ದೇವಸ್ಥಾನಗಳಿಗೆ ಹೋದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುವುದಿಲ್ಲ ಎಂದು ಯಾರು, ಯಾರಿಗೆ ಹೇಳಿದರು?

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಜನರು ಈಗಾಗಲೆ ತಮ್ಮ ಅಭಿಪ್ರಾಯಗಳನ್ನು ಮತಯಂತ್ರದಲ್ಲಿ ದಾಖಲಿಸಿದ್ದಾರೆ. ಆ ದೇವರು, ಈ ದೇವರು ಎಂದು ಹೇಳಿಕೊಂಡು ದೇವಸ್ಥಾನಗಳಿಗೆ ಸುತ್ತಿದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುವುದಿಲ್ಲ ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಟಾಂಗ್​ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಗದೀಶ್​ ಶೆಟ್ಟರ್​, ಈಗಾಗಲೆ ಮಂಡ್ಯ ಜನತೆ ತೀರ್ಪು ನೀಡಿಯಾಗಿದೆ. ಗುಡಿ-ಗುಂಡಾರಗಳನ್ನು ಸುತ್ತಿದರೆ ತೀರ್ಪು ಬದಲಾಗುವುದಿಲ್ಲ. ಕುಮಾರಸ್ವಾಮಿ ಅವರಿಗೆ ಯಾರು ಸಲಹೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ದೇವಸ್ಥಾನಗಳನ್ನು ಸುತ್ತಿದರೆ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳು ಬದಲಾಗುತ್ತವೆ ಎಂದು ಅವರು ಭಾವಿಸಿದಂತಿದೆ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಜನಕಲ್ಯಾಣಕ್ಕಾಗಿ ದೇವಸ್ಥಾನಗಳಿಗೆ ಸುತ್ತುತ್ತಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅವರು ತಮ್ಮ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರ ಏಳಿಗಾಗಿ ದೇವಸ್ಥಾನಗಳಿಗೆ ಸುತ್ತುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಸೋಲುವ ಭೀತಿಯಿಂದ ಅವರು ಹೀಗೆ ಮಾಡುತ್ತಿದ್ದಾರೆ ಎಂದರು.

ಲೋಕಸಭೆ ಚುನಾವಣೆ ವೇಳೆ ವಿನಯ್​ ಕುಲಕರ್ಣಿ ತಮಗೆ ಮತಹಾಕುವಂತೆ ಲಿಂಗಾಯತರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಕುಂದಗೋಳ ಉಪಚುನಾವಣೆಯಲ್ಲಿ ಯಾರಿಗೆ ಮತ ಹಾಕುವಂತೆ ಲಿಂಗಾಯತರಿಗೆ ಸೂಚಿಸುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.