ಎಸ್ಬಿಐ ಖಾತೆಯಿಂದ ರು. 1.43 ಲಕ್ಷ ಕನ್ನ

ಬೀದರ್: ಬ್ಯಾಂಕ್​ನವರು ಎಂದು ಕರೆ ಮಾಡಿ ಚಾಲಾಕಿತನದಿಂದ ಮಾಹಿತಿ ಕಲೆ ಹಾಕಿ ಆನ್ಲೈನ್ ಮೂಲಕ 1.43 ಲಕ್ಷ ರೂ. ಎಗರಿಸಿರುವ ಪ್ರಕರಣ ವರದಿಯಾಗಿದೆ. ನಗರದಲ್ಲಿರುವ ಕೇಬಲ್ ಆಪರೇಟರ್ ಚೌಳಿ ನಿವಾಸಿ ಸಂತೋಷ ಬಾಳೂರೆ ಆನ್ಲೈನ್ ವಂಚಕರಿಂದ ಹಣ ಕಳೆದುಕೊಂಡು ಹೈರಾಣಕ್ಕೆ ಬಿದ್ದವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ನವರು ಎಂದು ಹೇಳಿ ಕರೆ ಮಾಡಿ ಧೋಖಾ ಮಾಡಲಾಗಿದೆ.
ಸಂತೋಷ ಅವರು ಶಿವನಗರದ ಎಸ್ಬಿಐ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇತ್ತೀಚೆಗೆ 3.95 ಲಕ್ಷ ರೂ. ಚೆಕ್ ತಮ್ಮ ಅಕೌಂಟ್ ಜಮೆ ಮಾಡಿದ್ದರು. ಕ್ಲಿಯರೆನ್ಸ್ ಆಗಿ ಚೆಕ್ ಹಣ ಇವರ ಖಾತೆಗೂ ಜಮೆಯಾಗಿದೆ. ಗುರುವಾರ ಮಧ್ಯಾಹ್ನ ಅಪರಿಚಿತನೊಬ್ಬ ಇವರಿಗೆ ಕರೆ (ಮೊ.7346095045) ಮಾಡಿ, ನಾವು ಎಸ್ಬಿಐನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಎಟಿಎಂ ಕಾರ್ಡ್​ ನಂಬರ್ ಕೊಡಿ ಎಂದು ಕೇಳಿದ್ದಾರೆ. ಯಾವುದೇ ವಿಚಾರ ಮಾಡದೆ ಸಂತೋಷ ಎಟಿಎಂ ಕಾರ್ಡ್​ 13 ಡಿಜಿಟ್ ನಂಬರ್ ಕೊಟ್ಟಿದ್ದಾರೆ. ನಂತರ ಸಂಜೆ ಮತ್ತೆ ಕರೆ ಮಾಡಿ ನಿಮ್ಮ ಮೊಬೈಲ್ಗೆ ಮೆಸೆಜ್(ಒಟಿಪಿ) ಬಂದಿದ್ದು, ಹೇಳಿ ಎಂದು ಪಡೆದಿದ್ದಾರೆ. ಹೀಗೆ ನಾಲ್ಕೈದು ಬಾರಿ ಕರೆ ಮಾಡಿ ಎಲ್ಲ ಮಾಹಿತಿ ಕಲೆ ಹಾಕಿದ ಬಳಿಕ ಖಾತೆಯಿಂದ ಮೊದಲು 3 ಸಾವಿರ, ನಂತರ 50 ಸಾವಿರ, 40 ಸಾವಿರ, ನಂತರ 10 ಸಾವಿರದಂತೆ 1.43 ಲಕ್ಷ ರೂ. ಎತ್ತಿದ್ದಾರೆ.
ಖಾತೆಯಿಂದ ಹಣ ಕೊಳ್ಳೆ ಹೊಡೆಯಲಿದ್ದಾರೆ ಎಂಬ ಅರಿವಿಲ್ಲದೆ ಸಂತೋಷ ಒಟಿಪಿ ನಂಬರ್ ನೀಡಿದ್ದಾರೆ. ಗುರುವಾರ ತಡರಾತ್ರಿಗೆ ಇದರ ಅರಿವು ಬಂದಾಗ ಗಾಬರಿಗೊಂಡಿದ್ದಾರೆ. ಶುಕ್ರವಾರ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ 1.43 ಲಕ್ಷ ರೂ. ಡ್ರಾ ಮಾಡಿರುವುದು ಗೊತ್ತಾಗಿದೆ.
ಸಂತೋಷ ಬ್ಯಾಂಕ್ನಲ್ಲಿದ್ದಾಗಲೇ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಈ ವೇಳೆ ಬ್ಯಾಂಕ್ ಸಿಬ್ಬಂದಿಗೆ ತಮ್ಮ ಪೋನ್ ನೀಡಿದ್ದಾಗ ಆ ವ್ಯಕ್ತಿ ಕರೆ ಕಟ್ ಮಾಡಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಯಾರ ಅಕೌಂಟ್ಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಸಂತೋಷ ವಿಚಾರಿಸಿದಾಗ, ಇದು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರಿಗೆ ಹೋಗಿರುವುದು ಬೆಳಕಿಗೆ ಬಂದಿದೆ. ಅಂತಾರಾಜ್ಯ ಆನ್ಲೈನ್ ವಂಚಕರ ಜಾಲ ಇಲ್ಲಿ ಸಕ್ರಿಯವಾಗಿರುವುದು ಸ್ಪಷ್ಟವಾಗಿದೆ. ಸಂತೋಷ ನೀಡಿರುವ ದೂರಿನನ್ವಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *