ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಆನ್‌ಲೈನ್ ಬುಕಿಂಗ್ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಧರ್ಮಸ್ಥಳ
ಶಾಂತಿವನದಲ್ಲಿರುವ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವವರಿಗೆ ಅನುಕೂಲವಾಗಲು ರೂಪಿತವಾದ ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಸಂಬಂಧಿತ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳದ ಶ್ರೇಯಸ್ ಕುಮಾರ್, ನಿಶ್ಚಲ್ ಡಿ. ಮಾರ್ಗದರ್ಶನದಲ್ಲಿ ವೈರ್‌ಕ್ಯಾಂಪ್ ಎಂಬ ಸಂಸ್ಥೆ ನಿರ್ವಹಿಸಿದೆ. ಈ ಮೂಲಕ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸುವವರಿಗೆ ಆರೋಗ್ಯ ಸಂಬಂಧಿತ ವಿವರವನ್ನು ನೀಡಿ ಚಿಕಿತ್ಸೆಯ ದಿನಾಂಕ ಮತ್ತು ಲಭ್ಯತೆಯ ವಿವರಗಳನ್ನು ದೃಢಪಡಿಸಿಕೊಳ್ಳಬಹುದಾಗಿದೆ.

ಹತ್ತು ದಿನಗಳಿಂದ ಆರು ತಿಂಗಳವರೆಗಿನ ಅವಧಿಯ ಚಿಕಿತ್ಸೆಗಾಗಿ ಬುಕಿಂಗ್ ಮಾಡುವ ಅವಕಾಶವಿದೆ. ಚಿಕಿತ್ಸಾಲಯದ ವೆಬ್‌ಸೈಟ್‌ಗೆ www.naturecure.org.in ಭೇಟಿ ನೀಡಿ ಚಿಕಿತ್ಸೆ ಪಡೆಯಲಿಚ್ಛಿಸುವ ದಿನಾಂಕ ನಮೂದಿಸಿ ಲಭ್ಯ ಕೊಠಡಿಗಳ ವಿವರಗಳನ್ನು ಪಡೆಯಬಹುದು.
ನಂತರ ಚಿಕಿತ್ಸೆ ಪಡೆಯಲಿರುವ ವ್ಯಕ್ತಿಯ ಆರೋಗ್ಯ ಸಂಬಂಧಿತ ಹಿಂದಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಸಂಬಂಧಿಸಿದ ತಜ್ಞವೈದ್ಯರು ಈ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆಯ ಸಮ್ಮತಿ ಸೂಚಿಸುತ್ತಾರೆ. ಇದರ ದೃಢೀಕೃತ ಪ್ರತಿಯನ್ನು ಚಿಕಿತ್ಸೆ ಆರಂಭವಾಗುವ ದಿನದಂದು ಸಲ್ಲಿಸಬೇಕಾಗುತ್ತದೆ.

ಆರಂಭಿಕ ಒಂದು ತಿಂಗಳು ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯು ಪ್ರಾಯೋಗಿಕವಾಗಿ ನಿರ್ವಹಿಸಲ್ಪಡಲಿದೆ. ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಪೂರಣ್ ವರ್ಮಾ, ಸೀತಾರಾಮ್ ತೋಳ್ಪಡಿತ್ತಾಯ, ಡಾ.ಪ್ರಶಾಂತ್ ಉಪಸ್ಥಿತರಿದ್ದರು.