ಬೆಂಗಳೂರು: ಒಂದೇ ಸಿನಿಮಾದಲ್ಲಿ ಒಬ್ಬ ಪಾತ್ರಧಾರಿ ಎರಡೆರಡು ಲುಕ್ನಲ್ಲಿ, ಅಂದರೆ ಒಮ್ಮೆ ಸಣ್ಣಗೆ ಇನ್ನೊಮ್ಮೆ ಡುಮ್ಮಗೆ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಅದಕ್ಕೆ ಕೆಲವಷ್ಟು ಉದಾಹರಣೆಗಳಿವೆ. ಆದರೆ ಒಬ್ಬನೇ ಕಲಾವಿದ ಒಂದೇ ಚಿತ್ರದಲ್ಲಿ ಮೂರು ಸಲ ಬಾಡಿ
ಟ್ರಾನ್ಸ್ಫಾಮೇಷನ್ಗೆ ಒಳಗಾಗುವುದು ವಿಶೇಷವೇ ಸರಿ. ಅಂದರೆ ಒಂದೇ ಪಾತ್ರಕ್ಕಾಗಿ ಇಲ್ಲೊಬ್ಬರು ಮೂರು ಸಲ ದೇಹ ತೂಕ ಏರಿಳಿಕೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಇಷ್ಟೆಲ್ಲ ಏಕೆ ಎಂದು ಕೇಳಿದರೆ ಅವರು ನೀಡುವ ಉತ್ತರ ‘ಜಿಲ್ಕ’. ಹೌದು.. ‘ಜಿಲ್ಕ’ ಸಿನಿಮಾಗಾಗಿ ಅದರ ಹೀರೋ-ಕಂ-ನಿರ್ದೇಶಕ ಕವೀಶ್ ಶೆಟ್ಟಿ ಇಂಥದ್ದೊಂದು ಅಪರೂಪದ ಪ್ರಯತ್ನಕ್ಕೆ ಮುಂದಾಗಿ ಸೈ ಎನಿಸಿಕೊಂಡಿದ್ದಾರೆ.
‘ಈ ಸಿನಿಮಾದಲ್ಲಿ ಕಥೆ ಮೂರು ಕಾಲಘಟ್ಟದಲ್ಲಿ ಸಾಗುತ್ತದೆ. ಹೀಗಾಗಿ ಹೀರೋ ಕೂಡ ಮೂರು ಲುಕ್ನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದ್ದರಿಂದ 3 ಬಾರಿ ಬಾಡಿ ಟ್ರಾನ್ಸ್ಫಾಮೇಷನ್ಗೆ ಒಳಗಾಗಬೇಕಾಯಿತು’ ಎನ್ನುತ್ತ ಕವೀಶ್ ಶೆಟ್ಟಿ ಮತ್ತಷ್ಟು ವಿವರಣೆ ನೀಡಿದರು. ಸಿನಿಮಾ ಆರಂಭದಲ್ಲಿ ನನ್ನ ದೇಹತೂಕ 76 ಕೆ.ಜಿ. ಇತ್ತು. ಆದರೆ ಹೀರೋ ಶಾಲಾದಿನಗಳಲ್ಲಿನ ದೃಶ್ಯಗಳ ಚಿತ್ರಣಕ್ಕಾಗಿ 51 ಕೆ.ಜಿ.ಗೆ ತೂಕ ಇಳಿಸಬೇಕಾಯಿತು. ಬಳಿಕ ಕಾಲೇಜು ದಿನಗಳಲ್ಲಿನ ದೃಶ್ಯಗಳ ಶೂಟಿಂಗ್ಗಾಗಿ 68 ಕೆ.ಜಿ.ಗೆ ತೂಕ ಹೆಚ್ಚಿಸಿಕೊಳ್ಳ ಬೇಕಾಯಿತು. ನಂತರ ವೃತ್ತಿಜೀವನದಲ್ಲಿನ ದೃಶ್ಯಗಳ ಚಿತ್ರೀಕರಣಕ್ಕಾಗಿ 78 ಕೆ.ಜಿ. ತೂಕ ಹೊಂದಬೇಕಾಯಿತು’ ಎಂದರು ಹೀರೋ-ಕಂ-ನಿರ್ದೇಶಕ. ‘ಜಿಲ್ಕ ಎಂದರೆ ಸೊಮಾಲಿಯಾದ ಭಾಷೆಯಲ್ಲಿ ಜನರೇಷನ್ ಎಂದು ಅರ್ಥ. ಆ ಪದದ ಸೌಂಡಿಂಗ್ ಚೆನ್ನಾಗಿದೆ ಅನಿಸಿದ್ದಕ್ಕೆ ಅದನ್ನೇ ಟೈಟಲ್ ಆಗಿಸಿದೆವು. ಎಲ್ಲರೂ ಜನರೇಷನ್ ಬಗ್ಗೆ ದೂರುತ್ತಾರೆ. ಆದರೆ ಈ ಜನರೇಷನ್ನ ತಾಕಲಾಟಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಚಿತ್ರಕ್ಕೆ ನಿರ್ದೇಶಕರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಿಯಾ ಹೆಗ್ಡೆ, ಲಕ್ಷ ಶೆಟ್ಟಿ ಹಾಗೂ ಗೋಪಿಕಾ ದಿನೇಶ್ ಅಭಿನಯಿಸಿರುವುದರಿಂದ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಉದಯ್ ಶೆಟ್ಟಿ, ಕಿಶೋರ್ ಖುಛ್ ಚಂದಾನಿ, ತೇಹಾ ಸಿಂಗ್ ಸೈನಿ, ಮನೀಶ್ ನಾಗ್ದೇವ್ ಒಟ್ಟಾಗಿ ಬಂಡವಾಳ ಹೂಡಿದ್ದಾರೆ. ವಿಶ್ವಜಿತ್ ರಾವ್ ಮತ್ತು ಅಜೇಯ್ ಪಾಲ್ಸಿಂಗ್ ಅವರ ಛಾಯಾಗ್ರಹಣ, ಪ್ರಾಂಶು ಜಾ ಅವರ ಸಂಗೀತ ಹಾಗೂ ಗಿರಿ ಮಹೇಶ್ ಅವರ ಸಂಕಲನ ಈ ಚಿತ್ರಕ್ಕಿದೆ. ‘ಕವೀಶ್ ಶೆಟ್ಟಿ ಪ್ರೊಡಕ್ಷನ್ಸ್’ನಲ್ಲಿ ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ವಣವಾಗಿರುವ ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಕನ್ನಡದಲ್ಲಿ ‘ಜಿಲ್ಕ’ ಫೆ.7ರಂದು ಬಿಡುಗಡೆ ಮಾಡಲಾಗುವುದು ಎಂದಿದೆ ಚಿತ್ರತಂಡ.