ಬೆಳೆ ಹಾನಿ ಪರಿಹಾರಕ್ಕೆ ಆನ್‌ಲೈನ್ ವ್ಯವಸ್ಥೆ

ಚಾಮರಾಜನಗರ: ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಬದಲು ಮೊಬೈಲ್‌ನಲ್ಲಿಯೇ ಇಲಾಖೆಯ ಅಧಿಕಾ ರಿಗಳು ಪ್ರಾಣ ಹಾನಿ, ಬೆಳೆಹಾನಿ ಪ್ರದೇಶದ ಚಿತ್ರ ತೆಗೆದು ಆನ್‌ಲೈನ್ ಮೂಲಕ ಸಲ್ಲಿಸಿ ಶೀಘ್ರ ಪರಿಹಾರ ಪಡೆಯುವ ವ್ಯವಸ್ಥೆಯನ್ನು ಜಾರಿ ಗೊಳಿಸಲಾಗುವುದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಯರಾಮು ತಿಳಿಸಿದರು.
ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಸಂಸ್ಥೆಯ ಆವರಣದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ರೈತಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂ.ಲಿ., ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಡಂ ಚಿನ ರೈತರ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆ ನಷ್ಟಕ್ಕೆ ಪೂರ್ಣ ಪರಿಹಾರ ರೈತರಿಗೆ ಸಿಗುತ್ತಿಲ್ಲ .ಹಾಗಾಗಿ ಬೆಳೆಹಾನಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಪಡೆಯುವ ವ್ಯವಸ್ಥೆಯನ್ನು ಜಾರಿ ತರಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಲಾಖೆಯಿಂದ 20 ಕೋಟಿ ರೂ.ಪರಿಹಾರ ನೀಡಲಾಗಿದೆ ಎಂದರು.
ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಕಂದಕಗಳ ನಿರ್ಮಾಣ ಹಾಗೂ ರೈಲ್ವೆ ಕಂಬಿಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದೆ. ಕಾಡುಪ್ರಾಣಿಗಳು ಕಾಡಿನಿಂದ ಹೊರ ಬಾರದಂತೆ ತಡೆಯುವ ನಿಟ್ಟಿನಲ್ಲಿ ಕಂದಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಆನೆಗಳನ್ನು ತಡೆಯಲು ರೈಲ್ವೆ ಕಂಬಿಗಳನ್ನು ಅಳವಡಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಆದರೆ ಒಂದು ಕಿ.ಮೀ ಉದ್ದದ ರೈಲ್ವೆ ಕಂಬಿ ಅಳವಡಿಕೆಗೆ 1.10 ಕೋಟಿ ರೂ. ವೆಚ್ಚ ತಗಲುತ್ತದೆ ಎಂದರು.