More

    ಒಂದು ಮರಕ್ಕೆ ಪರ್ಯಾಯವಾಗಿ 60 ಸಸಿ, ಪರಿಸರ ಕಾಳಜಿ ಮೆರೆದ ವಿಜಯವಾಣಿ,ಹೊಸಕೋಟೆ ನಾಗರಿಕರ ಸಹಭಾಗಿತ್ವ

    ಹೊಸಕೋಟೆ: ಸ್ವಚ್ಛಭಾರತ ಅಭಿಯಾನ, ಮಹಿಳಾ ವಾಕಥಾನ್, ಕಾರ್ಗಿಲ್ ವಿಜಯೋತ್ಸವದಂಥ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ‘ವಿಜಯವಾಣಿ’ ಪರಿಸರ ಕಾಳಜಿಯಲ್ಲಿಯೂ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಹೊಸಕೋಟೆಯ ಬಸವೇಶ್ವರನಗರ ಮತ್ತು ಕಮ್ಮವಾರಿ ನಗರದ ಮಧ್ಯಭಾಗದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಸಂಪೂರ್ಣ ಶಿಥಿಲಗೊಂಡು ನೆಲಕಚ್ಚುವ ಹಂತದಲ್ಲಿದ್ದ ನೂರಾರು ವರ್ಷದ ಹಳೆಯ ಮರ ತೆರವುಗೊಳಿಸಿದ ಜಾಗದಲ್ಲಿ 60 ಸಸಿಗಳನ್ನು ನೆಟ್ಟು ಪೋಷಣೆಗೆ ಮುಂದಾಗಿದೆ.

    ಅಭಿವೃದ್ಧಿ ಕಾಮಗಾರಿ, ನೆಲಕಚ್ಚುವ ಹಂತದಲ್ಲಿರುವ ಮರಗಳು ಅಥವಾ ಮತ್ಯಾವುದೋ ಅನಿವಾರ್ಯ ಕಾರಣಗಳಿಂದ ಕಡಿಯಲೇಬೇಕಾದ ಸಂದರ್ಭ ಬಂದರೆ ಒಂದು ಮರಕ್ಕೆ ಪರ‌್ಯಾಯವಾಗಿ 50ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂಬ ಆಶಯಕ್ಕೆ ಪೂರಕವಾಗಿ ಹೊಸಕೋಟೆಯಲ್ಲಿ 60 ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆಯಲಾಗಿದೆ.

    ರಾಜ್ಯ ಹೆದ್ದಾರಿಯಲ್ಲಿ ಶಿಥಿಲಗೊಂಡು ನೆಲಕಚ್ಚುವ ಹಂತದಲ್ಲಿದ್ದ ಮರ ತೆರವುಗೊಳಿಸಬೇಕೆಂಬ ಸಾರ್ವಜನಿಕರ ಒತ್ತಾಯದಿಂದ ಅರಣ್ಯಾಧಿಕಾರಿಗಳು ಹಾಗೂ ನಗರಸಭೆ ವತಿಯಿಂದ ಜನವರಿ ಮೊದಲ ವಾರದಲ್ಲಿ ಮರ ತೆರವುಗೊಳಿಸಲಾಗಿತ್ತು. ಮರ ತೆರವುಗೊಂಡ ಜಾಗದ ಆಸುಪಾಸಿನಲ್ಲಿ ಇದೀಗ 60 ಸಸಿಗಳು ಚಿಗುರೊಡೆಯುತ್ತಿವೆ.

    ಅಧಿಕಾರಿಗಳ ಸಹಕಾರ: ವಿಜಯವಾಣಿ ಕಳಕಳಿ ಮೆಚ್ಚಿದ ವಲಯ ಅರಣ್ಯಾಧಿಕಾರಿ ವರುಣ್ ಕುಮಾರ್ ಹಾಗೂ ನಗರಸಭೆ ಆಯುಕ್ತ ನಿಸಾರ್ ಅಹಮದ್ 60 ಸಸಿಗಳನ್ನು ನೀಡಿದ್ದಾರೆ. ಇದಕ್ಕಾಗಿಯೇ ಕಾರ್ಯಕ್ರಮ ರೂಪಿಸಿ ಸ್ಥಳೀಯರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಸಸಿ ನೆಡಲಾಗಿದೆ.

    ಟ್ಯಾಂಕರ್ ಮಾಲೀಕರ ಹೊಣೆ: ಸಸಿಗಳನ್ನು ನೆಟ್ಟರಷ್ಟೆ ಸಾಲದು, ಅವುಗಳ ಪೋಷಣೆ ಜವಾಬ್ದಾರಿಯೂ ಮುಖ್ಯ ಎಂಬ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್‌ನವರಿಗೆ ಮೂರು ದಿನಗಳಿಗೊಮ್ಮೆ ಸಸಿಗಳಿಗೆ ನೀರುಣಿಸುವ ಜವಾಬ್ದಾರಿ ವಹಿಸಲಾಗಿದೆ. ಇದಕ್ಕೆ ಟ್ಯಾಂಕರ್‌ನವರು ಸಮ್ಮತಿಸಿದ್ದು, ಪ್ರತಿ ನಿತ್ಯ ಪಾಳಿಯಲ್ಲಿ ಸಸಿಗಳಿಗೆ ನೀರುಣಿಸುವ ಕಾಯಕ ಮುಂದುವರಿಸಿದ್ದಾರೆ.

    ಕೈಜೋಡಿಸಿದ ಸ್ಥಳೀಯರು: ವಿಜಯವಾಣಿ ಪ್ರತಿನಿಧಿ ಮಂಜುನಾಥ ಅವರೊಂದಿಗೆ ಸ್ಥಳೀಯ ಮುಖಂಡರಾದ ಹರೀಶ್ ನಾಯ್ಡು, ವಿಕ್ರಂ, ಶ್ರೀನಿವಾಸ್ ನಾಯ್ಡು, ಶಿವಕುಮಾರ್, ಗಿರೀಶ್ ಗೌಡ, ನಿತಿನ್, ಚರಣ್, ವೆಂಕಟೇಶ್ ಹಾಗೂ ಬಸವೇಶ್ವರನಗರ ಮತ್ತು ಕಮ್ಮವಾರಿ ನಗರದ ನಿವಾಸಿಗಳು ಸಸಿ ನೆಡುವ ಕಾಯಕಕ್ಕೆ ಕೈಜೋಡಿಸಿದ್ದಾರೆ.

    ಇದೊಂದು ಉತ್ತಮ ಕಾರ್ಯ. ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಮೂಡಬೇಕು. ನಗರದಲ್ಲಿ ಎಲ್ಲಿಯಾದರೂ ಸಸಿ ನೆಡಲು ಮುಂದೆ ಬಂದರೆ ಇಲಾಖೆಯಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು.
    ವರುಣ್ ಕುಮಾರ್, ವಲಯ ಅರಣ್ಯಾಧಿಕಾರಿ

    ಈ ಭಾಗದಲ್ಲಿ ನೆಟ್ಟ ಸಸಿಗಳಿಗೆ ನೀರುಣಿಸುವ ಜವಾಬ್ದಾರಿ ನೀಡಿರುವುದು ನಿಜಕ್ಕೂ ಸಂತಸವೆನಿಸುತ್ತದೆ. ಪರಿಸರ ಉಳಿಸಿ ಬೆಳೆಸುವಲ್ಲಿ ನಮ್ಮದೊಂದು ಪುಟ್ಟ ಕಾಣಿಕೆಯಷ್ಟೆ. ಸಸಿಗಳನ್ನು ಮನೆ ಮಕ್ಕಳಂತೆ ಪೋಷಣೆ ಮಾಡಲು ಬದ್ದನಾಗಿದ್ದೇನೆ.
    ಹರೀಶ್ ನಾಯ್ಡು, ಟ್ಯಾಂಕರ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts