ಈರುಳ್ಳಿ ಬೆಲೆ ಹೆಚ್ಚಿಸಿದ ಪ್ರವಾಹ

ಸ.ದಾ. ಜೋಶಿ ಬೀದರ್
ಈರುಳ್ಳಿ (ಉಳ್ಳಾಗಡ್ಡಿ) ಬೆಲೆ ಕ್ರಮೇಣ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಮತ್ತೆ ಕಣ್ಣೀರು ತರಿಸುವತ್ತ ಸಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹದ ಪ್ರತಿಕೂಲ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಈರುಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.
ಮಹಾರಾಷ್ಟ್ರದ ನಾಸಿಕ್, ಸಾತಾರಾ ಮತ್ತಿತರೆ ಜಿಲ್ಲೆಗಳಲ್ಲಿ ಈರುಳ್ಳಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆದರೆ ಕಳೆದೆರಡು ತಿಂಗಳಿಂದ ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಲ್ಲಿ ಬಹುತೇಕ ಈರುಳ್ಳಿ ಕೊಚ್ಚಿ ಹೋಗಿದೆ. ಲಕ್ಷಾಂತರ ಕ್ವಿಂಟಾಲ್ ಸಮೃದ್ಧ ಫಸಲು ನೀರುಪಾಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ತೀವ್ರ ಕೊರತೆ ಎದುರಾಗಿದ್ದು, ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬೀದರ್, ಕಲಬುರಗಿ, ಯಾದಗಿರಿ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಜನರಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ.
ನಗರ ಸೇರಿ ಜಿಲ್ಲೆಯಲ್ಲಿ ಸದ್ಯ ಈರುಳ್ಳಿ ದರ ಪ್ರತಿ ಕೆಜಿಗೆ 40-50 ರೂ. ಆಗಿದೆ. ಆಗಸ್ಟ್ ಮೊದಲ ವಾರದಲ್ಲಿ ಪ್ರತಿ ಕೆಜಿ ಬೆಲೆ 15 ರೂ. ಇತ್ತು. ಕಳೆದ ಒಂದು ತಿಂಗಳಲ್ಲಿ ಧಾರಣೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ನಾಲ್ಕೈದು ದಿನಗಳ ಹಿಂದೆ 30-35 ರೂ. ಇದ್ದ ಬೆಲೆ ಇದೀಗ 40 ರೂ. ದಾಟಿದೆ. ಗುರುವಾರ ಇಲ್ಲಿನ ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲೇ ಬೆಲೆ 40 ರೂ. ದಾಖಲಾಗಿದೆ. ಎರಡ್ಮೂರು ದಿನಗಳಲ್ಲಿ ನಾಲ್ಕೈದು ರೂ.ನಂತೆ ಬೆಲೆ ಹೆಚ್ಚಳವಾಗುತ್ತಿದೆ. ಇದನ್ನು ಗಮನಿಸಿದರೆ ಅಕ್ಟೋಬರ್ ಹೊತ್ತಿಗೆ ಪ್ರತಿ ಕೆಜಿ ದರ 70 ರೂ. ಆಗುವ ಅಂದಾಜಿದೆ. ಹೀಗಾಗಿ ದಸರಾ, ದೀಪಾವಳಿ ಹಬ್ಬಕ್ಕೆ ಈರುಳ್ಳಿ ದರ ಇನ್ನಷ್ಟು ಶಾಕ್ ನೀಡುವ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಈರುಳ್ಳಿ ಉತ್ಪಾದನೆ ಕಮ್ಮಿಯಿದೆ. ಹೀಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಮಾರುಕಟ್ಟೆಯಿಂದ ಇಲ್ಲಿಗೆ ಈರುಳ್ಳಿ ಬರುತ್ತದೆ. ಆದರೆ ಪ್ರವಾಹದಿಂದ ಬೆಳೆ ಹಾನಿಗೀಡಾರುವ ಕಾರಣ ಸೊಲ್ಲಾಪುರ ಮಾರುಕಟ್ಟೆಗೆ ಈರುಳ್ಳಿ ಬರುವುದು ಸಹ ತೀರ ಕಮ್ಮಿಯಾಗಿ, ಕೊರತೆ ಸೃಷ್ಟಿಯಾಗಿದೆ. ಇದರಿಂದಾಗಿ ನಿತ್ಯವೂ ದರ ಕ್ರಮೇಣ ಹೆಚ್ಚುತ್ತ ಸಾಗಿದೆ. ಹತ್ತು ವರ್ಷದ ಕೆಳಗೆ ಈರುಳ್ಳಿ ದರ 100 ರೂ. ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗಿನ ಸ್ಥಿತಿಗತಿ ಗಮನಿಸಿದರೆ ಮತ್ತೆ ಅಂಥ ಸಮಸ್ಯೆ ಎದುರಾಗಬಹುದೇ ಎಂಬ ಆತಂಕ ಜನರಿಗೆ ಕಾಡುತ್ತಿದೆ.
ಈರುಳ್ಳಿ ಪ್ರಮುಖ ತರಕಾರಿ ಬೆಳೆ. ಪ್ರತಿ ನಿತ್ಯದ ಆಹಾರದ ಜತೆಗೆ ಗ್ರೀನ್ ಸಲಾಡ್ನಲ್ಲಿ ಅತೀ ಹೆಚ್ಚು ಬಳಸಲಾಗುತ್ತದೆ. ಈರುಳ್ಳಿ ಇಲ್ಲದೆ ಊಟೋಪಹಾರವೇ ಇಲ್ಲ ಎಂಬಂತಿದೆ. ಹೀಗಾಗಿ ಎಷ್ಟೇ ಧಾರಣೆಯಿದ್ದರೂ ಈರುಳ್ಳಿ ಮಾತ್ರ ಜನರಿಂದ ದೂರವಾಗುವುದು ಕಷ್ಟ. ಆದರೆ ಜೇಬಿಗೆ ಕತ್ತರಿ ಹಾಕುವುದು ಸ್ಪಷ್ಟ. ಹೋಟೆಲ್ನವರಿಗೆ ಬೆಲೆಯೇರಿಕೆ ಬರೆ ಹಾಕಿದೆ. ಸಾಮಾನ್ಯವಾಗಿ ಈರುಳ್ಳಿಯನ್ನು ಜನರು 10ರಿಂದ 50 ಕೆಜಿಯಷ್ಟು ಖರೀದಿ ಮಾಡುತ್ತಾರೆ. ಆದರೆ ಈಗಿನ ಬೆಲೆ ಹೆಚ್ಚಳದಿಂದಾಗಿ ಈ ಪ್ರಮಾಣ ಒಂದೆರಡು ಕೆಜಿ ಲೆಕ್ಕಕ್ಕೆ ತಂದು ನಿಲ್ಲಿಸಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಇದರ ಬಿಸಿ ಜೋರಾಗಿ ತಟ್ಟಿದೆ.
ತರಕಾರಿ ದರವೂ ಹೆಚ್ಚಳ: ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿಯಂಥ ಸ್ಥಿತಿ ನಿರ್ಮಾಣವಾದ ಕಾರಣ ವಿವಿಧ ತರಕಾರಿ ಬೆಲೆಗಳಲ್ಲಿ ಸಹ ಹೆಚ್ಚಳ ಕಂಡುಬಂದಿದೆ. ಬೀನ್ಸ್ ಬೆಲೆ ಮತ್ತೆ ಕೆಜಿಗೆ 80 ರೂ. ಆಗಿದೆ. ಜುಲೈ ತಿಂಗಳಲ್ಲಿ 200 ರೂ. ಗಡಿ ದಾಟಿ ದಾಖಲೆ ಮಾಡಿದ್ದ ಬೀನ್ಸ್ ಬೆಲೆ ನಂತರ 40 ರೂ.ಗಳಿಗೆ ಕುಸಿದಿತ್ತು. ಆದರೀಗ 80ಕ್ಕೇರಿದೆ. ಕೆಲವು ತರಕಾರಿ ಅಗ್ಗವಾದರೆ ಮತ್ತೆ ಕೆಲವು ತುಟ್ಟಿಯಾಗಿವೆ. ಸದ್ಯೆ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಅತೀ ಕಮ್ಮಿ 5-10 ರೂ. ಪ್ರತಿ ಕೆಜಿಯಿದೆ. ನಂತರ ಆಲೂಗಡ್ಡೆ ದರ 15-20 ರೂ. ಇದೆ. ಉಳಿದಂತೆ ಹಿರೇಕಾಯಿ, ಭೇಂಡೆಕಾಯಿ, ಗಜ್ಜರಿ, ದಪ್ಪ ಮೆಣಸಿನಕಾಯಿ, ಗೋಬಿ ಮುಂತಾದವುಗಳ ದರ 40-50 ರೂ. ಆಸುಪಾಸಿದೆ. ಪಾಲಕ್, ಸಬ್ಬಸಿಗೆ ಸೊಪ್ಪು ಧಾರಣೆ ಸ್ವಲ್ಪ ಕಮ್ಮಿಯಾಗಿದೆ.
ಜನಸಾಮಾನ್ಯರ ಜೇಬಿಗೆ ಕತ್ತರಿ!: ತರಕಾರಿ ಬೆಲೆ ಹೆಚ್ಚಾದಷ್ಟು ಜಾಸ್ತಿ ಭಾರ ಜನಸಾಮಾನ್ಯರ ಮೇಲಾಗುತ್ತದೆ. ಸಗಟು ಅಥವಾ ಚಿಲ್ಲರೆ ತರಕಾರಿ ಮಾರುವವರಿಗೆ ಇದು ಯಾವ ಪರಿಣಾಮವೂ ಬೀರಲ್ಲ. ದರ ಏರುಪೇರಿನ ಹೊರೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತದೆ. ಮಳೆ ಅಭಾವದಿಂದ ಜಿಲ್ಲೆಯಲ್ಲಿ ವಿವಿಧ ತರಕಾರಿ ಉತ್ಪನ್ನ ಕಮ್ಮಿಯಾಗಿದೆ. ಹೀಗಾಗಿ ಹೈದರಾಬಾದ್, ಬೆಳಗಾವಿ, ಸೊಲ್ಲಾಪುರ ಮುಂತಾದಡೆಗಳಿಂದ ಇಲ್ಲಿಗೆ ತರಕಾರಿ ಬರುತ್ತದೆ. ಅಲ್ಲಲ್ಲಿ ದರ ವಿಭಿನ್ನವಾಗಿರುತ್ತವೆ. ಸಾರಿಗೆ ವೆಚ್ಚ ಸಹ ಹೆಚ್ಚಿದೆ. ಅದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಳ್ಳುವ ಜತೆಗೆ ತಮ್ಮ ಲಾಭ ನೋಡಿಕೊಂಡೇ ವ್ಯಾಪಾರಿಗಳು ತರಕಾರಿ ಮಾರುತ್ತಾರೆ.

ಮಹಾರಾಷ್ಟ್ರದಲ್ಲಿನ ಅತಿವೃಷ್ಟಿ ಪರಿಣಾಮದಿಂದ ಕಳೆದೊಂದು ತಿಂಗಳಿಂದ ಬೀದರ್ ಮಾರುಕಟ್ಟೆಗೆ ಬೇಡಿಕೆಗಿಂತ ಶೇ. 50ರಷ್ಟು ಕಡಿಮೆ ಈರುಳ್ಳಿ ಬರುತ್ತಿದೆ. ನಾಸಿಕ್ ಇತರೆಡೆ ಸಾಕಷ್ಟು ಬೆಳೆ ಹಾನಿಗೀಡಾಗಿರುವ ಕಾರಣ ಕ್ರಮೇಣ ಧಾರಣೆ ಹೆಚ್ಚುತ್ತಿದೆ. ಹೊಸದಾಗಿ ಬೆಳೆ ಉತ್ಪನ್ನವಾಗುವವರೆಗೆ ದರ ಕಮ್ಮಿಯಾಗುವ ಸಾಧ್ಯತೆಗಳಿಲ್ಲ. ಈಗಿನ ಸ್ಥಿತಿ ಗಮನಿಸಿದರೆ ಇನ್ನೊಂದು ತಿಂಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗಲಿದೆ.
-ಅಬ್ದುಲ್ ಗಫಾರ್, ತರಕಾರಿ ಸಗಟು ವ್ಯಾಪಾರಿ ಬೀದರ್

Leave a Reply

Your email address will not be published. Required fields are marked *