Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಚಿತ್ರವೊಂದು ಭಾವ ಹಲವು

Sunday, 19.08.2018, 3:02 AM       No Comments

‘ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ’ ಎನ್ನುವ ಮಾತಿದೆ. ಇಂಥ ಮಾತನಾಡುವ ಚಿತ್ರಗಳನ್ನು ತೆಗೆಯುವುದು ಸುಲಭದ ಮಾತಲ್ಲ. ಸ್ಕಾಟ್​ಲೆಂಡ್​ನ ಅಲ್ಲಾನ್ ಮ್ಯಾಕ್​ಫೆಡೀನ್ ಎಂಬ ವನ್ಯಜೀವಿ ಛಾಯಾಚಿತ್ರಕಾರ, ಕಿಂಗ್​ಫಿಷರ್ ಹಕ್ಕಿಯ ಚಿತ್ರವೊಂದನ್ನು ತೆಗೆಯಲು ಸತತ ಆರು ವರ್ಷ ಶ್ರಮಪಟ್ಟಿದ್ದ. ಸುಮಾರು 62ಸಾವಿರ ಫೋಟೊಗಳನ್ನು ಕ್ಲಿಕ್ಕಿಸಿದ್ದ ಆತನಿಗೆ ಅದರಲ್ಲಿ ತಾನು ಬಯಸಿದಂತೆ ಸಿಕ್ಕಿದ್ದ ಫೋಟೊ ಒಂದೇ ಒಂದು! ಫೋಟೊ ಮಹಿಮೆಯೇ ಅಂಥದ್ದು. ತಮ್ಮ ಕಲ್ಪನೆಯಲ್ಲಿರುವ ಚಿತ್ರವನ್ನು ಕ್ಯಾಮರಾದ ಕಣ್ಣಲ್ಲಿ ತುಂಬಿಸಲು ಜೀವದ ಹಂಗು ತೊರೆವ, ದಿನಗಟ್ಟಲೆ, ವರ್ಷಗಟ್ಟಲೆ ಕಾಯುವ, ಹಗಲೂರಾತ್ರಿ ಕಾಡುಮೇಡು ಅಲೆಯುವ ಛಾಯಾಚಿತ್ರಕಾರರು ಅದೆಷ್ಟೋ ಮಂದಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದ ಅಂಥ ಕೆಲವು ಛಾಯಾಚಿತ್ರಕಾರರು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಒಂದು ಸಾವಿರ ಅಡಿ ಎತ್ತರ ಏರಿದ್ದೆ…

ಗಂಟೆಗಟ್ಟಲೆ, ತಿಂಗಳುಗಟ್ಟಲೆ ಕಾದು ಪ್ರಾಣಿ, ಪಕ್ಷಿಗಳ ಫೋಟೊ ತೆಗೆದಿರುವ ನನಗೆ ವಿಶೇಷ ಅನುಭೂತಿ ನೀಡಿದ್ದು ಚಂದ್ರಗುತ್ತಿಯ ಕೋಟೆಯ ಚಿತ್ರ. ನೆಲದಿಂದ ಒಂದುಸಾವಿರ ಅಡಿ ಮೇಲೆ ಇರುವ ಈ ಕೋಟೆಯ ಫೋಟೊ ತೆಗೆದಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಸ್ಥಳೀಯರಿಗೇ ತಿಳಿಯದ ರಹಸ್ಯ ಎಂದು ಎನಿಸುವ ಈ ಕೋಟೆಯ ಚಿತ್ರ ತೆಗೆಯಲು ನಾನು ಸುಮಾರು ಮೂರೂವರೆ ಗಂಟೆ ಗುಡ್ಡ ಹತ್ತಿದ್ದೇನೆ. ಇಲ್ಲೊಂದು ಕೋಟೆ ಇದೆ ಎಂಬುದನ್ನು ಕೇಳಿದ್ದೆ. ಅದರ ಬಗ್ಗೆ ಮಾಹಿತಿ ಸಂಗ್ರಹಿಸುವ ಎಂದರೆ ಇಲ್ಲಿ ಕೋಟೆ ಇರುವುದೇ ಸುಳ್ಳು ಎಂದಿದ್ದರು ಹಲವರು. ಆದರೂ ಕೋಟೆಯ ಬೆನ್ನು ಹತ್ತಿದ ನಾನು ಬೆಟ್ಟ ಏರಿದೆ… ಇನ್ನೂ ಏರಿದೆ… ಮತ್ತೂ ಏರಿದೆ… ಒಂದು, ಎರಡು, ಮೂರು ತಾಸು ಕಳೆಯಿತು… ಕೋಟೆ ಮಾತ್ರ ಕಾಣಿಸಲೇ ಇಲ್ಲ. ತುಂಬಾ ದಣಿದಿದ್ದೆ. ಆದರೂ ಪಟ್ಟುಬಿಡಲಿಲ್ಲ. ಕೊಪ್ಪಳದ ಕೋಟೆಯನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲು ದಾರಿಯಿಲ್ಲದ ಹಾದಿಯಲ್ಲಿ ತೆವಳುತ್ತಾ ಸಾಗಿದ್ದು, ರಾಯಚೂರಿನ ಮುಗುದಲ್ ಕೋಟೆಯ ಫೋಟೊಗಳನ್ನು ಕ್ಲಿಕ್ಕಿಸಲು ಒಂದುಕಾಲಿನಲ್ಲಿ ನಿಂತು ಸರ್ಕಸ್ ಮಾಡಿದ್ದ ಎಲ್ಲಾ ಅನುಭವ ನನ್ನೊಂದಿಗೆ ಇತ್ತಲ್ಲ… ಅದನ್ನೇ ನೆನೆದುಕೊಳ್ಳುತ್ತಾ ಇನ್ನೂ ಹತ್ತಿದೆ. ಮೂರೂವರೆ ಗಂಟೆಯ ನಂತರ ಕೋಟೆಯ ಮೇಲೆ ನಾನಿದ್ದೆ! ಅಬ್ಬಾ..! ಎಂಥ ದೃಶ್ಯವದು…ಅದ್ಭುತ ಲೋಕ… ಅಕ್ಷರಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ… ಎಲ್ಲೆಲ್ಲೂ ಹಸಿರು… ದಣಿವೆಲ್ಲಾ ಕ್ಷಣಮಾತ್ರದಲ್ಲಿ ಹಾರಿಹೋಯಿತು. ಈ ಕಾಡಿನಲ್ಲಿ, ಈ ಗುಡ್ಡದ ಮೇಲೆ ಕೋಟೆ ಹೇಗೆ ಕಟ್ಟಿದರು, ಯಾಕೆ ಕಟ್ಟಿದರು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ. ಆದರೆ ಇಂಥ ಅದ್ಭುತ ಕೋಟೆಗೆ ದಾರಿ ಮಾಡಿದರೆ ಇದೊಂದು ಒಳ್ಳೆಯ ಪ್ರವಾಸಿತಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಎನ್ನಿಸಿದ್ದು ಮಾತ್ರ ಸುಳ್ಳಲ್ಲ.

| ವಿಶ್ವನಾಥ ಸುವರ್ಣ ಬೆಂಗಳೂರು

ಸೂರ್ಯರಶ್ಮಿ ಸೆರಗಲ್ಲಿ ಆನೆಗಳು

ನನಗೆ ಚಿಕ್ಕಂದಿನಿಂದಲೂ ಗಣೇಶ ಎಂದರೆ ಬಲುಪ್ರೀತಿ. ಅದಕ್ಕೋ ಏನೋ ಆನೆಗಳೆಂದರೆ ಒಂಥರಾ ಖುಷಿ. ನನ್ನ ಸ್ನೇಹಿತರು ನನಗೆ ಟಸ್ಕರ್ (ಗಂಡಾನೆ) ಎಂದೇ ಕರೆಯುವುದುಂಟು. ಎಷ್ಟೋ ಪ್ರಾಣಿ, ಪಕ್ಷಿಗಳ ಫೋಟೊ ಕ್ಲಿಕ್ಕಿಸಿರುವ ನನಗೆ ಇವೆಲ್ಲಕ್ಕಿಂತ ಬಲು ಖುಷಿ ಕೊಡುವುದು ಆನೆಗಳ ಫೋಟೊ ಕ್ಲಿಕ್ಕಿಸಿದಾಗಲೇ. 36 ವರ್ಷಗಳ ನನ್ನ ಛಾಯಾಗ್ರಹಣದ ಅನುಭವದಲ್ಲಿ, ಅವೆಷ್ಟು ಆನೆಗಳು ನನ್ನ ಕ್ಯಾಮರಾದಲ್ಲಿ ಸೆರೆಯಾಗಿವೆಯೋ ಲೆಕ್ಕವಿಲ್ಲ. 

ಭಾರತದ ಎಲ್ಲಾ ಕಾಡುಮೇಡು, ನ್ಯಾಷನಲ್ ಪಾರ್ಕ್, ಅಭಯಾರಣ್ಯ ಎಲ್ಲವನ್ನೂ 45ಕ್ಕೂ ಅಧಿಕ ಸಲ ಸುತ್ತಿದ್ದೇನೆ, ಬೇರೆ ಪ್ರಾಣಿ, ಪಕ್ಷಿಗಳ ಜೊತೆ ಹೆಚ್ಚಾಗಿ ಆನೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇನೆ. ನನಗೆ ಬೇಕಾದಂಥ ಫೋಟೊ ತೆಗೆಯಲು ಸಾಕಷ್ಟು ಸರ್ಕಸ್ ಕೂಡ ಮಾಡಿದ್ದೇನೆ.ಮೂರು ವರ್ಷದ ಹಿಂದೆ ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್​ನಲ್ಲಿ ಅಚಾನಕ್ ಆಗಿ ಸಿಕ್ಕ ಸುಮಾರು 200 ಆನೆಗಳ ಹಿಂಡಿನ ಫೋಟೊ ಕ್ಲಿಕ್ಕಿಸುವಾಗ ಆದ ಅನುಭವ ಅಂಥಿಂಥದಲ್ಲ. ಸೂರ್ಯ ಇನ್ನೂ ಉದಯಿಸುತ್ತಿದ್ದ. ಸೂರ್ಯನ ರಶ್ಮಿ ಸುತ್ತಲೂ ಹರಡಿ ಎಲ್ಲೆಡೆಯೂ ಕೆಂಪುವರ್ಣ. ಅದರ ಕಿರಣ ಅಲ್ಲಿಯೇ ಇದ್ದ ಕೆರೆಯ ನೀರಿನ ಮೇಲೆ ಬಿದ್ದಿತ್ತು. ವಾವ್! ಎಂಥ ಅದ್ಭುತ ದೃಶ್ಯವದು ಎಂದುಕೊಳ್ಳುತ್ತಿರುವಾಗಲೇ ಆನೆಗಳ ದೊಡ್ಡ ಹಿಂಡುಗಳು ಅಲ್ಲಿಗೆ ಬಂದವು. ಅವುಗಳ ಹಿಂದೆ ಮತ್ತಷ್ಟು ಆನೆಗಳ ಹಿಂಡು! ಎಲ್ಲಾ ಸೇರಿ 200ಕ್ಕೂ ಅಧಿಕ ಆನೆಗಳು. ಇಷ್ಟೊಂದು ಆನೆಗಳನ್ನು ಒಟ್ಟಿಗೇ ನೋಡಿದ್ದು ಅದೇ ಮೊದಲು. ಆನೆಗಳು ಅದೇ ಹಳ್ಳದಲ್ಲಿ ಇಳಿದು ನೀರು ಕುಡಿದು, ಸ್ನಾನ ಮಾಡಿದವು, ಮಣ್ಣಿನ ಸ್ನಾನವೂ ಅಲ್ಲಿಯೇ ಆಯಿತು. ಅನೆಗಳ ಸ್ವಭಾವದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ನಾನು, ನಿಧಾನವಾಗಿ ಅವುಗಳ ಎಲ್ಲಾ ಚಲನವಲನಗಳನ್ನು ಸೆರೆಹಿಡಿದೆ.

| ಎಚ್.ಸತೀಶ್ ಟಿ.ನರಸೀಪುರ

ಹುಡುಕುತ್ತಿದ್ದ ಶಿವ ಸಿಕ್ಕೇಬಿಟ್ಟ

ಇಲ್ಲಿ ಕಾಣಿಸುತ್ತಿದೆಯಲ್ಲ, ಇದರ ವೈಜ್ಞಾನಿಕ ಹೆಸರು ‘ಶಾಹೀನ್ ಫೆಲ್ಕಾನ್’. ಆದರೆ ನನ್ನಂಥವರು ಈ ಪಕ್ಷಿಗೆ ಇಟ್ಟಿರುವ ಅಡ್ಡ ಹೆಸರು ‘ಶಿವ’. ಅದಕ್ಕೂ ಕಾರಣವಿದೆ. ಶಿವ ಎಂದರೆ ಲಯಕಾರಕ. ಯಾವುದೇ ಜೀವಿ ಅಗತ್ಯಕ್ಕಿಂತ ಹೆಚ್ಚಿಗೆ ಪ್ರಮಾಣದಲ್ಲಿ ಭೂಮಿ ಮೇಲಿದ್ದರೆ ಅದರ ವಿನಾಶಕ್ಕೆಂದು ಇನ್ನೊಂದು ಜೀವಿಯ ಸೃಷ್ಟಿಯಾಗಿರುವುದು ಪ್ರಕೃತಿಯ ನಿಯಮ. ಅದರಂತೆ ಪಾರಿವಾಳಗಳ ಸಂಖ್ಯೆಯನ್ನು ನಿಯಂತ್ರಿಸಲು ಹುಟ್ಟಿರುವುದೇ ‘ಶಾಹೀನ್ ಫೆಲ್ಕಾನ್’. ಅಷ್ಟಕ್ಕೂ ಈ ಪಕ್ಷಿ ಅಪರೂಪವೆಂದೇನಲ್ಲ. ಅಪಾರ್ಟ್​ವೆುಂಟ್​ಗಳಲ್ಲಿ, ಮೊಬೈಲ್ ಟವರ್ಸ್, ಗುಡ್ಡಗಾಡು ಎಲ್ಲೆಡೆಯೂ ವಾಸಿಸುತ್ತದೆ. 

ಹಾಗೆಂದು ಸುಲಭದಲ್ಲಿ ಕಾಣಿಸುತ್ತದೆ ಎಂದರೆ ಅದು ಶುದ್ಧ ತಪು್ಪ. ಗಂಟೆಗೆ ಸುಮಾರು 326 ಕಿ.ಮೀ. ವೇಗದಲ್ಲಿ ಹಾರುವ ಭೂಮಿಯ ಮೇಲಿನ ‘ಹೈಸ್ಪೀಡ್’ ಪಕ್ಷಿಯಾಗಿರುವ ಇದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ದೂರದ ಮಾತು, ಬರಿಯ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುವುದೇ ಕಷ್ಟ. ಆದರೆ ಈ ಅಚ್ಚರಿ ಪಕ್ಷಿಯ ಫೋಟೊ ಕ್ಲಿಕ್ಕಿಸಲೇಬೇಕೆಂದುಕೊಂಡು ನಾನು ಅದಕ್ಕಾಗಿ ಸತತ ಮೂರು ವರ್ಷ ಶ್ರಮ ವಹಿಸಿದೆ.  ಬೆಂಗಳೂರಿನ ಹೊರಭಾಗದ ಸೂರಹಳ್ಳಿ ಕಿರುಅರಣ್ಯದಲ್ಲಿ ಇದರ ಆವಾಸ ಇದೆ ಎಂದು ಗೊತ್ತಾಗಿ ಮೂರು ವರ್ಷ ಅದರ ಸ್ವಭಾವದ ಅಧ್ಯಯನ ಮಾಡಿದೆ. ಅಲ್ಲಿಯೇ ಇರುವ ಒಂದು ಹಳ್ಳ ಇದರ ‘ಬಾತ್​ರೂಮ್. ಅಲ್ಲಿಗೆ ಬಂದು ಹಳೆಯ ಪುಕ್ಕಗಳನ್ನು ಉದುರಿಸಿ ಹೊಸ ಪುಕ್ಕಗಳನ್ನು ಪಡೆಯುತ್ತದೆ. ನಂತರದ್ದು ಹೆಣ್ಣು-ಗಂಡು ಪರಸ್ಪರ ಆಕರ್ಷಿಸುವ ಕೆಲಸ. ಅಲ್ಲಿಗೆ ಹೋಗಿ ಕುಳಿತು ನನ್ನ ಇರುವಿಕೆಯನ್ನು ಅದಕ್ಕೆ ಗೊತ್ತಾಗದ ರೀತಿಯಲ್ಲಿ ಕಾಪಾಡಿಕೊಂಡು ಅವು ಸ್ನಾನಕ್ಕೆ ಇಳಿದಾಗ ಫೋಟೊ ಕ್ಲಿಕ್ಕಿಸಿಕೊಂಡೆ. ಅಂತೂ ಅಷ್ಟು ವರ್ಷಗಳ ಶ್ರಮ ಸಾರ್ಥಕವಾಯಿತು. ‘ಶಿವ’ ಅಂತೂ ಸಿಕ್ಕೇಬಿಟ್ಟ! ಇದಾಗಿದ್ದು 2013ರಲ್ಲಿ. ಆದರೆ ದುರದೃಷ್ಟ ಎಂದರೆ ಅಲ್ಲಿ ಸಮೀಪವೇ ಅಪಾರ್ಟ್​ವೆುಂಟ್ ಬಂತು. ಕಟ್ಟಡ ಕಾರ್ವಿುಕರು ತಮ್ಮ ದಿನನಿತ್ಯದ ‘ಕಾರ್ಯಕ್ರಮ’ಗಳಿಗೆ ಇದೇ ಹಳ್ಳ ಅವಲಂಬಿಸಿ ಸಂಪೂರ್ಣ ಕಲುಷಿತ ಮಾಡಿದ್ದರಿಂದ ಅದೇ ಕೊನೆ. ಆ ಪಕ್ಷಿ ಇದುವರೆಗೂ ಅಲ್ಲಿ ಬರುತ್ತಿಲ್ಲ!

| ಸತೀಶ್ ಸಾರಕ್ಕಿ, ಬೆಂಗಳೂರು

ವಿಶ್ವಮಾನ್ಯತೆ ಕೊಟ್ಟ ‘ಸ್ನೇಕ್ ಈಗಲ್’

1960ರಿಂದ ನಾನು ಫೋಟೊಗ್ರಫಿ ಮಾಡುತ್ತಿದ್ದೇನೆ. ಬಹುತೇಕ ಎಲ್ಲ ಫೋಟೊಗಳನ್ನು ತೆಗೆಯುವಾಗಲೂ ವಿಭಿನ್ನ ಅನುಭವಗಳೇ ಆಗಿವೆ. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನನ್ನು ಗುರುತಿಸುವಂತೆ ಮಾಡಿದ್ದು 2002ರ ಆಸುಪಾಸು ತೆಗೆದ ‘ಷಾರ್ಟ್ ಟೋಡ್ ಸ್ನೇಕ್ ಈಗಲ್’ ಪಕ್ಷಿ. ಈ ಪಕ್ಷಿಯ ವಿಶೇಷ ಎಂದರೆ ಇದು ಸುಮಾರು 40-50 ಅಡಿ ಎತ್ತರದ ಮರದ ತುದಿಯಲ್ಲಿ ಗೂಡು ಕಟ್ಟುತ್ತದೆ. ಇದರ ಫೋಟೊ ತೆಗೆಯಬೇಕು ಎಂದರೆ ನಾವೂ ಅಷ್ಟೇ ಎತ್ತರ ಏರಬೇಕು. ಇದು ತುಂಬಾ ಸೂಕ್ಷ್ಮ ಪಕ್ಷಿ. ಮನುಷ್ಯನ ಇರುವಿಕೆಯನ್ನು ತನ್ನ ವಾಸನೆಯಿಂದಲೇ ಗುರುತಿಸಬಲ್ಲುದು. ಆದ್ದರಿಂದ ಅದಕ್ಕೆ ತಿಳಿಯದಂತೆಯೇ ಎದುರಿಗಿರುವ ಮರವೊಂದರ 50ಅಡಿ ಎತ್ತರ ಏರಿ ಮರೆಯಲ್ಲಿ ಕುಳಿತುಕೊಂಡೆ. ಇದಕ್ಕೆ ನನ್ನ ಸ್ನೇಹಿತರೂ ಆಗಿರುವ ಅರಣ್ಯ ಇಲಾಖೆ ಅಧಿಕಾರಿ ಸಹಕರಿಸಿದರು. 

ಈ ಪಕ್ಷಿಯ ಇನ್ನೊಂದು ವೈಶಿಷ್ಟ್ಯ ಎಂದರೆ ಇದು ತನ್ನ ಮರಿಗಳಿಗೆ ಹಾವನ್ನು ಬಿಟ್ಟು ಬೇರೇನೂ ಆಹಾರ ನೀಡುವುದಿಲ್ಲ. ಹಾವಿಗಾಗಿ 150-200 ಕಿ.ಮೀ ದೂರ ಬೇಕಾದರೂ ಹೋಗಿ ಬರುತ್ತವೆ. ಹಾವನ್ನು ಮರಿಗಳಿಗೆ ಉಣಬಡಿಸುವಾಗ ಫೋಟೊ ತೆಗೆಯಬೇಕು ಎಂದು ಸತತ ಐದು ದಿನಗಳು ಕಾದೆ. ಆದರೆ ನನ್ನ ಮನಸ್ಸಿಗೆ ತೃಪ್ತಿಯಾಗುವ ಕ್ಲಿಕ್ ನನಗೆ ಸಿಗಲೇ ಇಲ್ಲ. ನಂತರ ಐದನೇ ದಿನ ನಾಲ್ಕೈದು ತಾಸು ಕಾದು ಕುಳಿತ ನಂತರ ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು. ಅದು ಮರಿಗಳಿಗೆ ಗುಟುಕು ನೀಡುವ ದೃಶ್ಯವನ್ನು ಸೆರೆ ಹಿಡಿದೆ. 50-60 ಅಡಿ ಏರಿದ್ದು ಅಲ್ಲಿಗೆ ಸಾರ್ಥಕವೆನಿಸಿದರೂ ಇನ್ನೂ ಸಾರ್ಥಕತೆ ಕಂಡದ್ದು ಇದೇ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನನ್ನು ಗುರುತಿಸುವಂತೆ ಮಾಡಿದಾಗ… ಹೌದು. ಅಮೆರಿಕದಲ್ಲಿ 2016ರಲ್ಲಿ ನಡೆದ 80ರಾಷ್ಟ್ರಗಳನ್ನು ಪ್ರತಿನಿಧಿಸುವ ಛಾಯಾಚಿತ್ರ ಪ್ರದರ್ಶನದಲ್ಲಿ ನನ್ನ ಈ ಚಿತ್ರಕ್ಕೆ ‘ವರ್ಷದ ಅತ್ಯುತ್ತಮ ಚಿತ್ರ’ ಎಂದು ಪ್ರಶಸ್ತಿ ಬಂತು. ಅದೂ ಸೇರಿದಂತೆ ಹೋದ ಕಡೆಗಳಲ್ಲೆಲ್ಲಾ ಈ ಚಿತ್ರ ನನಗೆ ಪ್ರಶಸ್ತಿಯ ಸುರಿಮಳೆಯನ್ನೇ ನೀಡಿದೆ.

| ಎಸ್. ತಿಪ್ಪೇಸ್ವಾಮಿ ಮೈಸೂರು

‘ಕಿತಾಪತಿ’ ಹಕ್ಕಿ ಸೆರೆ ಸಿಕ್ಕೇ ಬಿಟ್ಟಿತು

ಕಾಗೆಯ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಡುವುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದಿದೆ ಪೈಡ್ ಕ್ರೆಸ್ಟೆಡ್ ಕುಕ್ಕೂ ಹಕ್ಕಿ. ಇದನ್ನು ಕನ್ನಡದಲ್ಲಿ ‘ಮಳೆಕೋಗಿಲೆ’ ಎಂದು ಕರೆಯುತ್ತಾರೆ. ಇದು ಮಳೆ ಬರುವ ಮುನ್ಸೂಚನೆ ನೀಡುತ್ತದೆ. ಅದಕ್ಕಾಗಿಯೇ ಈ ಹೆಸರು. ಈ ಪಕ್ಷಿಯ ಅಚ್ಚರಿಯ ವಿಷಯ ಏನು ಗೊತ್ತಾ? ಇದು ಕೂಡ ಕೋಗಿಲೆ ಹಾಗೆ ಗೂಡು ಕಟ್ಟುವುದಿಲ್ಲ. ಇದು ಮೊಟ್ಟೆ ಇಡುವುದು ‘ಎಲ್ಲೋ ಬಿಲ್ಡ್ ಬ್ಯಾಬ್ಲರ್’ (ಎಡಗಡೆ ಇರುವ ಪಕ್ಷಿ) ಎಂಬ ಪಕ್ಷಿಯ ಗೂಡಲ್ಲಿ. ಆದರೆ ಮೊಟ್ಟೆ ಇಡುವ ಮುನ್ನ ಇದು ಮಾಡುವ ಕಿತಾಪತಿ ಎಂದರೆ ಬ್ಯಾಬ್ಲರ್ ಹಕ್ಕಿ ಇಟ್ಟ ಮೊಟ್ಟೆಯನ್ನೆಲ್ಲಾ ನೆಲಕ್ಕೆ ಕೆಡವಿ ಅದು ಒಡೆದ ಮೇಲೆ ತನ್ನ ತತ್ತಿ ಇಡುತ್ತದೆ. ಪಾಪದ ಬ್ಯಾಬ್ಲರ್. ಈ ಕಿತಾಪತಿ ಅದಕ್ಕೆ ತಿಳಿಯುವುದೇ ಇಲ್ಲ. ಶಾಖ ಕೊಟ್ಟು ಮರಿ ಮಾಡುತ್ತದೆ. ಅಷ್ಟಕ್ಕೂ ಪೈಡ್ ಕ್ರೆಸ್ಟೆಡ್, ಬ್ಯಾಬ್ಲರ್ ಹಕ್ಕಿಯ ಗೂಡನ್ನೇ ಏಕೆ ಆಯ್ದುಕೊಳ್ಳುತ್ತದೆೆ ಎಂದರೆ, ಇದು ಒಂಥರಾ ಹೊಟ್ಟೆಬಾಕ. ಎಷ್ಟು ತಿಂದರೂ ಸಾಲುವುದಿಲ್ಲ. 

ಬ್ಯಾಬ್ಲರ್​ನ ವಿಶೇಷತೆ ಎಂದರೆ ಸದಾ ಏಳು ಹಕ್ಕಿಗಳು ಒಟ್ಟಿಗೇ ಇರುತ್ತವೆ. ಅವು ಮರಿಗಳಿಗೆ ತುತ್ತು ನೀಡುತ್ತವೆ. ಬೇರೆ ಹಕ್ಕಿಗಳಂತೆ ಅಪ್ಪ ಅಥವಾ ಅಮ್ಮ ಅಷ್ಟೇ ತುತ್ತು ನೀಡುವುದಿಲ್ಲ. ನಮ್ಮಲ್ಲಿ ಚಿಕ್ಕಮಕ್ಕಳಿದ್ದರೆ ಅಜ್ಜಿಯ ತುತ್ತು, ಅಜ್ಜನ ತುತ್ತು, ಅಮ್ಮನ ತುತ್ತು, ಅಪ್ಪನ ತುತ್ತು ಎಂದು ಉಣಿಸುತ್ತೇವಲ್ಲ… ಹಾಗೆನೇ ಇದು. ಈ ಹೊಟ್ಟೆಬಾಕ ಪೈಡ್ ಕ್ರೆಸ್ಟೆಡ್​ಗೆ ಎಲ್ಲಾ ತುತ್ತುಗಳೂ ಸಿಗುತ್ತವೆ. ಯಾವಾಗಲೂ ಬಾಯಿ ತೆಗೆದುಕೊಂಡೇ ಇರುವ ಕಾರಣ, ಹೊಟ್ಟೆ ತುಂಬಲಿಲ್ಲ ಎಂದು ಎಲ್ಲಾ ಹಕ್ಕಿಗಳೂ ತುತ್ತು ನೀಡುತ್ತವೆ. ಇಂಥದ್ದೊಂದು ಅಪರೂಪದ ಹಕ್ಕಿಗಳ ಜೀವನಕ್ರಮದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ನಾನು ಮರವೇರಿ ಕುಳಿತೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತ ನಂತರ ನನಗೆ ಬೇಕಿರುವ ಷಾಟ್ ಸಿಕ್ಕಿತು. ಈ ಅಮ್ಮ, ಆ ಮಗುವಿಗೆ ತುತ್ತು ನೀಡುವಾಗಿನ ದೃಶ್ಯ ನನ್ನ ಕ್ಯಾಮರಾದಲ್ಲಿ ಸೆರೆಯಾಯಿತು.

| ಪೊಂಪಯ್ಯ ಮಳೇಮಠ ಹಂಪಿ

ಬೋಟ್​ನಿಂದ ಸ್ನೇಕ್​ಬರ್ಡ್ ಕ್ಲಿಕ್

1984ರಲ್ಲಿ ವನ್ಯಜೀವಿ ಛಾಯಾಗ್ರಹಣ ಪ್ರಾರಂಭಿಸಿದ ಮೇಲೆ ರಂಗನತಿಟ್ಟುಪಕ್ಷಿಧಾಮಕ್ಕೆ ಸದಾ ಭೇಟಿ ಕೊಟ್ಟು ಪಕ್ಷಿಗಳ ಚಲನವಲನಗಳನ್ನು ಗಮನಿಸುತ್ತಿದ್ದೆ. ಅಲ್ಲಿಯ ‘ಸ್ನೇಕ್​ಬರ್ಡ್’ ನನ್ನ ಗಮನ ಸೆಳೆದಿತ್ತು. ಅದು ನದಿಗೆ ಇಳಿದಾಗ ಅದರ ಫೋಟೊ ತೆಗೆಯಬೇಕೆನ್ನುವುದು ನನ್ನ ಆಸೆಯಾಗಿತ್ತು. ಹಾಗೆ ತೆಗೆಯಬೇಕೆಂದರೆ ನದಿಗೆ ಬೋಟ್​ನಲ್ಲಿಯೇ ಹೋಗಬೇಕು. ಬೋಟ್ ಎಂದರೆ ಗೊತ್ತಿಲ್ಲ. ಅಲೆಗಳು ಇದ್ದಂತೆಯೇ ಬೋಟ್ ಅಲ್ಲಾಡುತ್ತಲೇ ಇರುತ್ತದೆ. ಆದ್ದರಿಂದ ಅದರ ಫೋಟೊ ತೆಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಬಳಿ ಇದ್ದುದು 300ಎಂಎಂ ಲೆನ್ಸ್ ಇರುವ ಕ್ಯಾಮರಾ. ಅದರಲ್ಲಿ ಸ್ಪಷ್ಟವಾಗಿ ತೆಗೆಯುವುದು ಕಷ್ಟವಾಗಿತ್ತು. ಆದರೂ ಅದರ ಫೋಟೊ ಸೆರೆ ಹಿಡಿಯಲೇಬೇಕು ಎನ್ನುವುದು ನನ್ನ ಉತ್ಕಟ ಇಚ್ಛೆ.

ಅದರಂತೆ 1986ರ ನವೆಂಬರ್ ತಿಂಗಳಿನಲ್ಲಿ ಬೆಳಗ್ಗೆ 8.30ಕ್ಕೆ ಬೋಟ್ ಏರಿದೆ. ನನ್ನ ಅದೃಷ್ಟ ಎಂಬಂತೆ ಸ್ನೇಕ್​ಬರ್ಡ್ ಬೆಳಗಿನ ಬಿಸಿಲಿನಲ್ಲಿ ಎರಡೂ ರೆಕ್ಕೆಗಳನ್ನು ಬಿಚ್ಚಿಕೊಂಡು ನದಿಯ ಮಧ್ಯದಲ್ಲಿದ್ದ ಬಂಡೆಯ ಮೇಲೆಕುಳಿತಿತ್ತು. ಅದನ್ನು ದೂರದಿಂದಲೇ ಗಮನಿಸಿದ ನಾನು ಬೋಟ್​ನಡೆಸುತ್ತಿದ್ದ ಗೋವಿಂದನಿಗೆ ನಿಧಾನವಾಗಿ ಹೋಗಲು ಹೇಳಿದೆ. ಹಕ್ಕಿಯನ್ನು ಕ್ಯಾಮರಾದಿಂದ ಫೋಕಸ್ ಮಾಡಿದೆ. ನದಿಯು ಹರಿಯುತ್ತಿದ್ದುದರಿಂದ ಬೋಟ್​ಸಹ ಅತ್ತಿಂದಿತ್ತ ವಾಲುತ್ತಿತ್ತು. ಕೂದಲೆಳೆಯಷ್ಟು ಫೋಕಸ್ ವ್ಯತ್ಯಾಸವಾದರೂ ಚಿತ್ರ ಚೆನ್ನಾಗಿ ಬರುವುದಿಲ್ಲ. ಆ ಕಾರಣ ಛಾಯಾಗ್ರಹಣ ಮಾಡುವ ಸಂದರ್ಭದಲ್ಲಿ ಶಟರ್​ಸ್ಟೀಡ್​ಜಾಸ್ತಿ ಇಟ್ಟುಕೊಂಡು ಅಪಾರ್ಚರ್ ಕಡಿಮೆಮಾಡಿ 3-4 ಚಿತ್ರಗಳನ್ನು ಮಾತ್ರ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಹಕ್ಕಿಹಾರಿತು. ಅಷ್ಟೆಲ್ಲಾ ಮಾಡುವವರೆಗೆ ಹಕ್ಕಿಹಾರಿಹೋಯಿತು. 

ಆಗಲೇ ಚಿತ್ರ ಹೇಗೆ ಬಂದಿದೆ ಎಂದು ನೋಡಲು ಈಗಿನಂತೆ ಅದು ಡಿಜಿಟಲ್ ಕ್ಯಾಮರಾ ಅಲ್ಲವಲ್ಲ! ಮರುದಿನ ಫಿಲಂ ಸಂಸ್ಕರಿಸಿ ಚಿತ್ರಗಳನ್ನು ಪ್ರಿಂಟ್​ವಾಡಿ ನೋಡಿದಾಗ ಅಚ್ಚರಿಯೋ ಅಚ್ಚರಿ. ನನ್ನ ಕಷ್ಟಕ್ಕೆ ಫಲ ಸಿಕ್ಕಿತ್ತು. ದೂರದಲ್ಲಿದ್ದ ಆ ಹಕ್ಕಿಯ ಕಣ್ಣುಗಳಿಗೆ ಬೆಳಕು ಚೆಲ್ಲಿ, ರೆಕ್ಕೆಗಳ ಒಂದೊಂದು ಭಾಗವೂ ತುಂಬಾ ಷಾರ್ಪ್ ಆಗಿತ್ತು. ಹಕ್ಕಿಯು ನೆರಳು ಬೆಳಕಿನ ಸಂಯೋಜನೆಯೊಂದಿಗೆ ಹಕ್ಕಿಯ ಹಿಂಬದಿಯ ನೀರು ಬ್ಲರ್​ಆಗಿ ಕಂಡು ಚಿತ್ರ ಸುಂದರವಾಗಿ ಕಾಣುತ್ತಿತ್ತು. ಈ ಚಿತ್ರವು ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರಶಸ್ತಿ ಪಡೆಯಿತು.

| ಎಸ್.ಎಂ.ಜಂಬುಕೇಶ್ವರ ಮೈಸೂರು

ತೊಯ್ದು ತೊಪ್ಪೆಯಾದರೂ ಬಿಡಲಿಲ್ಲ ಪಟ್ಟು…

1999ರ ಸಮಯ. ಚಿಕ್ಕಮಗಳೂರಿನಲ್ಲಿ ಭಾರಿ ಮಳೆ. ಸಂಪೂರ್ಣ ಊರೇ ಜಲಾವೃತವಾಗಿತ್ತು. ಮಳೆಯ ದೃಶ್ಯ ಸೆರೆ ಹಿಡಿಯಲು ನಸುಕಿನಲ್ಲಿಯೇ ಹೋದೆ. ಕೋಡಿ ಹರಿಯುವ ಮಾರ್ಗದಲ್ಲಿ ಚಾನಲ್ ಬದಿ ಸಡಿಲಗೊಂಡು ಮಣ್ಣು ಕುಸಿಯುತ್ತಿತ್ತು. 2-3 ಅಡಿ ಸಾಲು ಮನೆಗಳಿದ್ದವು. ನನ್ನ ದೃಷ್ಟಿ ಆ ಮನೆಗಳತ್ತ ಬಿತ್ತು. ಸಮೀಪದ ಮರದ ಕೆಳಗೆ ನಿಂತೆ. ಕಷ್ಟವಾದರೂ ಸರಿ. ಒಳ್ಳೊಳ್ಳೆ ಫೋಟೊಗಳು ತೆಗೆಯಬಹುದು ಎಂಬ ಹಂಬಲ ನನ್ನದು.

ಮಳೆ ಹೆಚ್ಚಿದಂತೆ ಮನೆಯವರು ವಸ್ತುಗಳನ್ನು ಖಾಲಿ ಮಾಡತೊಡಗಿದರು. ಆದರೆ ನಾನು ಮಾತ್ರ ಧೈರ್ಯ ಮಾಡಿ ಅಲ್ಲಿಯೇ ನಿಂತೆ. ಅಲ್ಲಿರುವ ಒಂದು ಮನೆಯ ಗೋಡೆ ಬಿರುಕು ಬಿಡತೊಡಗಿತು. ಮನೆ ಇನ್ನೇನು ಬೀಳುತ್ತದೆ ಎಂದು ತಿಳಿಯಿತು. 35 ಚಿತ್ರಕ್ಕೆ ಸೀಮಿತವಾಗಿದ್ದ ನನ್ನ ಆಗಿನ ರೋಲ್ ಕ್ಯಾಮರಾವನ್ನು ಆ ಮನೆಗೆ ಫೋಕಸ್ ಮಾಡಿ ನಿಂತೆ. ಕ್ಷಣ ಮಾತ್ರದಲ್ಲಿ ನೀರಿನ ಸೆಳೆತಕ್ಕೆ ಮನೆ ನಲುಗಿ ಗೋಡೆ ಚೂರು ಚೂರಾಗಿ ಕುಸಿದು ಕಾಲುವೆಗೆ ಬಿದ್ದು ನೀರು ಮುಗಿಲೆತ್ತರಕ್ಕೆ ಚಿಮ್ಮಿತು. 

ಅಬ್ಬಬ್ಬಾ ಅದೊಂದು ರುದ್ರ ರಮಣೀಯ ದೃಶ್ಯ. ಒಂದು ಚಿತ್ರ ತೆಗೆದ ಮೇಲೆ ರೋಲ್ ಮೂವ್ ಮಾಡಿ ಇನ್ನೊಂದು ಚಿತ್ರ ತೆಗೆಯಬೇಕಿದ್ದ ಕಷ್ಟದ ದಿನಗಳು ಅವು. ಗೋಡೆ ಕುಸಿಯುತ್ತಿರುವುದರಿಂದ ಹಿಡಿದು ಗೋಡೆ ಛಿದ್ರವಾಗಿ ಕಾಲುವೆಯಲ್ಲಿ ಬಿದ್ದು ನೀರು ಚಿಮ್ಮುವ ತನಕ ನಾಲ್ಕಾರು ಚಿತ್ರಗಳನ್ನು ಶರವೇಗದಲ್ಲಿ ಸೆರೆ ಹಿಡಿದೆ. ರೋಲ್ ಡೆವಲಪ್ ಮಾಡಿಸಿ ನೆಗೆಟೀವ್ ನೋಡಿ ಪ್ರಿಂಟ್ ಹಾಕಿಸಿದಾಗ ತೋಯ್ದು ತೊಪ್ಪೆಯಾಗಿದ್ದರೂ ಫೋಟೊ ತೆಗೆದ ಶ್ರಮ ಸಾರ್ಥಕ ಎನಿಸಿತು. ಹಲವಾರು ರೀತಿಯಲ್ಲಿ ಸರ್ಕಸ್ ಮಾಡಿ ವನ್ಯಜೀವಿಗಳ ಚಿತ್ರಗಳನ್ನು ತೆಗೆಯುವ ನನಗೆ ಈ ಚಿತ್ರ ವಿಭಿನ್ನ ಅನುಭವ ನೀಡಿತು.

| ಎ.ಎನ್.ಪ್ರಸನ್ನ ಚಿಕ್ಕಮಗಳೂರು

ದಟ್ಟ ಕಾನನದಲ್ಲಿ ಪುಟ್ಟ ಹಕ್ಕಿಯ ಹುಡುಕಾಟ

ಥೇಟ್ ಮರದ ರೆಂಬೆಯ ಹಾಗೆ ಕಾಣಿಸುವ ಹಕ್ಕಿ ಶ್ರೀಲಂಕನ್ ಫ್ರಾಗ್​ವೌತ್. ಕೇರಳದ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸೋ ಈ ಹಕ್ಕಿ ಕರ್ನಾಟಕದಲ್ಲಿ ಕಾಣಸಿಗುವುದಿಲ್ಲ ಎಂದು ಹಲವರು ಅಂದಿದ್ದರು. 

ಆದರೆ ಸಾಕಷ್ಟು ಅಧ್ಯಯನ ಮಾಡಿದ ನನಗೆ ನನ್ನೂರು ಕಾರ್ಕಳದ ಸಮೀಪದ ಕಾಡಿನಲ್ಲಿ ಇದು ನೆಲೆಸಿರುವುದು ತಿಳಿಯಿತು. ಆದರೆ ಈ ಹಕ್ಕಿಯ ಫೋಟೊ ತೆಗೆಯಬೇಕು ಎಂದರೆ ರಾತ್ರಿ ಮಾತ್ರ ಸಾಧ್ಯ.

ಏಕೆಂದರೆ ಇದು ತನ್ನ ಕಾರ್ಯ ಆರಂಭಿಸುವುದೇ ರಾತ್ರಿ 7 ಗಂಟೆಯ ಮೇಲೆ. ಅದು ಕೂಗುವ ಮೂಲಕ ತನ್ನ ಬಳಗದವರನ್ನು ಎಚ್ಚರಿಸುತ್ತದೆ. ಇದರ ಇರುವಿಕೆಯನ್ನು ತಿಳಿದುಕೊಳ್ಳಲು ಮೊದಲು ಅದರ ಕೂಗಿನ ಬಗ್ಗೆ ನಾನು ಅಧ್ಯಯನ ಮಾಡಬೇಕಾಯಿತು. ಸತತ 2-3 ತಿಂಗಳು ಕಾಡಿನ ಓಡಾಟ ನಡೆಸಿ ಕೂಗಿನ ಬಗ್ಗೆ ತಿಳಿದುಕೊಂಡೆ. ಆ ದಟ್ಟ ಕಾನನದಲ್ಲಿ ರಾತ್ರಿಯ ವೇಳೆ ಟಾರ್ಚ್ ಲೈಟ್ ಬಿಟ್ಟು ಹಾರಾಡುವ ಹಕ್ಕಿಯನ್ನು ಹುಡುಕಿ ಫೋಟೋ ತೆಗೆಯುವುದು ಎಷ್ಟು ಕಷ್ಟ ಎಂದು ಬೇರೆ ಹೇಳಬೇಕಾಗಿಲ್ಲವಲ್ಲ. ಆದರೆ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ನಾನು ಕೊನೆಗೂ ಅದರ ಫೋಟೊ ತೆಗೆಯುವಲ್ಲಿ ಯಶಸ್ವಿಯಾದೆ. ಇದೊಂದು ಅದ್ಭುತ ಅನುಭವ.

| ಶಿವಶಂಕರ ಕಾರ್ಕಳ ಕಾರ್ಕಳ

ರೋಚಕ ಅನುಭವ ನೀಡಿದ ಬೋಟ್ ಫೋಟೊ

ನಾನು 25 ವರ್ಷಗಳಿಂದ ಫೋಟೊಗ್ರಫಿ ಮಾಡುತ್ತಿದ್ದೇನೆ. ಇದರಲ್ಲಿ ಅತ್ಯಂತ ಕಷ್ಟ ಹಾಗೂ ಅಷ್ಟೇ ರೋಚಕ ಎನಿಸಿದ್ದು ಗ್ಯಾಲಪೆಗೋಸ್ ದ್ವೀಪಕ್ಕೆ ಹೋಗಿ ತೆಗೆದ ಫೋಟೋ. ಈ ದ್ವೀಪ ಬೆಂಗಳೂರಿನಿಂದ ಸುಮಾರು 20ಸಾವಿರ ಕಿ.ಮೀ ದೂರ ಇದೆ. ಫೋಟೊಗ್ರಫಿ ಮಾಡಲೆಂದೇ ನಾನು ಹೋಗಿದ್ದೆ. ಚಿಕ್ಕ ಬೋಟ್​ನಲ್ಲಿ ಫೋಟೊಗ್ರಫಿ ಮಾಡುವ ಭಾಗ್ಯ ನನ್ನದಾಗಿತ್ತು. ಭಾಗ್ಯ ಎನ್ನುವುದಕ್ಕಿಂತ ಹರಸಾಹಸ ಎಂದೇ ಹೇಳಬೇಕು. ಸುಮಾರು ಎರಡೇ ಇಂಚು ಇರುವ ವೈಟ್ ರಂಪ್ಡ ಸ್ಟಾಮ್ರ್ ಪೆಟ್ರೇಲ್ ಹಕ್ಕಿಯ ಚಿತ್ರ ತೆಗೆದ ಅನುಭವ ಬಹು ರೋಚಕ. 

ಅಲೆಗಳ ಮಧ್ಯೆ ಬೋಟಿನ ಏರಿಳಿತದ ನಡುವೆ ಒಂದು ಸೆಕೆಂಡ್ ಕೂಡ ಒಂದೆಡೆ ನಿಲ್ಲದ ಈ ಹಕ್ಕಿಯ ಫೋಟೊ ತೆಗೆಯುವುದು ಬಹುದೊಡ್ಡ ಚಾಲೆಂಜ್ ಆಗಿತ್ತು. ಲೈಟಿಂಗ್ ಎಫೆಕ್ಟ್ ಜೊತೆ ಚಿಕ್ಕ ಬೋಟಿನ ಮೇಲೆ ನಮ್ಮ ಜೀವವನ್ನೂ ಕಾಪಾಡಿಕೊಂಡು, ಷಾರ್ಪ್ ಫೋಟೊ ತೆಗೆಯುವುದು ಸುಲಭ ಇರಲಿಲ್ಲ. ಆದರೂ ಪಟ್ಟು ಬಿಡದ ನಾನು ಕೊನೆಗೂ ಈ ಪಕ್ಷಿಯ ಫೋಟೊ ತೆಗೆಯಲು ಯಶಸ್ವಿಯಾದೆ.

| ಎಂ.ಎನ್.ಜಯಕುಮಾರ್ ಬೆಂಗಳೂರು

ಹದ್ದುಗಳ ಆಟ-ಪಾಠ ಸೆರೆ ಸಿಕ್ಕ ಕ್ಷಣ…

ನನ್ನ 12 ವರ್ಷಗಳ ಫೋಟೊಗ್ರಫಿ ಅನುಭವದಲ್ಲಿ ಹದ್ದುಗಳ ಎಲ್ಲಾ ತಳಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ, ಜೊತೆಗೆ ಹಲವಾರು ಕ್ಲಿಷ್ಟಕರ ಎನಿಸುವ ಫೋಟೊಗಳನ್ನೂ ತೆಗೆದಿದ್ದೇನೆ. ಈ ತಳಿಗಳಲ್ಲಿ ಅತ್ಯಂತ ಕುತೂಹಲ ಎನಿಸಿದ್ದ ಟಾನಿ ಈಗಲ್​ಗಳು. ಏಕೆಂದರೆ ಇವುಗಳ ಜೀವನ ಕ್ರಮಕ್ಕೂ, ಮನುಷ್ಯರ ಜೀವನಕ್ರಮಕ್ಕೂ ತೀರಾ ಹತ್ತಿರ ಸಂಬಂಧ. ಮಕ್ಕಳಂತೆಯೇ ಟಾನಿ ಈಗಲ್​ಗಳ ಮರಿಗಳು ಕೂಡ ಆಟಿಕೆಗಳಿಂದ ಆಟವಾಡುತ್ತವೆ. ಬಾಟಲ್, ಚಪ್ಪಲಿಗಳು, ತೆಂಗಿನ ನಾರು… ಹೀಗೆ ಎಲ್ಲವನ್ನೂ ಇಟ್ಟುಕೊಂಡು ಆಡುತ್ತವೆ. ಇವರ ಜೀವನಕ್ರಮದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ನನಗೆ ಅವುಗಳ ಫೋಟೊ ಸೆರೆಹಿಡಿಯುವ ಹಂಬಲವಾಗಿತ್ತು. 

ನಾನು ಉದ್ಯೋಗದಲ್ಲಿ ಇರುವ ಕಾರಣ, ದಿನಪೂರ್ತಿ ಅವುಗಳಿಗಾಗಿ ಕಾದುಕುಳಿತುಕೊಳ್ಳಲು ಸಮಯ ಇರಲಿಲ್ಲ. ಆದರೂ ಕಚೇರಿ ಕೆಲಸ ಮುಗಿಸಿಕೊಂಡು ಹೋಗಿ ಇವುಗಳ ಆಟಕ್ಕಾಗಿ ಕಾದುಕುಳಿತೆ. ನನಗೆ ಬೇಕಿರುವ ಚಿತ್ರಕ್ಕಾಗಿ ಹಲವು ದಿನಗಳು ಅಲೆದಾಟ ನಡೆಸಿದ ನಂತರ ಒಂದು ದಿನ ಅವುಗಳ ಆಟವನ್ನು ಕ್ಲಿಕ್ಕಿಸುವ ಭಾಗ್ಯ ನನಗೆ ಸಿಕ್ಕಿತು. ಒಂದು ಹಕ್ಕಿ ಆಟಿಕೆ ಬಿಟ್ಟಾಗ, ಅದನ್ನು ಇನ್ನೊಂದು ಹಕ್ಕಿ ಹಾರಿ ಹಿಡಿಯುವ ಅದ್ಭುತ ಚಿತ್ರಣ ನನಗೆ ಸಿಕ್ಕಿತು. ಈ ಚಿತ್ರವು ರಾಷ್ಟ್ರಮಟ್ಟದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನೂ ನನಗೆ ತಂದುಕೊಟ್ಟಿತು.

 

| ಕಿರಣ್ ಪೂಣಚ್ಚ ಬೆಂಗಳೂರು

Leave a Reply

Your email address will not be published. Required fields are marked *

Back To Top