More

    20 ಸಾವಿರ ರೂ.ನಿಂದ 2000ಕ್ಕಿಳಿದ ಈರುಳ್ಳಿ; ಚಿಲ್ಲರೆ ವ್ಯಾಪಾರಿಗಳು ನಿರಾಳ, ಗ್ರಾಹಕರಿಗೆ ಸಿಗದ ಲಾಭ

    ಕಳೆದ ಎರಡು ತಿಂಗಳಿಂದ ಜನಸಾಮಾನ್ಯರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಏರಿಕೆ ಘಾಟು ಇದೀಗ ಬೆಳೆಗಾರರಿಗೂ ತಟ್ಟಿದೆ. ಡಿಸೆಂಬರ್​ನಲ್ಲಿ ಕ್ವಿಂಟಾಲ್​ಗೆ 20 ಸಾವಿರ ರೂ.ವರೆಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಈರುಳ್ಳಿ ದರ ಏಕಾಏಕಿ 2,200ರವರೆಗೆ ಕುಸಿತ ಕಂಡಿದೆ. ಬೆಂಗಳೂರು ಸೇರಿ ಜಿಲ್ಲಾಮಟ್ಟದ ಮಾರುಕಟ್ಟೆಗೆ ಮಹಾರಾಷ್ಟ್ರ ಈರುಳ್ಳಿ ಆಗಮಿಸುತ್ತಿರುವುದೇ ದರ ಕುಸಿತಕ್ಕೆ ಕಾರಣವಾಗಿದೆ.

    ಜ.26ರಂದು ವಿಜಯಪುರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಈರುಳ್ಳಿ ದರ ಕನಿಷ್ಠ 500 ರೂ. ನಿಂದ ಸಾಧಾರಣ 2,200 ರೂ. ವರೆಗೆ ಇತ್ತು. ಅದೇ ದಿನ ಬೆಂಗಳೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ ಕನಿಷ್ಠ 3 ಸಾವಿರ ರೂ. ಇದ್ದ ದರ ಜ.28ರಂದು 2,400 ರೂ.ಗೆ ಇಳಿಕೆಯಾಗಿದೆ.

    ಮುಂಗಾರು ವಿಳಂಬ ಮತ್ತು ಅತಿಯಾದ ಮಳೆಯಿಂದಾಗಿ ಕಳೆದ ವರ್ಷ ಈರುಳ್ಳಿ ಪೂರೈಕೆಯಲ್ಲಿ ಕೊರತೆ ಉಂಟಾಗಿ ಬೆಲೆ ಏರಿಕೆ ಕಂಡಿತ್ತು. ಕಳೆದ ವರ್ಷ ಪ್ರವಾಹಕ್ಕೆ ತತ್ತರಿಸಿದ್ದ ಮಹಾರಾಷ್ಟ್ರದಲ್ಲೂ ಈರುಳ್ಳಿ ಸಂಪೂರ್ಣ ನೆಲಕಚ್ಚಿದ್ದರಿಂದಾಗಿ ರಾಜ್ಯದಲ್ಲೂ ಬೆಲೆ ಗಗನಮುಟ್ಟಿತ್ತು.

    ಇದೀಗ ಹಿಂಗಾರು ಹಂಗಾಮಿನ ಈರುಳ್ಳಿ ಕಟಾವು ಪ್ರಾರಂಭಗೊಂಡಿರುವುದರಿಂದ ಸಾಂಗ್ಲಿ, ಸತಾರ, ನಾಸಿಕ್, ಪೂನಾ, ಸೊಲ್ಲಾಪುರ ಭಾಗದಿಂದ ರಾಜ್ಯದ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ. ಮಹಾರಾಷ್ಟ್ರದ ಖರೀದಿದಾರರು ಕೂಡ ಈರುಳ್ಳಿಗಾಗಿ ಕರ್ನಾಟಕದತ್ತ ಮುಖ ಮಾಡದಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.

    ಲಾಭ ವ್ಯಾಪಾರಿಗಳ ಪಾಲು

    ಈರುಳ್ಳಿ ದರ ಕ್ವಿಂಟಾಲ್​ಗೆ ಕನಿಷ್ಠ 500 ರೂ. ನಿಂದ 2,200 ರೂ.ವರೆಗೆ ಇದ್ದರೂ ಚಿಲ್ಲರೆ ವ್ಯಾಪಾರಿಗಳು ಪ್ರತಿ ಕೆಜಿಗೆ 50 ರೂ. ನಿಂದ 60 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಬದಲಾಗಿ ಶೇ.50 ಲಾಭಾಂಶ ದಲ್ಲಾಳಿಗಳ ಪಾಲಾಗುತ್ತಿದೆ.

    ಮಹಾರಾಷ್ಟ್ರ ಈರುಳ್ಳಿ ರಾಜ್ಯಕ್ಕೆ ಬರುತ್ತಿರುವುದರಿಂದ ದರ ಇಳಿಕೆಯಾಗುತ್ತಿದೆ. ಜತೆಗೆ ಮಹಾರಾಷ್ಟ್ರದ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಬಾರದಿರುವುದು ದರ ಕುಸಿತಕ್ಕೆ ಕಾರಣವಾಗಿದೆ.

    | ಸುರೇಶ ಮೊಹಿತೆ ಎಪಿಎಂಸಿ ಅಧಿಕಾರಿ ವಿಜಯಪುರ

    ಕಳೆದ ತಿಂಗಳು ಈರುಳ್ಳಿ ಕ್ವಿಂಟಾಲ್​ಗೆ 10 ರಿಂದ 12 ಸಾವಿರ ರೂ. ಇತ್ತು. ಈಗ 500 ರೂ.ನಿಂದ 3000 ರೂ .ಗೆ ಇಳಿಕೆಯಾಗಿದೆ. ಪುಣೆ, ಮಹಾರಾಷ್ಟ್ರ ಗಳಿಂದ ಹಳೇ ಈರುಳ್ಳಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಇನ್ನು 15 ದಿನಗಳಲ್ಲಿ ಚಿತ್ರದುರ್ಗ, ಗದಗ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಹೊಸ ಬೆಳೆ ಬರಲಿದೆ. ಆಗ ಈರುಳ್ಳಿ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.

    | ರಮೇಶ್ ಯಶವಂತಪುರ ಎಪಿಎಂಸಿ ಜಂಟಿ ನಿರ್ದೇಶಕ

    ಕಳೆದ ಅಕ್ಟೋಬರ್​ನಲ್ಲಿ ಪ್ರತಿ ಎಕರೆಯಲ್ಲಿ 4.70 ಲಕ್ಷ ರೂ. ಈರುಳ್ಳಿ ಬೆಳೆಯಲಾಗಿತ್ತು. ಕ್ವಿಂಟಾಲ್​ಗೆ 4 ಸಾವಿರ ರೂ. ದರ ಸಿಕ್ಕಿತ್ತು. ಈ ಬಾರಿ 3 ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು, ಮಾರುಕಟ್ಟೆಯಲ್ಲಿ ದರ ಕಡಿಮೆಯಾಗುತ್ತಿದೆ. ಕಟಾವಿಗೆ ಇನ್ನೆರಡು ತಿಂಗಳು ಕಾಯಬೇಕಿರುವುದರಿಂದ ಮತ್ತೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ.

    | ಶಂಕರಗೌಡ ಪಾಟೀಲ ರೈತ  

    | ಹೀರಾನಾಯ್ಕ ಟಿ. ವಿಜಯಪುರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts