ಬೆಂಗಳೂರು: ರಾಜ್ಯದ ಎಲ್ಲ ಪಶುವೈದ್ಯರಿಗೆ(ಪಶುವೈದ್ಯ ಇಲಾಖೆ, ಕೆಎಂಎ್ ವಿಶ್ವವಿದ್ಯಾಲಯ ಮತ್ತು ಖಾಸಗಿ) ಸೆ.20ರಂದು ಒಂದು ದಿನದ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಪಶುವೈದ್ಯಕೀಯ ಸಂಘ, ಬೆಂಗಳೂರು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಜಿಕೆವಿಕೆಯ ಬಾಬು ರಾಜೇಂದ್ರ ಪ್ರಸಾದ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪಶುವೈದ್ಯ ಇಲಾಖೆ ಸಚಿವ ಕೆ.ವೆಂಕಟೇಶ್ ಉದ್ಘಾಟನೆ ಮಾಡಲಿದ್ದಾರೆ. ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಕುಲಪತಿಗಳು ಹಾಗೂ ಕರ್ನಾಟಕದಿಂದ ಭಾರತೀಯ ಪಶುವೈದ್ಯಕೀಯ ಪರಿಷತ್‌ಗೆ ಆಯ್ಕೆಯಾದ ಡಾ.ಸುಶಾಂತ ರೈ ಅವರುಗಳು ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪ್ರಾಣಿಗಳ ಆರೋಗ್ಯ ರಕ್ಷಣೆಯಲ್ಲಿನ ಸವಾಲುಗಳು; ಪ್ರಸ್ತುತ ಸಮಸ್ಯೆಗಳು ಕುರಿತು ಪಶುವೈದ್ಯ ಕಾಲೇಜಿನ ನಿವೃತ್ತ ಡೀನ್ ಡಾ.ಎಸ್.ಯತಿರಾಜ್ ಹಾಗೂ ಜಾನುವಾರುಗಳ್ಲಿ ಒಟಿಟಿಸ್ ಮತ್ತು ಕ್ಷೇತ್ರ ತನಿಖೆ ಕುರಿತು ಬೆಂಗಳೂರು ಪಶುವೈದ್ಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಪ್ರೊ.ಎಂ.ವೀರೇಗೌಡ ವಿಷಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ಸುಮಾರು 2000-2500 ಪಶುವೈದ್ಯರು ಬಾಗವಹಿಸುವ ಸಾಧ್ಯತೆಯಿದೆ.
21 ನೇ ಜಾನುವಾರು ಗಣತಿ ಕೂಡ ಈ ತಿಂಗಳಲ್ಲಿ ಪ್ರಾರಂಭವಾಗುವುದರಿಂದ ಇಲಾಖೆಯ ಹಿರಿಯ ಅಧಿಕಾರಿಗಳು ಪಶುವೈದ್ಯರಿಗೆ ಈ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ ಎಂದು ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ ತಿಳಿಸಿದ್ದಾರೆ.