ಈರುಳ್ಳಿ, ರಾಗಿಗೆ ಬೇಕು ಬೆಂಬಲ ಬೆಲೆ

ಹರಪನಹಳ್ಳಿ: ಈರುಳ್ಳಿ, ರಾಗಿ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಹಿರೇಕೆರೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ ಉಪ ವಿಭಾಗಾಕಾರಿ ಇಸ್ಮಾಯಿಲ್ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಎಚ್.ಎಂ.ಮಹೇಶ್ವರಸ್ವಾಮಿ ಮಾತನಾಡಿ, ರಾಜ್ಯದ ಅನೇಕ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಏರುತ್ತಿರುವ ತಾಪಮಾನಕ್ಕೆ ಜನತೆ ಚಿಂತೆಗೀಡಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ಈರುಳ್ಳಿ ಮತ್ತು ರಾಗಿ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ಅನ್ನದಾತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಬಿಪಿಎಲ್ ಕಾರ್ಡ್, ಅನಿಲಭಾಗ್ಯ ಪಡೆದ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ನಿಲ್ಲಿಸಿದ ಪರಿಣಾಮ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಅಡುಗೆ ಅನಿಲ ಅಡುಗೆಗೆ ಬಳಕೆ ಆಗುತ್ತದೆ. ಇದರಿಂದ ದೀಪ ಬೆಳಗಲು ಬರುವುದಿಲ್ಲ. ಹೀಗಾಗಿ ಸೀಮೆಎಣ್ಣೆ ವಿತರಿಸಿ, ಇಲ್ಲದಿದ್ದರೆ ಸೋಲಾರ್, ಯುಪಿಎಸ್ ಬ್ಯಾಟರಿ ಕೊಡಿ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಬೂದಿಹಾಳು ಸಿದ್ದೇಶ್, ಸಂಘಟನೆ ಮುಖಂಡರಾದ ಜಿ.ಚಂದ್ರಪ್ಪ, ಎಂ.ಅಂಜಿನಪ್ಪ, ಟಿ.ರೇವಪ್ಪ, ಕೆ.ಕೊಟ್ರಪ್ಪ, ರಮೇಶ್, ಶಫಿವುಲ್ಲಾ, ಹನುಮಂತಪ್ಪ, ಕುಲುಮಿ ಚಂದ್ರಪ್ಪ, ನೀಲಪ್ಪ, ಚನ್ನಬಸಪ್ಪ, ಶಂಭುಲಿಂಗಪ್ಪ ಇತರರಿದ್ದರು.