯವಿದೆ.

ಏನೇನು ಮಾರಾಟಕ್ಕಿದೆ?: ತರಕಾರಿ, ಹಣ್ಣು ಹಂಪಲು, ಹೈನುಗಾರಿಕಾ ಉತ್ಪನ್ನಗಳು, ನರ್ಸರಿ ಗಿಡಗಳು, ಚಿಪ್ಸ್, ಉಪ್ಪಿನಕಾಯಿ ಸೇರಿದಂತೆ ಹಲವು ಗೃಹೋತ್ಪನ್ನ, ಗಿಡಮೂಲಿಕೆ ಔಷಧ, ಹಾಲಿನ ಉತ್ಪನ್ನ, ಜೇನುತುಪ್ಪ, ಕೊಬ್ಬರಿಎಣ್ಣೆ, ಸಾವಯವ ಗೊಬ್ಬರ, ತರಕಾರಿ ಬೀಜಗಳು, ಪೂಜಾ ಸಾಮಗ್ರಿ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಮೂಡೆ ಕಟ್ಟುವ ಎಲೆ, ಹಲಸು ಉಪ್ಪಿನಸೊಳೆ, ಉಪ್ಪು ನೀರು ಬಿಂಪುಳಿ, ಕರಿಬೇವಿನ ಚಟ್ನಿ, ಅಮೃತಫಲ, ದರ್ಬೆ, ಬಾಳೆಎಲೆ, ಹಿಂಗಾರ, ಒಂದೆಲಗ, ನುಗ್ಗೆಸೊಪ್ಪು ಮುಂತಾದವೂ ಮಾರಾಟಕ್ಕಿವೆ.

ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ ಭಾಗಕ್ಕೆ ಸೀಮಿತವಾಗಿ ಜಾಲತಾಣ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಸ್ಪಂದನೆ ಉತ್ತಮವಾಗಿದೆ. ಮುಂದೆ ಬೇರೆ ಬೇರೆ ಭಾಗದ ರೈತರನ್ನು ಸಂಪರ್ಕಿಸಿ ಕ್ಷೇತ್ರವನ್ನು ಇನ್ನೂ ವಿಸ್ತರಿಸುವ ಉದ್ದೇಶ ಇದೆ.
– ಯತೀಶ್ ಶೆಟ್ಟಿ ಬೊಂಡಾಲ, ವೆಬ್‌ಸೈಟ್ ರೂವಾರಿ

ರೈತರಿಗೆ ಅನುಕೂಲವಾಗಿದೆ. ವೆಬ್‌ಸೈಟ್ ಮೂಲಕ ಗ್ರಾಹಕರ ಬೇಡಿಕೆ ಅರಿತುಕೊಳ್ಳುವಲ್ಲಿ ಸಹಕಾರಿಯಾಗಿದ್ದು, ಎಲ್ಲ ವರ್ಗದ ಗ್ರಾಹಕರ ಬೇಡಿಕೆಗಳನ್ನು ಅರಿತು ಅವರನ್ನು ತಲುಪಲು ಸಾಧ್ಯವಾಗುತ್ತಿದೆ.
– ಭರತ್ ಜೈನ್ ಕುಕ್ಯಾರು, ಕೃಷಿಕ