ಜಮಖಂಡಿ: ರಾಜಕೀಯಕ್ಕೆ ಬರುವವರು ಸೇವೆ ಮಾಡಲು ಬರಬೇಕು. ಆಸ್ತಿ ಮಾಡಲು ಬರಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ನಗರದಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ರಾಜಕಾರಣ ಎಂದರೆ ಹಣ ಗಳಿಸಿ ಶ್ರೀಮಂತರಾಗುವುದಲ್ಲ, ಸಾಮಾನ್ಯ ಜನರಿಗೆ ಸೇವೆ ಒದಗಿಸುವುದಾಗಿದೆ ಎಂದರು.
ಎಲ್ಲ ಪಕ್ಷಗಳು ಒಂದೇ ಶಾಲೆಯಿಂದ ಬಂದವು. ಆಮಿಷವೊಡ್ಡಿ ಜನರಿಂದ ಮತ ಪಡೆಯುತ್ತಿವೆ. ಶ್ರೀಮಂತರಾಗುವುದು ತಪ್ಪಲ್ಲ. ಆದರೆ ಅಕ್ರಮವಾಗಿ ಗಳಿಸಬಾರದು. ಸರ್ಕಾರದ ಸಂಪತ್ತನ್ನು ಅಕ್ರಮವಾಗಿ ಬಳಸಬಾರದು. ರಾಜಕಾರಣಕ್ಕೆ ಒಳ್ಳೆಯವರು ಬರಬೇಕು. ಒಳ್ಳೆಯ ಕಾರ್ಯ ಮಾಡುವವರು ರಾಜಕಾರಣದಲ್ಲಿ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಸಲಾತಿ ಲಾಭ ಪಡೆದ ಕುಟುಂಬದವರೇ ಮತ್ತೆ ಅದರ ಲಾಭ ಪಡೆಯುತ್ತಿದ್ದಾರೆ. ಸಚಿವರು, ಅಧಿಕಾರಿಗಳ ಮಕ್ಕಳೇ ಇದರ ಲಾಭ ಪಡೆಯುತ್ತಿದ್ದಾರೆ. ಕೆಳಹಂತದವರು ಅದರ ಲಾಭ ಪಡೆಯದೆ ಅವರು ಅಲ್ಲೇ ಇದ್ದಾರೆ. ಈಗ ಒಳ ಮೀಸಲಾತಿ ಹುಡುಕುತ್ತಿದ್ದಾರೆ. ಒಳ ಮೀಸಲಾತಿಯಲ್ಲೂ ಅದೇ ಆಗುತ್ತದೆ ಎಂದರು.
ಲೋಕಾಯುಕ್ತರಿಂದ ಜನರಿಗೆ ಏನೆಲ್ಲ ಸಹಾಯ ಆಗುತ್ತದೆ ಎಂದು ನ್ಯಾಯಮೂರ್ತಿಯಾಗಿದ್ದ ಎನ್. ವೆಂಕಟಾಚಲ ಮತ್ತು ನಾನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಲೋಕಾಯುಕ್ತ ಸಂಸ್ಥೆ ಉತ್ತಮವಾದ ಸಂಸ್ಥೆಯಾಗಿದೆ. ಜನರಿಗಾಗುವ ಅನ್ಯಾಯಕ್ಕೆ ಪರಿಹಾರ ಕೊಡಿಸುವುದು, ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಲೋಕಾಯುಕ್ತಕ್ಕೆ ಹಲ್ಲು ಇದೆ. ಆದರೆ ಕಚ್ಚಾಕ್ಕಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹೊಯ್ಸಳ ಗ್ರಂಥಾಲಯ ಕಾರ್ಯಕ್ಕೆ ಶ್ಲಾಘನೆ: ನಗರ ಸಮೀಪದ ಕಡಪಟ್ಟಿ ಹೊಯ್ಸಳ ಗ್ರಂಥಾಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ, ಗ್ರಂಥಾಲಯ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕಗಳನ್ನು ಒದಗಿಸಿದ್ದು, ಓದುವ ವಾತಾವರಣ ಸೃಷ್ಟಿಸಿದ್ದು ಶ್ಲಾಘನೀಯ ಎಂದರು.