ಬೆಳಗಾವಿ: ಆನ್‌ಲೈನ್ ಪರೀಕ್ಷೆ ರದ್ದುಪಡಿಸುವಂತೆ ಆಗ್ರಹಿಸಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಐಟಿಐ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ಬಡ್ತಿ ನೀಡಲಾಗಿತ್ತು. ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ಕರೊನಾ ಹಾವಳಿ ತಗ್ಗಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಪರೀಕ್ಷೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಎಸ್‌ಎಸ್‌ಎಲ್‌ಸಿ ಪೂರ್ಣ ಗೊಳಿಸಿದ ನಂತರ ವಿದ್ಯಾರ್ಥಿಗಳು ನೇರವಾಗಿ ಐಟಿಐ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬಂದಿದ್ದಾರೆ. ಅವರಿಗೆ ಕಂಪ್ಯೂಟರ್ ಜ್ಞಾನ ಕಡಿಮೆ ಇದೆ. ಆನ್‌ಲೈನ್ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತಿದೆ. ಸರ್ಕಾರ ತಕ್ಷಣ ಆನ್‌ಲೈನ್ ಪರೀಕ್ಷೆ ರದ್ದುಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. ಬಾಳೇಶ ಪೂಜಾರಿ, ಅಭಿಷೇಕ ಮಣ್ಣೂರ, ಅವಿನಾಶ ಕದಂ, ಪ್ರಜ್ವಲ ಜೈನ್, ಗೋವಿಂದ ಬೆಳಗಾಂವಕರ್ ಇತರರು ಇದ್ದರು.