More

  ತಿಂಗಳಿಗೊಂದು ಜನಸಂಪರ್ಕ ಸಭೆ

  ತಿ.ನರಸೀಪುರ: ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜನತೆಯ ಸಮಸ್ಯೆ ಪರಿಹಾರಕ್ಕಾಗಿ ತಿಂಗಳಿಗೆ ಒಂದು ಬಾರಿ ಜನಸಂಪರ್ಕ ಸಭೆ ನಡೆಸಲು ಮುಖ್ಯಮಂತ್ರಿ ಸಚಿವಾಲಯದಿಂದ ಆದೇಶ ಕೊಡಿಸುತ್ತೇನೆ ಎಂದು ಮಾಜಿ ಶಾಸಕ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

  ವರುಣ ಕ್ಷೇತ್ರ ವ್ಯಾಪ್ತಿಯ ಹುಣಸೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಹುಣಸೂರು ಗ್ರಾಮ ಸೇರಿದಂತೆ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕ ಸಮಸ್ಯೆಗಳು ಹೆಚ್ಚಾಗಿವೆ. ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಹೋಗಲು ಶಕ್ತರಾಗಿಲ್ಲದ ಕಾರಣ ಹಳ್ಳಿಗಳಲ್ಲಿಯೇ ಜನಸಂಪರ್ಕ ಸಭೆ ಏರ್ಪಡಿಸಿ ಸಾಧ್ಯವಾದಷ್ಟು ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ಮಾಡಲು ಮುಖ್ಯಮಂತ್ರಿ ಸಚಿವಾಲಯದಿಂದ ಆದೇಶ ಕೊಡಿಸುತ್ತೇನೆ ಎಂದು ತಿಳಿಸಿದರು.

  ಹುಣಸೂರು ಗ್ರಾಮದಲ್ಲಿ ನಮಗೆ ಅತ್ಯಂತ ಹೆಚ್ಚಿನ ಮತ ನೀಡಿದ್ದಾರೆ. ನಮ್ಮ ಸ್ಥಳೀಯ ನಾಯಕರು ಮನೆ ಮನೆಗೆ ಹೋಗಿ ಜನರ ಮನವೊಲಿಸಿ ನಮಗೆ ಸಹಕಾರ ನೀಡಿದ್ದಾರೆ. ಹಾಗಾಗಿ ಗ್ರಾಮದ ಸಮಸ್ತರಿಗೆ ಧನ್ಯವಾದ ಹೇಳುತ್ತೇನೆ. ವರುಣ ಕ್ಷೇತ್ರ ರಚನೆಯಾದಾಗಿನಿಂದಲೂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೀರಿ. ಕ್ಷೇತ್ರದಲ್ಲಿ ತಂದೆ ಅವರು ಗೆದ್ದಾಗಲೆಲ್ಲ ಅವರಿಗೆ ಉನ್ನತ ಸ್ಥಾನ ಲಭಿಸಿದೆ. ಈ ಬಾರಿ ಸಹ ಇಲ್ಲಿಂದ ಅವರು ಗೆದ್ದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಇದಕ್ಕೆ ಕಾರಣ ಕ್ಷೇತ್ರದ ಜನತೆ ಅವರ ಮೇಲಿಟ್ಟಿರುವ ಅಭಿಮಾನ ಎಂದರು.

  ಕೈಗಾರಿಕೆ ಸ್ಥಾಪನೆಗೆ ನಿರಂತರ ಯತ್ನ: ವರುಣ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋಗಿಗಳು ಹೆಚ್ಚಿದ್ದಾರೆ. ಅವರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಎರಡು ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬ ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

  ಗೃಹಲಕ್ಷ್ಮೀ ಸಮಸ್ಯೆಗೆ ಶೀಘ್ರ ಮುಕ್ತಿ: ಗೃಹಲಕ್ಷ್ಮೀ ಯೋಜನೆಯಡಿ ನಿಮ್ಮ ಖಾತೆಗಳಿಗೆ ಹಣ ಜಮಾವಣೆಯಾಗಿಲ್ಲ ಎಂದು ಮಹಿಳೆಯರು ದೂರಿದ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಎರಡು ತಿಂಗಳ ಹಿಂದಷ್ಟೇ ಆರಂಭವಾಗಿರುವ ನೂತನ ಯೋಜನೆ. ಕೆಲವೊಂದು ತಾಂತ್ರಿಕ ದೋಷ ಇರುವುದು ನಿಜ. ಈ ಸಂಬಂಧ ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಖ್ಯಮಂತ್ರಿ ಸಭೆಯೊಂದನ್ನು ಮಾಡಿ ಆಗಿರುವ ತೊಂದರೆ ಸರಿಪಡಿಸಲು ಪರಿಹಾರ ಕಂಡುಹಿಡಿಯಲಿದ್ದು ಪ್ರತಿಯೊಬ್ಬರಿಗೂ ಯೋಜನೆಯ ಹಣ ತಲುಪಲಿದೆ. ಯಾರೂ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಯತೀಂದ್ರ ತಿಳಿಸಿದರು.

  ನೂರಾರು ಅರ್ಜಿಗಳ ಸಲ್ಲಿಕೆ: ಹುಣಸೂರು, ಬಿಲಿಗೆರೆಹುಂಡಿ, ಕಿರಗಸೂರು, ಮನ್ನೇಹುಂಡಿ, ಕೂಡ್ಲೂರು ಹಾಗೂ ಡಣಾಯಕನಪುರ ಗ್ರಾಮಗಳಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಜನರು ಸಮಸ್ಯೆಗಳನ್ನು ಬಗೆಹರಿಸುವಂತೆ ನೂರಾರು ಅರ್ಜಿಗಳನ್ನು ಸಲ್ಲಿಸಿದರು.

  ಜಿಪಂ ಮಾಜಿ ಸದಸ್ಯ ಕೆ. ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್. ಪ್ರಶಾಂತ್ ಬಾಬು, ಡೇರಿ ಅಧ್ಯಕ್ಷ ಬಿ.ಮಂಟೇಲಿಂಗಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹದೇವ್, ಕಿರಗಸೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಮಾಜಿ ಉಪಾಧ್ಯಕ್ಷ ಹುಣಸೂರು ನಾಗರಾಜು, ತುಂಬಲ ಗ್ರಾಪಂ ಅಧ್ಯಕ್ಷ ರಾಮನಂಜಯ್ಯ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವಕ್ತಾರ ಹುಣಸೂರು ಬಸವಣ್ಣ, ತಾಪಂ ಮಾಜಿ ಸದಸ್ಯ ರಮೇಶ್, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಡಿಕೆಸಿ ಅಭಿಮಾನಿ ಬಳಗದ ಅಧ್ಯಕ್ಷ ಚೇತನ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್, ವೈದ್ಯಕೀಯ ವಿಭಾಗದ ಜಿಲ್ಲಾಧ್ಯಕ್ಷ ಡಾ.ಪ್ರದೀಪ್, ಡಿಸಿಸಿ ಸದಸ್ಯ ಗೋಪಾಲಪುರ ಮಹೇಶ್, ರೇವಣ್ಣ, ಗುತ್ತಿಗೆದಾರ ಬಸವರಾಜು, ತಹಸೀಲ್ದಾರ್ ಸುರೇಶ್ ಆಚಾರ್, ತಾಪಂ ಇಒ ಸಿ.ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ, ವೃತ್ತ ನಿರೀಕ್ಷಕ ಧನಂಜಯ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts