ಉಗ್ರರ ವಿರುದ್ಧ ಕಾಳಗದಲ್ಲಿ ಮಡಿದಿದ್ದ ಒಂದು ಕಾಲದ ಉಗ್ರ ಲ್ಯಾನ್ಸ್​ ನಾಯ್ಕ್​ ನಜಿರ್​ ವಾನಿಗೆ ಆಶೋಕ ಚಕ್ರ ಗೌರವ

ನವದೆಹಲಿ: ಈ ಬಾರಿಯ 70ನೇ ಗಣರಾಜ್ಯೋತ್ಸವ ದಿನಾಚರಣೆಯಂದು ದೇಶದ ಶೌರ್ಯ ಪ್ರಶಸ್ತಿ ‘ಅಶೋಕ ಚಕ್ರ’ವನ್ನು ಇದೇ ಮೊದಲ ಬಾರಿಗೆ ಕಾಶ್ಮೀರ ಮೂಲದವರೊಬ್ಬರು ಪಡೆಯಲಿದ್ದಾರೆ.

90ರ ದಶಕದಲ್ಲಿ ಉಗ್ರ ಸಂಘಟನೆ ಸೇರಿದ್ದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ, ನಂತರ ಮನಪರಿವರ್ತನೆಗೊಂಡು 2004ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ನವೆಂಬರ್​ನಲ್ಲಿ ನಡೆದ ಉಗ್ರರ ವಿರುದ್ಧ ಎನ್​ಕೌಂಟರ್​ನಲ್ಲಿ ಹುತಾತ್ಮರಾಗಿದ್ದರು. ಕಾರ್ಯಾಚರಣೆ ವೇಳೆ ತೋರಿದ ಶೌರ್ಯ ಗುರುತಿಸಿ ಅವರಿಗೆ ಅಶೋಕ ಚಕ್ರ ನೀಡಲಾಗುತ್ತಿದೆ. ಭಾರತೀಯ ಸೇನೆಯಲ್ಲಿ ನಾಜಿರ್ ವಾನಿ ಸಹಚರರು ಅವರನ್ನು ‘ಫೌಜಿ ತಂಡದ ದಂತಕತೆ’ ಎಂದು ಹೆಮ್ಮೆಯಿಂದ ಸಂಬೋಧಿಸುತ್ತಾರೆ.

ಗುಂಡು ತಗುಲಿದರೂ ಕುಸಿಯಲಿಲ್ಲ

ಶೋಪಿಯಾನ್​ನ ಬಟಾಗುಂಡ್ ಗ್ರಾಮದಲ್ಲಿ ಲಷ್ಕರ್ -ಎ-ತೊಯ್ಬ ಸಂಘಟನೆಯ ಆರು ಉಗ್ರರು ಅಡಗಿರುವ ಮಾಹಿತಿ ಆಧರಿಸಿ ನಾಜಿರ್ ವಾನಿ ಮತ್ತು ಅವರ ಪಡೆ ಕಾರ್ಯಾಚರಣೆಗೆ ಮುಂದಾಗಿತ್ತು. ತಮ್ಮನ್ನು ಭದ್ರತಾ ಪಡೆ ಸುತ್ತುವರಿದಿದೆ ಎಂದು ತಿಳಿದ ಕೂಡಲೇ ಉಗ್ರರು ಗುಂಡು ಮತ್ತು ಗ್ರೆನೇಡ್ ದಾಳಿ ನಡೆಸಿದ್ದರು. ಇದನ್ನು ಲೆಕ್ಕಿಸದೆ ಮುನ್ನುಗ್ಗಿದ್ದ ವಾನಿ, ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದರು. ಬಳಿಕ ಉಳಿದ ಉಗ್ರರು ಅಡಗಿದ್ದ ಮನೆ ಪ್ರವೇಶಿಸಿದ ವಾನಿ ಮೇಲೆ ಗುಂಡಿನ ಮಳೆ ಸುರಿಸಲಾಯಿತು. ಆದರೆ ಕುಸಿದು ನೆಲಕ್ಕೆ ಉರುಳದೆ ದಿಟ್ಟತನದಿಂದ ಉಗ್ರರ ಮೇಲೆ ಪ್ರತಿದಾಳಿ ನಡೆಸಿ ಎರಡನೇ ಉಗ್ರನನ್ನು ಹೊಡೆದುರುಳಿಸಿದ್ದರು. ಎಲ್ಲ ಆರು ಉಗ್ರರನ್ನು ವಾನಿ ಮತ್ತು ಅವರ ತಂಡ ಹತ್ಯೆಗೈದಿತ್ತು. ಆದರೆ ವಾನಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹುತಾತ್ಮರಾದರು. ಅವರಿಗೆ 39 ವರ್ಷವಾಗಿತ್ತು.

17 ಎನ್​ಕೌಂಟರ್​ನಲ್ಲಿ ಭಾಗಿ

ಕಾಶ್ಮೀರದ ಕುಲ್ಗಾಮ್ ಮೂಲದ ನಾಜಿರ್ ವಾನಿ ಸೇನೆ ಸೇರಿದ ಬಳಿಕ ಉಗ್ರ ನಿಗ್ರಹ ಪಡೆ ಇಖ್ವಾನಿ ಮಿಲಿಟಿಯಾದಲ್ಲಿ ನೇಮಕಗೊಂಡರು. ತಮ್ಮ ಸೇವಾವಧಿಯಲ್ಲಿ ಒಟ್ಟು 17 ಬೃಹತ್ ಎನ್​ಕೌಂಟರ್​ಗಳಲ್ಲಿ ಭಾಗಿಯಾದ ಶ್ರೇಯ ಅವರದ್ದಾಗಿದೆ. ಎರಡು ಬಾರಿ ಸೇನಾ ಪದಕ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದರು.

ನಾಜಿರ್ ವಾನಿ ಹೆಜ್ಜೆಗಳು

  • 2004ರಲ್ಲಿ ಉಗ್ರ ಸಂಘಟನೆ ತೊರೆದು ಶರಣಾಗತಿ, ಸೇನೆಗೆ ಸೇರ್ಪಡೆ
  • 2007ರಲ್ಲಿ ಸೇನಾ ಪದಕ
  • 2017ರಲ್ಲಿ 2ನೇ ಬಾರಿ ಸೇನಾ ಪದಕ
  • 2018ರ ನವೆಂಬರ್​ನಲ್ಲಿ ಅಂತಿಮ ಕಾರ್ಯಾಚರಣೆಯಲ್ಲಿ ಭಾಗಿ